ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕೈವಾಕ್‌ | ಸೌಲಭ್ಯ, ಸ್ವಚ್ಛವಾಗಿರದಿದ್ದರೆ ಪರವಾನಗಿ ರದ್ದು: ಬಿಬಿಎಂಪಿ ನೋಟಿಸ್

ಸ್ಕೈವಾಕ್‌ಗಳಲ್ಲಿ ಲಿಫ್ಟ್‌ ಕಾರ್ಯಾಚರಣೆ ಕಡ್ಡಾಯ, ತ್ಯಾಜ್ಯ ಇರುವಂತಿಲ್ಲ: ಡಾ. ತ್ರಿಲೋಕ್‌ ಚಂದ್ರ
Published 20 ನವೆಂಬರ್ 2023, 0:30 IST
Last Updated 20 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿರುವ ಸ್ಕೈವಾಕ್‌ಗಳು ಸ್ವಚ್ಛವಾಗಿರಬೇಕು, ಎಲ್ಲ ಲಿಫ್ಟ್‌ಗಳು ಕಾರ್ಯನಿರ್ವಹಿಸಬೇಕು. ಇದನ್ನು ಪಾಲಿಸದಿದ್ದರೆ ಪರವಾನಗಿ ರದ್ದುಗೊಳಿಸುವುದಾಗಿ ಬಿಬಿಎಂಪಿ ನೋಟಿಸ್‌ ಜಾರಿ ಮಾಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸ್ಕೈವಾಕ್‌ಗಳಲ್ಲಿ ಸಮಸ್ಯೆ, ಲಿಫ್ಟ್‌ಗಳು ಕಾರ್ಯನಿರ್ವಹಿಸದಿರುವುದು ಹಾಗೂ ತ್ಯಾಜ್ಯ ಸುರಿಯುವುದು ಸೇರಿದಂತೆ ಜನರ ಸಂಕಷ್ಟಗಳನ್ನು ‘ಪ್ರಜಾವಾಣಿ’ ಸರಣಿ ವರದಿಯನ್ನು ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿರುವ ಬಿಬಿಎಂಪಿ, ಸ್ಕೈವಾಕ್‌ಗಳನ್ನು ಸ್ವಚ್ಛವಾಗಿ ನಿರ್ವಹಣೆ ಮಾಡಲು ಸೂಚಿಸಿದೆ.

ನಿರ್ಮಾಣ, ಕಾರ್ಯಾಚರಣೆ, ವರ್ಗಾವಣೆ (ಬಿಒಟಿ) ಆಧಾರದಲ್ಲಿ ನಗರದಲ್ಲಿ ಬಹುತೇಕ ಸ್ಕೈವಾಕ್‌ಗಳು ನಿರ್ಮಾಣಗೊಂಡಿವೆ. ಖಾಸಗಿ ಏಜೆನ್ಸಿಗಳು ಸ್ಕೈವಾಕ್‌ ನಿರ್ಮಿಸಿವೆ. ಬಿಬಿಎಂಪಿಗೆ ನೆಲಬಾಡಿಗೆಯನ್ನು ವಾರ್ಷಿಕವಾಗಿ ಪಾವತಿಸುವ ಷರತ್ತಿನ ಮೇರೆಗೆ 10 ವರ್ಷದಿಂದ 30 ವರ್ಷಗಳವರೆಗೆ ಗುತ್ತಿಗೆ ನೀಡಲಾಗಿದೆ. 

ನೋಟಿಸ್‌ ಜಾರಿ: ‘ಸ್ಕೈವಾಕ್‌ಗಳ ನಿರ್ವಹಣೆ ಗುತ್ತಿಗೆ ಹೊಂದಿರುವ ಏಜೆನ್ಸಿಗಳಿಗೆ ಈಗಾಗಲೇ ನೋಟಿಸ್‌ ಜಾರಿ ಮಾಡಲಾಗಿದೆ. ಗುತ್ತಿಗೆ ಷರತ್ತಿನಂತೆ ಸ್ಕೈವಾಕ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಎಸ್ಕಲೇಟರ್‌ ಅಥವಾ ಲಿಫ್ಟ್‌ಗಳು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು ಅವರದ್ದೇ ಜವಾಬ್ಧಾರಿ. ಹೀಗಾಗಿ, ಸಮಸ್ಯೆ ಇರುವ ಸ್ಕೈವಾಕ್‌ಗಳನ್ನು ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗಿದೆ. ಇನ್ನು ಮುಂದೆ ಸಮಸ್ಯೆಗಳು ಮುಂದುವರಿದರೆ ಅವರ ಗುತ್ತಿಗೆ ಅಥವಾ ಪರವಾನಗಿಯನ್ನೇ ರದ್ದು ಮಾಡಲಾಗುತ್ತದೆ’ ಎಂದು ಬಿಬಿಎಂಪಿ ಯೋಜನೆ ವಿಭಾಗ ವಿಶೇಷ ಆಯುಕ್ತ ಡಾ. ತ್ರಿಲೋಕ್‌ ಚಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

₹‌2.16 ಕೋಟಿ ನೆಲಬಾಡಿಗೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಕೈವಾಕ್‌ಗಳನ್ನು ಬಿಒಟಿ ಆಧಾರದಲ್ಲಿ ನಿರ್ಮಿಸಿರುವ ಏಜೆನ್ಸಿಗಳಿಗೆ ನೆಲ ಬಾಡಿಗೆ ನಿಗದಿ ಮಾಡಲಾಗಿದೆ. ಸ್ಕೈವಾಕ್‌ ಅಳತೆ ಆಧಾರದಲ್ಲಿ ಈ ಮೊತ್ತ ವಿಭಿನ್ನವಾಗಿದೆ. ಈ ಸ್ಕೈವಾಕ್‌ಗಳಿಂದ ಬಿಬಿಎಂಪಿಗೆ ವಾರ್ಷಿಕವಾಗಿ ಒಟ್ಟು ₹2.16 ಕೋಟಿ ನೆಲಬಾಡಿಗೆ ಸಂದಾಯವಾಗಬೇಕು.

ಜಾಹೀರಾತು ಶುಲ್ಕ ಬಂದಿಲ್ಲ: ‘ಸ್ಕೈವಾಕ್‌ ನೆಲಬಾಡಿಗೆ ಹಾಗೂ ಅದರ ಮೇಲೆ ಪ್ರದರ್ಶಿಸುವ ಜಾಹೀರಾತಿಗೆ ಶುಲ್ಕವನ್ನೂ ಏಜೆನ್ಸಿಗಳು ಬಿಬಿಎಂಪಿಗೆ ಪಾವತಿಸಬೇಕು. ಆದರೆ, ಹಲವು ವರ್ಷಗಳಿಂದ ಈ ಶುಲ್ಕವನ್ನೇ ಪಾವತಿಸಿಲ್ಲ. ಸ್ವಚ್ಛವಾಗಿಟ್ಟುಕೊಳ್ಳಬೇಕೆಂಬ ಷರತ್ತುಗಳನ್ನೂ ಪಾಲಿಸುತ್ತಿಲ್ಲ. ಈ ಬಗ್ಗೆ ನೋಟಿಸ್‌ ನೀಡಲಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಬಿಬಿಎಂಪಿ ಜುಲೈನಲ್ಲಿ ಮಾಹಿತಿ ನೀಡಿದೆ. ಆದರೆ, ಈವರೆಗೆ ಹಣ ಸಂಗ್ರಹ ಮಾಡುವ ಕ್ರಮವಾಗಿಲ್ಲ’ ಎಂದು ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಅಮರೇಶ್‌ ದೂರಿದರು.

ಬಾಕಿ ವಸೂಲಿಗೆ ಕ್ರಮ: ಸ್ಕೈವಾಕ್‌ ನಿರ್ವಹಣೆ ಮಾಡುತ್ತಿರುವ ಏಜೆನ್ಸಿಗಳಿಂದ ನೆಲಬಾಡಿಗೆ ಹಾಗೂ ಜಾಹೀರಾತು ಶುಲ್ಕವಾಗಿ ಬಿಬಿಎಂಪಿಗೆ ₹25 ಕೋಟಿಗೂ ಹೆಚ್ಚು ಹಣ ಪಾವತಿಯಾಗಬೇಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್, ‘ಈ ಬಗ್ಗೆ ಪರಿಶೀಲನೆ ಆರಂಭಿಸಿದ್ದು, ಬಾಕಿ ಹಣ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

66 ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಒಟ್ಟು ಸ್ಕೈವಾಕ್‌

58 ಬಿಒಟಿ ಮಾದರಿ

5 ಬಿಬಿಎಂಪಿಯಿಂದ ನಿರ್ಮಾಣ

3 ಬಿಡಿಎಯಿಂದ ನಿರ್ಮಾಣ

ಎಲ್ಲೆಲ್ಲಿ ಎಷ್ಟೆಷ್ಟು ಸ್ಕೈವಾಕ್‌? ವಲಯ;ಸಂಖ್ಯೆ ಪೂರ್ವ;25 ಪಶ್ಚಿಮ;17 ದಕ್ಷಿಣ;14 ಮಹದೇವಪುರ;9 ಯಲಹಂಕ;1

₹25.69 ಕೋಟಿ ಬಿಬಿಎಂಪಿಗೆ ಬಾಕಿಯಿರುವ ಸ್ಕೈವಾಕ್‌ ಜಾಹೀರಾತು ಶುಲ್ಕ 

ಸ್ಕೈವಾಕ್‌ ಜಾಹೀರಾತು ಶುಲ್ಕ ಎಲ್ಲಿ ಎಷ್ಟು ಬಾಕಿ? ಸ್ಕೈವಾಕ್‌ ಏಜೆನ್ಸಿ; ಬಾಕಿ ಮೊತ್ತ ಪ್ರಕಾಶ್‌ ಆರ್ಟ್ಸ್‌; ₹5.67 ಕೋಟಿ ವಾಂಟೇಜ್‌ ಅಡ್ವರ್‌ಟೈಸಿಂಗ್‌; ₹6.26 ಕೋಟಿ ಸೈನ್‌ ಪೋಸ್ಟ್‌ ಇಂಡಿಯಾ; ₹1.90 ಕೋಟಿ ಪಯನೀರ್‌ ಪಬ್ಲಿಸಿಟಿ ಕಾರ್ಪೊರೇಷನ್‌; ₹3.99 ಕೋಟಿ ಸ್ಕೈಲೈನ್‌ ಅಡ್ವರ್‌ಟೈಸಿಂಗ್‌; ₹92.17 ಲಕ್ಷ ಸಹಯೋಗ– ಇಂಡಿಯಾ ಕೌನ್ಸಿಲ್‌; ₹4.76 ಕೋಟಿ ಆ್ಯಡ್‌ ಏಜ್‌ ಔಟ್‌ಡೋರ್‌ ಅಡ್ವರ್‌ಟೈಸ್‌ಮೆಂಟ್‌; ₹₹34.08 ಲಕ್ಷ ಜೈವಿನ್‌ ಔಟ್‌ ಡೋರ್‌ ಮೀಡಿಯಾ; ₹25.69 ಲಕ್ಷ ಡಿಸೈನ್‌ 55 ಅಡ್ವರ್‌ಟೈಸ್‌ಮೆಂಟ್‌; ₹27.87 ಲಕ್ಷ ಅಕಾರ್ಡ್‌ ಡಿಸ್‌ಪ್ಲೆ ಸರ್ವೀಸ್‌; ₹18.44 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT