ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಮ ಸಮಸ್ಯೆಯಿಂದ ಕರುಳ ಬೇನೆ!

ಹೇರ್‌ಲೈನ್ ಇಂಟರ್‌ನ್ಯಾಷನಲ್ ರಿಸರ್ಚ್ ಆ್ಯಂಡ್ ಟ್ರೀಟ್‌ಮೆಂಟ್ ಸೆಂಟರ್ ಅಧ್ಯಯನ
Published 13 ನವೆಂಬರ್ 2023, 20:06 IST
Last Updated 13 ನವೆಂಬರ್ 2023, 20:06 IST
ಅಕ್ಷರ ಗಾತ್ರ

ಬೆಂಗಳೂರು: ಮೊಡವೆ, ಸೋರಿಯಾಸಿಸ್ ಸೇರಿ ವಿವಿಧ ಚರ್ಮ ಸಂಬಂಧಿ ಸಮಸ್ಯೆ ಇರುವವರಿಗೆ ಕರುಳಿನ ಸಮಸ್ಯೆಯೂ ಕಾಣಿಸಿಕೊಳ್ಳಲಿದೆ. ಈ ಸಮಸ್ಯೆಗಳು ಒಂದಕ್ಕೊಂದು ಪೂರಕವಾಗಿವೆ ಎನ್ನುವುದು ಸಂಸ್ಥೆಯೊಂದರ ಅಧ್ಯಯನದಿಂದ ದೃಢಪಟ್ಟಿದೆ.

ಇಲ್ಲಿನ ಹೇರ್‌ಲೈನ್ ಇಂಟರ್‌ನ್ಯಾಷನಲ್ ರಿಸರ್ಚ್ ಆ್ಯಂಡ್ ಟ್ರೀಟ್‌ಮೆಂಟ್ ಸೆಂಟರ್ ಈ ಬಗ್ಗೆ ಅಧ್ಯಯನ ನಡೆಸಿದೆ. 2021ರ ಜುಲೈ ತಿಂಗಳಿಂದ 2023ರ ಜೂನ್ ತಿಂಗಳ ಅವಧಿಯಲ್ಲಿ ಈ ಕೇಂದ್ರಕ್ಕೆ ಚರ್ಮ ಸಂಬಂಧಿ ಸಮಸ್ಯೆಗಳ ಚಿಕಿತ್ಸೆಗೆ ಭೇಟಿ ನೀಡಿದವರಲ್ಲಿ 2,235 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಇವರ ಕರುಳಿನ ಆರೋಗ್ಯ ತಿಳಿಯಲು ‘ಎಚ್ ಪೈಲೋರಿ’ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ ಶೇ 72 ರಷ್ಟು ಮಂದಿಯಲ್ಲಿ ಕರುಳಿನ ಸಮಸ್ಯೆ ಪತ್ತೆಯಾಗಿದೆ. ಈ ಅಧ್ಯಯನದಿಂದ ‘ಅಟೊಪಿಕ್ ಡರ್ಮಟೈಟಿಸ್’ (ಚರ್ಮದ ದೀರ್ಘಕಾಲದ ಉರಿಯೂತ), ಮೊಡವೆ, ಸೋರಿಯಾಸಿಸ್ ಹಾಗೂ ‘ಎಸ್ಜಿಮಾ’ದಂತಹ (ಚರ್ಮದ ಉರಿಯೂತ) ಸಾಮಾನ್ಯ ಸಮಸ್ಯೆಗೂ ಕರುಳಿನ ಆರೋಗ್ಯಕ್ಕೂ ಸಂಬಂಧವಿದೆ ಎನ್ನುವುದು ತಿಳಿದುಬಂದಿದೆ. 

ಚರ್ಮ ಸಂಬಂಧಿ ಸಮಸ್ಯೆಗಳಿಗೆ ಕೇಂದ್ರದಲ್ಲಿ ಅಧ್ಯಯನಕ್ಕೆ ಒಳಪಟ್ಟವರಲ್ಲಿ ಶೇ 62ರಷ್ಟು ಮಂದಿ ಮಹಿಳೆಯರಾಗಿದ್ದರೆ, ಶೇ 38ರಷ್ಟು ಮಂದಿ ಪುರುಷರಾ ಗಿದ್ದಾರೆ. ಶೇ 80ರಷ್ಟು ಮಂದಿ ಸೋರಿಯಾಸಿಸ್ ಸೇರಿದಂತೆ ಇತರ ಸಾಮಾನ್ಯ ಚರ್ಮದ ಸಮಸ್ಯೆಗಳನ್ನು ಅನುಭವಿಸಿದವರಾಗಿದ್ದಾರೆ. ಇವರಲ್ಲಿ ಬಹುತೇಕರು ಅಜೀರ್ಣ, ಉದರ ಬೇನೆ ಸೇರಿ ಕರುಳಿಗೆ ಸಂಬಂಧಿಸಿದ ತೊಂದರೆ ಎದುರಿಸಿದ್ದಾರೆ.

ಹೆಚ್ಚಿನವರು ಮಧ್ಯ ವಯಸ್ಕರ: ‘ಅಧ್ಯಯನಕ್ಕೆ ಒಳಪಟ್ಟವರಲ್ಲಿ ಶೇ 72ರಷ್ಟು ಮಂದಿ 40 ವರ್ಷದೊಳಗಿನವರಾಗಿದ್ದಾರೆ. ಚರ್ಮದ ಸಮಸ್ಯೆಯು ಅವರ ಜೀವನದ ಗುಣಮಟ್ಟ ಹದಗೆಡಲು ಕಾರಣವಾಗುತ್ತಿದೆ. ಮಹಿಳಾ ರೋಗಿಗಳಲ್ಲಿ ಶೇ 36ರಷ್ಟು ಮಂದಿ ಅನಿಯಮಿತ ಮುಟ್ಟಿನ ಸಮಸ್ಯೆ, ಹಾರ್ಮೋನುಗಳ ಅಸಮತೋಲನೆ ಸೇರಿ ವಿವಿಧ ಸಮಸ್ಯೆ ಹೊಂದಿದ್ದರು. ಇದು ಅನಾರೋಗ್ಯ ಸಮಸ್ಯೆಗಳ ಪರಸ್ಪರ ಸಂಬಂಧವನ್ನು ತೋರಿಸುತ್ತದೆ. ಗರ್ಭಿಣಿಯರು ಹಾಗೂ ಬಾಣಂತಿಯರು ‘ಪ್ರೊಬಯಾಟಿಕ್ ಆಹಾರ’ ಸೇವಿಸಿದಲ್ಲಿ ‘ಎಸ್ಜಿಮಾ’ದಂತಹ ಚರ್ಮ ಸಂಬಂಧಿ ಸಮಸ್ಯೆಯ ಅಪಾಯ ತಗ್ಗಿಸಲು ಸಾಧ್ಯ ಎನ್ನುವುದು ಅಧ್ಯಯನದಿಂದ ದೃಢಪಟ್ಟಿದೆ’ ಎಂದು ಕೇಂದ್ರದ ಚರ್ಮರೋಗ ತಜ್ಞೆ ಡಾ.ಕಲಾ ವಿಮಲ್ ತಿಳಿಸಿದರು.

‘ಈ ಅಧ್ಯಯನವು ಚರ್ಮ ಮತ್ತು ಕರುಳಿನ ನಡುವಿನ ಸಂಬಂಧ ಅರ್ಥ ಮಾಡಿಕೊಳ್ಳಲು ಸಹಕಾರಿಯಾಯಿತು. ಇದರಿಂದ ಸುಧಾರಿತ ಚಿಕಿತ್ಸಾ ವಿಧಾನ ಅಳವಡಿಕೆ ಸಾಧ್ಯವಾಗಲಿದೆ’ ಎಂದರು. 

ಪ್ರೊಬಯೋಟಿಕ್ಸ್ ಆಹಾರ

ಸಹಕಾರಿ ‘ಅಧ್ಯಯನಕ್ಕೆ ಒಳಗಾದವರನ್ನು ಎರಡು ಗುಂಪಾಗಿ ವಿಂಗಡಿಸಲಾಗಿತ್ತು. ಒಂದು ಗುಂಪಿಗೆ ಸಾಂಪ್ರದಾಯಿಕ ಜೌಷಧದ ಜತೆಗೆ ಪ್ರೊಬಯೋಟಿಕ್ಸ್ ಆಹಾರ ಒದಗಿಸಲಾಗಿತ್ತು. ಇನ್ನೊಂದು ವರ್ಗಕ್ಕೆ ಔಷಧವನ್ನು ಮಾತ್ರ ನೀಡಲಾಗಿತ್ತು. ಪ್ರೊಬಯೋಟಿಕ್ಸ್ ಆಹಾರ ಸೇವಿಸಿದರಲ್ಲಿ ಚರ್ಮದ ಉರಿಯೂತ ಮತ್ತು ಚರ್ಮ ಕೆಂಪಾಗುವಿಕೆ ಪ್ರಮಾಣ ಶೇ 90ರಷ್ಟು ಕಡಿತವಾಗಿದ್ದನ್ನು ಗಮನಿಸಿದ್ದೇವೆ. ಇದರಿಂದಾಗಿ ಚರ್ಮದ ಆರೋಗ್ಯ ವೃದ್ಧಿಗೆ ಪ್ರೊಬಯೋಟಿಕ್ಸ್ ಆಹಾರ ಸಹಕಾರಿ ಎನ್ನುವುದು ತಿಳಿದುಬಂದಿದೆ’ ಎಂದು ಡಾ.ಕಲಾ ವಿಮಲ್ ವಿವರಿಸಿದರು. ‘ಮೊಡವೆಯಂತಹ ಸಮಸ್ಯೆ ನಿವಾರಣೆಗೆ ಪ್ರೊಬಯೋಟಿಕ್ಸ್ ಆಹಾರ ಸಹಕಾರಿಯಾಗುತ್ತವೆ. ನೈಸರ್ಗಿಕವಾಗಿ ಉತ್ತಮ ಬ್ಯಾಕ್ಟಿರಿಯಾ ಹೊಂದಿರುವ ಆಹಾರಗಳೇ ಪ್ರೊಬಯೋಟಿಕ್ಸ್ ಆಹಾರ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT