ಶನಿವಾರ, ಫೆಬ್ರವರಿ 27, 2021
30 °C
ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ತೆರವು ಕಾರ್ಯಾಚರಣೆ

86 ಗುಡಿಸಲು ನೆಲಸಮ: ನಿರಾಶ್ರಿತರಾದ ಕೂಲಿ ಕಾರ್ಮಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರು ಪೂರ್ವ ತಾಲ್ಲೂಕಿನ ಎನ್‌ಜಿಇಎಫ್ ಸಮೀಪದ ಕೃಷ್ಣಪ್ಪ ಲೇಔಟ್‌ನಲ್ಲಿ 30 ವರ್ಷಗಳಿಂದ ನಿರ್ಮಿಸಿಕೊಂಡಿದ್ದ 86 ಗುಡಿಸಲುಗಳನ್ನು ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಗುರುವಾರ ಏಕಾಏಕಿ ತೆರವುಗೊಳಿಸಿದ್ದು, ಅಷ್ಟೂ ಕುಟುಂಬಗಳು ಬೀದಿಪಾಲಾಗಿವೆ.

ಪೊಲೀಸ್ ಬೆಂಗಾವಲಿನಲ್ಲಿ ಜೆಸಿಬಿಯೊಂದಿಗೆ ಬಂದ ಅಧಿಕಾರಿಗಳು, ನಿವಾಸಿಗಳ ಕಣ್ಣೆದುರಿನಲ್ಲೇ ಎಲ್ಲ ಗುಡಿಸಲುಗಳನ್ನು ನೆಲಸಮ ಮಾಡಿದರು.

ದಿಢೀರ್ ನಡೆದ ಕಾರ್ಯಾಚರಣೆಯಿಂದ ದಿಕ್ಕು ತೋಚದಾದ ಗುಡಿಸಲು ನಿವಾಸಿಗಳು, ಪಾತ್ರೆ, ಹಾಸಿಗೆ, ಬಟ್ಟೆ ಹಾಗೂ ಇನ್ನಿತರ ವಸ್ತುಗಳನ್ನು ಹೊತ್ತು ಸಾಗಿದರು. ಕಾರ್ಯಾಚರಣೆ ಆರಂಭವಾಗುವ ಹೊತ್ತಿಗೆ (ಬೆಳಿಗ್ಗೆ 11) ಕೆಲವರು ಕೆಲಸಕ್ಕೆ ತೆರಳಿದ್ದರು. ಮಹಿಳೆಯರು ಮತ್ತು ಮಕ್ಕಳು ಮನೆಯಲ್ಲಿದ್ದ ವಸ್ತುಗಳನ್ನು ಉಳಿಸಿಕೊಳ್ಳಲು ಪರದಾಡಿದರು.

ಗುಡಿಸಲು ತೆರವಿಗೆ ಅಡ್ಡಿಯಾದ ನಿವಾಸಿಗಳನ್ನು ಪೊಲೀಸರು ಲಾಠಿ  ಹಿಡಿದು ಬೆದರಿಸಿದರು. ಸಂಜೆ ವೇಳೆಗೆ ಎಲ್ಲ ಗುಡಿಸಲುಗಳನ್ನೂ ಜೆಸಿಬಿ ಮೂಲಕ ನೆಲಸಮ ಮಾಡಲಾಯಿತು. ಮಕ್ಕಳೊಂದಿಗೆ ಬೀದಿಗೆ ತಳ್ಳಿದ ಅಧಿಕಾರಿಗಳಿಗೆ ನಿವಾಸಿಗಳು ಹಿಡಿಶಾಪ ಹಾಕಿ ಕಣ್ಣೀರಿಟ್ಟರು.

‘ಅಕ್ರಮ– ಸಕ್ರಮ ಯೋಜನೆಯಡಿ ಹಕ್ಕುಪತ್ರ ನೀಡಬೇಕು ಎಂದು 30 ವರ್ಷಗಳಿಂದ ಫಾರಂ 50, 53 ಮತ್ತು 57 ಅಡಿಯಲ್ಲಿ ಅರ್ಜಿ ಸಲ್ಲಿಸುತ್ತಾ ಬಂದಿದ್ದೇವೆ. ಯಾವ ಬಡವರನ್ನೂ ಬೀದಿಪಾಲು ಮಾಡಬಾರದು ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮೂಲಕ ಹೋರಾಟ ಮಾಡುತ್ತಿದ್ದೇವೆ. ಅದಕ್ಕಾಗಿ 2018ರಲ್ಲಿ ಉನ್ನತ ಮಟ್ಟದ ಸಮಿತಿಯನ್ನೂ ಸರ್ಕಾರ ನೇಮಿಸಿದೆ. ಆದರೂ ಬಡವರನ್ನು ಬೀದಿಗೆ ತಳ್ಳಲಾಗಿದೆ’ ಎಂದು ಕರ್ನಾಟಕ ಜನಾಂದೋಲನ ಸಂಘಟನೆ ಅಧ್ಯಕ್ಷ ಮರಿಯಪ್ಪ ಬೇಸರ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಚನೆಯಂತೆ ಅಧಿಕಾರಿಗಳು ಬಡವರ ಮೇಲೆ ಈ ದರ್ಪ ತೋರಿದ್ದಾರೆ. ಇದು ಕ್ರೌರ್ಯದ ಪರಮಾವಧಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿರಾಶ್ರಿತರ ಪ್ರತಿಭಟನೆ

ಕೆ.ಆರ್‌.ಪುರ: ಗುಡಿಸಿಲು ತೆರವು ಖಂಡಿಸಿ ಜನಾಂದೋಲನ ಸಂಘಟನೆ ನೇತೃತ್ವದಲ್ಲಿ ನಿರಾಶ್ರಿತರು ಇಲ್ಲಿನ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನೋಟಿಸ್ ಕೂಡ ನೀಡದೆ ಏಕಾಏಕಿ ಗುಡಿಸಲು ನೆಲಸಮ ಮಾಡಿರುವುದು ಸರ್ಕಾರದ ದೌರ್ಜನ್ಯ ಎಂದು  ದೂರಿದರು.

‘ಪೂರ್ವ ತಾಲ್ಲೂಕು ಭೈರಸಂದ್ರ ಗ್ರಾಮದ ಸರ್ವೇನಂ  83ರಲ್ಲಿ ಬಿಇಎಂಎಲ್ ಜಾಗದಲ್ಲಿ 450ಕ್ಕೂ ಹೆಚ್ಚು ಕುಟುಂಬಗಳು ಮೂವತ್ತು ವರ್ಷಗಳಿಂದ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿದ್ದವು. 450 ಕುಟುಂಬಗಳ ಪೈಕಿ ಮಾರತ್ತಹಳ್ಳಿಯಲ್ಲಿ 300 ಕುಟುಂಬಗಳಿಗೆ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಮನೆ ನಿರ್ಮಿಸಿಕೊಡಲಾಗಿದೆ. ಉಳಿದವರಿಗೆ ಮನೆಗಳಿಲ್ಲ. ಈಗ ಏಕಾಏಕಿ ತೆರವು ಮಾಡಲಾಗಿದೆ’ ಎಂದು ಆರೋಪಿಸಿದರು.

‘ವಯಸ್ಸಾದವರು, ಮಹಿಳೆಯರು ಮತ್ತು ಮಕ್ಕಳು ಎನ್ನುವುದನ್ನೂ ನೋಡದೆ ಗುಡಿಸಲಿನಿಂದ ಎಳೆದು ಹಾಕಿದ್ದಾರೆ. ತಡೆಯಲು ಯತ್ನಿಸಿದರೆ ಪೊಲೀಸರು ಹಲ್ಲೆಗೆ ಯತ್ನಿಸಿದರು. ಪ್ರಕರಣ ದಾಖಲಿಸುವ ಬೆದರಿಕೆ ಹಾಕಿದರು’ ಎಂದು ನಿರಾಶ್ರಿತರಾದ ನಾಗಮ್ಮ ಅಳಲು ತೋಡಿಕೊಂಡರು.

‘ನಿರಾಶ್ರಿತರಿಗೆ ಬದಲಿ ವ್ಯವಸ್ಥೆ ಮಾಡಬೇಕು. ಮಾರತ್ತಹಳ್ಳಿಯಲ್ಲಿ ನಿರ್ಮಿಸಿರುವ ಮನೆಗಳನ್ನು ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು