ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

84ನೇ ದಿನಕ್ಕೆ ಕಾಲಿಟ್ಟ ಕಾರ್ಮಿಕರ ಧರಣಿ

ತಾತಗುಣಿಯ ಎಸ್‌.ಜೆ.ಎಸ್‌ ಎಂಟರ್‌ಪ್ರೈಸಸ್‌ ಸಂಸ್ಥೆ * 192 ಕಾರ್ಮಿಕರ ವಜಾಗೆ ಖಂಡನೆ
Published : 27 ಸೆಪ್ಟೆಂಬರ್ 2024, 20:07 IST
Last Updated : 27 ಸೆಪ್ಟೆಂಬರ್ 2024, 20:07 IST
ಫಾಲೋ ಮಾಡಿ
Comments

ರಾಜರಾಜೇಶ್ವರಿನಗರ: ತಾತಗುಣಿಯಲ್ಲಿರುವ ಎಸ್‌.ಜೆ.ಎಸ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್ ಕಂಪನಿಯ 192 ಕಾಯಂ ಕಾರ್ಮಿಕರನ್ನು ಕಾನೂನುಬಾಹಿರವಾಗಿ ವಜಾ ಮಾಡಿರುವ ಕ್ರಮವನ್ನು ಖಂಡಿಸಿ ನಡೆಸುತ್ತಿರುವ ಕಾರ್ಮಿಕರ ಧರಣಿ (ಸತ್ಯಾಗ್ರಹ) 84ನೇ ದಿನಕ್ಕೆ ಕಾಲಿಟ್ಟಿದೆ.

ಎಸ್ ಜೆ ಎಸ್ ಕಂಪನಿಯಲ್ಲಿ 1500 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಬಹುತೇಕ ಕಾರ್ಮಿಕರು ಕಾಯಂಗೊಂಡಿದ್ದಾರೆ. ಕೆಲವರನ್ನು ದಿನಗೂಲಿ ಮೇಲೆ ನೌಕರರು ದುಡಿಸಿಕೊಳ್ಳಲಾಗುತ್ತಿದೆ. ಕಂಪನಿಯಲ್ಲಿ ಸಕಾಲಕ್ಕೆ ವೇತನ ನೀಡದಿರುವುದು, ಮಹಿಳಾ ಕಾರ್ಮಿಕರ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿರುವುದು ಸೇರಿದಂತೆ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಲು, ನ್ಯಾಯ ಕೇಳಲು ಕಾರ್ಮಿಕರೆಲ್ಲ ಸೇರಿ ಎಸ್.ಜೆ.ಎಸ್ ಎಂಟಪ್ರೈಸಸ್‌ ಲಿಮಿಟೆಡ್ ಕಾರ್ಮಿಕರ ಸಂಘ ಸ್ಥಾಪಿಸಿಕೊಂಡಿದ್ದಾರೆ. ಆ ಸಂಘದಲ್ಲಿ ಗುರುತಿಸಿಕೊಂಡಿರುವ ಕಾರ್ಮಿಕರನ್ನು ಕಂಪನಿ ಏಕಾಏಕಿ ತೆಗೆದು ಹಾಕಿದ್ದು, ಆ ಕ್ರಮವನ್ನು ಖಂಡಿಸಿ ಕಾರ್ಮಿಕರು ಧರಣಿ ನಡಸುತ್ತಿದ್ದಾರೆ.

1987ರಲ್ಲಿ ಪ್ರಾರಂಭವಾದ ಎಸ್‌.ಜೆ.ಎಸ್‌. ಎಂಟರ್‌ಪ್ರೈಸಸ್‌ ಲಿಮಿಟೆಡ್ ಕಂಪನಿ, ಆರಂಭದಲ್ಲಿ ಕಾರ್ಮಿಕರಿಗೆ 5 ಸಾವಿರ ವೇತನ ನೀಡುತ್ತಿತ್ತು. ಕಂಪನಿ ಬೆಳೆಸಿದ ನೌಕರರಿಗೆ ಸೌಲಭ್ಯಗಳನ್ನು ನೀಡದೆ. ಕಾರ್ಮಿಕರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ’ ಎಂದು ಕಾರ್ಮಿಕರು ದೂರುತ್ತಿದ್ದಾರೆ. ಕಂಪನಿಯ ದೌರ್ಜನ್ಯ, ದಬ್ಬಾಳಿಕೆಯನ್ನು ಪ್ರಶ್ನಿಸಲು ಕಾರ್ಮಿಕರ ಸಂಘ ಸ್ಥಾಪಿಸಿದ್ದರಿಂದ ಕೋಪಗೊಂಡ ಆಡಳಿತ ಮಂಡಳಿ, 192 ಕಾಯಂ ಕಾರ್ಮಿಕರನ್ನು ತೆಗೆದು ಹಾಕಿದೆ ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.

’ಮೂರು ಪಾಳಿಯಲ್ಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಕಾರ್ಖಾನೆಯಲ್ಲಿ ಉತ್ಪನ್ನಗಳಿಗೆ ಬಳಸುವ ರಾಸಾಯನಿಕಗಳು ಕಾರ್ಮಿಕರ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತಿದ್ದು, ಇದನ್ನು ಪ್ರಶ್ನಿಸುವುದಕ್ಕಾಗಿ ಕಾರ್ಮಿಕರ ಸಂಘ ಮಾಡಿಕೊಂಡಿದ್ದೇವೆ. ಇದನ್ನು  ಸಹಿಸದೆ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿರುವುದು ಸರಿಯಲ್ಲ’ ಎಂದು ಕಾರ್ಮಿಕ ಸಂಘದ ರಜನಿಕಾಂತ್, ಹರೀಶ್, ಬಿ.ಸಿ. ಸುನಿಲ್ ಕುಮಾರ್, ವೆಂಕಟರೆಡ್ಡಿ, ಬಾಲಸ್ವಾಮಿ ದೂರಿದರು.

ನ್ಯಾಯಯುತ ಬೇಡಿಕೆಗೆ ಆಗ್ರಹಿಸಿದರೆ, ಕನ್ನಡಿಗ ಕಾರ್ಮಿರನ್ನು ತೆಗೆದುಹಾಕಿ ಗುಜರಾತ್, ಉತ್ತರಪ್ರದೇಶ, ಸಿಕ್ಕಿಂ, ಅಸ್ಸಾಂ, ಮಧ್ಯಪ್ರದೇಶದಿಂದ ದಿನಗೂಲಿ ನೌಕರರನ್ನು ಕರೆತಂದು ನೇಮಕ ಮಾಡಿಕೊಳ್ಳಲು ಕಂಪನಿ ಮುಂದಾಗಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

ಪ್ರತಿಭಟನಾ ನಿರತರ ಆರೋಪಗಳಿಗೆ ಪ್ರತಿಕ್ರಿಯೆ ಕೇಳುವುದಕ್ಕಾಗಿ ಎಸ್‌ಜೆಎಸ್‌ ಕಂಪನಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಅಧಿಕಾರಿ ಉಮಾದೇವಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ, ಅವರು ಕರೆಯನ್ನು ಸ್ವೀಕರಿಸಲಿಲ್ಲ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಭೇಟಿಗೂ ಭದ್ರತಾ ಸಿಬ್ಬಂದಿ ಅವಕಾಶ ಮಾಡಿಕೊಡಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT