ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ ಲೈಟಿಂಗ್‌: ಮೊದಲ ಹಂತಕ್ಕೆ ಏಪ್ರಿಲ್‌ ಗಡುವು

ಯೋಜನೆ ಅನುಷ್ಠಾನ ಆಮೆಗತಿ * ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ಬಿಬಿಎಂಪಿ ಆಯುಕ್ತ
Last Updated 18 ಅಕ್ಟೋಬರ್ 2020, 19:23 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೊಳಿಸುತ್ತಿರುವ ಚತುರ ಬೀದಿ ದೀಪವ್ಯವಸ್ಥೆ (ಸ್ಮಾರ್ಟ್‌ ಲೈಟಿಂಗ್‌) ಕಾಮಗಾರಿಯ ಮೊದಲ ಹಂತವನ್ನು 2021ರ ಏಪ್ರಿಲ್‌ ಒಳಗೆ ಪೂರ್ಣಗೊಳಿಸದಿದ್ದರೆ ಕ್ರಮಕೈಗೊಳ್ಳುವುದಾಗಿ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.

ಮೊದಲ ಹಂತದಲ್ಲಿ ಅಳವಡಿಸಬೇಕಾದ 20 ಸಾವಿರ ಎಲ್‌ಇಡಿ ಬೀದಿದೀಪಗಳನ್ನು ಡಿಸೆಂಬರ್ ಒಳಗೆ ಅಳವಡಿಸುವಂತೆಯೂ ಆಯುಕ್ತರುಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನಗರದಲ್ಲಿ ಈಗಿರುವ ಸೋಡಿಯಂ ದೀಪಗಳ ಬದಲು ಎಲ್‌ಇಡಿ ಬೀದಿದೀಪಗಳನ್ನು ಅಳವಡಿಸಲು ಶಾಪೂರ್ಜಿ ಪಲ್ಲೋಂಜಿ, ಎಸ್‌ಎಂಎಸ್‌ ಇನ್‌ಫ್ರಾಸ್ಟ್ರಕ್ಚರ್‌ ಮತ್ತು ಸಮುದ್ರ ಎಲೆಕ್ಟ್ರಾನಿಕ್‌ ಸಿಸ್ಟಮ್‌ ಪ್ರೈವೇಟ್‌ ಲಿಮಿಟೆಡ್‌ಗಳ ಒಕ್ಕೂಟಕ್ಕೆ (ಎಸ್ಕೊ) 2019ರಲ್ಲಿ ಗುತ್ತಿಗೆ ನೀಡಲಾಗಿತ್ತು. ಈ ಯೋಜನೆಯನ್ನು ವಿನ್ಯಾಸ ರಚನೆ, ಹಣಕಾಸು ವ್ಯವಸ್ಥೆ, ನಿರ್ಮಾಣ, ನಿರ್ವಹಣೆ ಮತ್ತು ವರ್ಗಾವಣೆ (ಡಿಎಫ್‌ಬಿಒಟಿ) ಮಾದರಿಯಲ್ಲಿ ಜಾರಿಗೆ ತರಲಾಗುತ್ತಿದೆ.

ಐದು ಹಂತಗಳಲ್ಲಿ ಜಾರಿಗೊಳಿಸಬೇಕಾದ ಈ ಯೋಜನೆಯ ಪ್ರಕಾರ, ಹೊಸ ಬೀದಿದೀಪ ಅಳವಡಿಕೆಗೆ ಗುತ್ತಿಗೆ ಸಂಸ್ಥೆಗೆ 30 ತಿಂಗಳುಗಳ ಕಾಲಾವಕಾಶ ನೀಡಲಾಗಿತ್ತು. ಹತ್ತು ವರ್ಷಗಳ ಅವಧಿಗೆ ಬೀದಿ ದೀಪಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಹೊಣೆಯನ್ನೂ ವಹಿಸಲಾಗಿದೆ. ನಗರದಲ್ಲಿ 4.85 ಲಕ್ಷ ಸಾಂಪ್ರದಾಯಿಕ ಬೀದಿದೀಪಗಳನ್ನು ಬದಲಿಸಿ ಎಲ್‌ಇಡಿ ಬೀದಿದೀಪಗಳನ್ನು ಈ ಒಕ್ಕೂಟವು ಅಳವಡಿಸಿ ಅವುಗಳ ನಿರ್ವಹಣೆ ಮಾಡಬೇಕಿದೆ. ಆದರೆ, ಎಲ್‌ಇಡಿ ದೀಪಗಳನ್ನು ಅಳವಡಿಸುವ ವಿಚಾರದಲ್ಲಿ ಒಂದೂವರೆ ವರ್ಷದಲ್ಲಿ ನಿರೀಕ್ಷಿತ ಪ್ರಗತಿ ಆಗಿರಲಿಲ್ಲ. ಈ ಬಗ್ಗೆ ಈ ಹಿಂದಿನ ಮೇಯರ್ ಸರ್ಕಾರಕ್ಕೆ ಪತ್ರ ಬರೆದು ಗುತ್ತಿಗೆ ರದ್ದುಪಡಿಸುವಂತೆಯೂ ಒತ್ತಾಯಿಸಿದ್ದರು.

ಯೋಜನೆ ವಿಳಂಬವಾಗುತ್ತಿರುವ ಬಗ್ಗೆ ಬಿಬಿಎಂಪಿ ಆಯುಕ್ತರುಎಸ್ಕೊ ಪ್ರಮುಖರನ್ನು ಕರೆಸಿಕೊಂಡು ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಸ್ಥೆಯು ನಗರದಲ್ಲಿ ಈಗಾಗಲೇ 64 ಸಾವಿರ ಬೀದಿದೀಪಗಳ ಜಂಟಿ ಸರ್ವೆ ನಡೆಸಿದೆ. ಒಪ್ಪಂದ ಷರತ್ತು ಪಾಲಿಸದ ಬಗ್ಗೆಯೂ ಆಯುಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಗುತ್ತಿಗೆ ಕಂಪನಿಯವರು ಸರಿಯಾಗಿ ಕಾಮಗಾರಿ ಅನುಷ್ಠಾನ ಮಾಡುತ್ತಿರಲಿಲ್ಲ. ಹಾಗಾಗಿ ಕರೆದು ಎಚ್ಚರಿಕೆ ನೀಡಿದ್ದೇವೆ. ಸ್ಮಾರ್ಟ್‌ ಲೈಟಿಂಗ್‌ ವ್ಯವಸ್ಥೆ ಜಾರಿಯಾದರೆ ಅನೇಕ ಪ್ರಯೋಜನಗಳಿವೆ. ಈ ಯೋಜನೆಯಲ್ಲಿ ಬಿಬಿಎಂಪಿ ಯಾವುದೇ ಹೂಡಿಕೆ ಮಾಡುತ್ತಿಲ್ಲ. ಪ್ರಸ್ತುತ ಎಷ್ಟು ವಿದ್ಯುತ್‌ ಬಳಕೆ ಆಗುತ್ತಿದೆ ಎಂಬುದನ್ನು ಮೂಲವಾಗಿಟ್ಟುಕೊಂಡು ಎಲ್‌ಇಡಿ ದೀಪ ಬಳಕೆಯಿಂದಾಗುವ ವಿದ್ಯುತ್‌ ಉಳಿತಾಯ ಮೊತ್ತದಲ್ಲಿ ಕಂಪನಿಗೆ ಪಾವತಿ ಮಾಡುತ್ತೇವೆ’ ಎಂದು ಆಯುಕ್ತರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೇಂದ್ರೀಕೃತ ನಿಯಂತ್ರಣ ವ್ಯವಸ್ಥೆ ನಿರ್ಮಿಸಲಿದೆ. ಒಂದು ದೀಪದಲ್ಲಿ ಲೋಪ ಕಾಣಿಸಿಕೊಂಡರೂ ತಕ್ಷಣ ತಿಳಿಯಬಹುದಾದ ವ್ಯವಸ್ಥೆ ಹಾಗೂ ಬೀದಿ ದೀಪಗಳ ಬೆಳಕಿನ ತೀವ್ರತೆಯನ್ನು ದೂರದಿಂದಲೇ ನಿಯಂತ್ರಿಸುವ ವ್ಯವಸ್ಥೆಯೂ ಇದರಲ್ಲಿ ಇರಲಿದೆ. ಯಾವುದಾದರೂ ಬೀದಿ ದೀಪ ಉರಿಯದಿದ್ದರೆ ಗುತ್ತಿಗೆದಾರರಿಗೆ ದಂಡ ವಿಧಿಸುವುದಕ್ಕೆ ಅವಕಾಶ ಇದೆ’ ಎಂದರು.

ವಿದ್ಯುತ್‌ ಬಿಲ್‌: ತಿಂಗಳ ಉಳಿಕೆ ₹ 17 ಕೋಟಿ

ನಗರದಲ್ಲಿ ಎಲ್‌ಇಡಿ ಬೀದಿದೀಪ ಅಳವಡಿಸುವಿಕೆಗೆ ಹಾಗೂ ಅವುಗಳ ನಿರ್ವಹಣೆಗೆ ಎಸ್ಕೊ ಒಟ್ಟು ₹ 800 ಕೋಟಿ ಹೂಡಿಕೆ ಮಾಡಲಿದೆ. ಎಲ್‌ಇಡಿ ಬಲ್ಬ್‌ಗಳ ಬಳಕೆಯಿಂದ ಶೇ 85ರಷ್ಟು ವಿದ್ಯುತ್‌ ಉಳಿತಾಯವಾಗಲಿದೆ. ಬಿಬಿಎಂಪಿಗೆ ಪ್ರತಿ ತಿಂಗಳ ವಿದ್ಯುತ್‌ ಬಿಲ್‌ನಲ್ಲಿ ₹ 17 ಕೋಟಿ ಉಳಿಯಲಿದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ₹ 13.5 ಕೋಟಿಯನ್ನು ಬಿಬಿಎಂಪಿಯು ಕಂಪನಿಗೆ ಪಾವತಿಸಲಿದೆ.

***

ಎಲ್‌ಇಡಿ ದೀಪಗಳ ಅಳವಡಿಕೆಯಿಂದ ನಗರಕ್ಕೆ ದೂರಗಾಮಿ ಪ್ರಯೋಜನಗಳಾಗಲಿವೆ. ವಿದ್ಯುತ್‌ ಬಿಲ್‌ನಲ್ಲೂ ಭಾರಿ ಉಳಿತಾಯವಾಗಲಿದೆ. ಖರ್ಚಿಲ್ಲದೇ ಆಗುವ ಪ್ರಯೋಜನಗಳಿವು

-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

ಅಂಕಿ-ಅಂಶ

4.85 ಲಕ್ಷ

ನಗರದಲ್ಲಿ ಅಳವಡಿಸಬೇಕಾದ ಎಲ್‌ಇಡಿ ಬಲ್ಬ್‌ಗಳ ಸಂಖ್ಯೆ

₹ 500 ಕೋಟಿ

ಎಲ್‌ಇಡಿ ಬಲ್ಬ್‌ ಅಳವಡಿಕೆಗೆ ತಗಲುವ ವೆಚ್ಚ

₹ 300 ಕೋಟಿ

ಬೀದಿದೀಪಗಳ ನಿರ್ಹವಣೆ ವ್ಯವಸ್ಥೆಗೆ ತಗಲುವ ವೆಚ್ಚ


₹ 240 ಕೋಟಿ

ಬೀದಿದೀಪಗಳ ಸಲುವಾಗಿ ಬಿಬಿಎಂಪಿ ವರ್ಷದಲ್ಲಿ ಪಾವತಿಸುವ ವಿದ್ಯುತ್‌ ಶುಲ್ಕ


₹ 204 ಕೋಟಿ

ಎಲ್‌ಇಡಿ ಬಲ್ಬ್‌ಗಳ ಅಳವಡಿಕೆ ಬಳಿಕ ವರ್ಷವೊಂದಕ್ಕೆ ಉಳಿತಾಯವಾಗುವ ವಿದ್ಯುತ್‌ ಶುಲ್ಕ


51.5 ಕೋಟಿ ಯೂನಿಟ್‌

ಪ್ರತಿ ವರ್ಷ ಬೀದಿದೀಪಗಳ ಸಲುವಾಗಿ ಬಿಬಿಎಂಪಿ ಬಳಸುತ್ತಿರುವ ವಿದ್ಯುತ್‌


44 ಕೋಟಿ ಯೂನಿಟ್‌

ಎಲ್‌ಇಡಿ ಅಳವಡಿಕೆ ಬಳಿಕ ಉಳಿತಾಯವಾಗುವ ವಿದ್ಯುತ್‌

ಪ್ರಯೋಜನಗಳು

* ಬೀದಿದೀಪಗಳ ವಿದ್ಯುತ್‌ ಬಳಕೆಯಲ್ಲಿ ಶೇ 85ರಷ್ಟು ಉಳಿತಾಯ

* ವಿದ್ಯುತ್‌ ಕಂಬದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ, ಮಾಲಿನ್ಯ ಸಂವೇದಕ ಅಳವಡಿಕೆಗೆ ಅವಕಾಶ

* ಪ್ರತಿ ದೀಪಕ್ಕೂ ನಿಸ್ತಂತು ಸಂವೇದಕ ಅಳವಡಿಕೆ

* ಕೇಂದ್ರೀಕೃತ ನಿಯಂತ್ರಣ ವ್ಯವಸ್ಥೆ ಮೂಲಕ ಬೀದಿದೀಪಗಳ ಮೇಲೆ ನಿಗಾ ಸಾಧ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT