ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಉದ್ಯಾನದಲ್ಲಿ ‘ಸ್ಮಾರ್ಟ್‌ ಪಾರ್ಕಿಂಗ್‌ ಕಟ್ಟಡ’

ಜೂನ್‌ ವೇಳೆಗೆ ಕಾರ್ಯಾರಂಭ; ಹೊಸ ತಂತ್ರಜ್ಞಾನ ಅಳವಡಿಕೆಗೆ ₹6.50 ಕೋಟಿ ವೆಚ್ಚ
ಆದಿತ್ಯ ಕೆ.ಎ.
Published 18 ಮಾರ್ಚ್ 2024, 23:30 IST
Last Updated 18 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಿರ್ಮಿಸಿರುವ ‘ಬಹುಮಹಡಿ ಪಾರ್ಕಿಂಗ್‌ ಕಟ್ಟಡ’ ಕೊನೆಗೂ ವಾಹನ ಚಾಲಕರ ಬಳಕೆಗೆ ಲಭ್ಯವಾಗುವ ಕಾಲ ಹತ್ತಿರವಾಗಿದೆ.

ಕಟ್ಟಡವನ್ನು ಗುತ್ತಿಗೆ ಪಡೆದಿರುವ ‘ಪ್ರಿನ್ಸ್‌ ರಾಯಲ್‌ ಪಾರ್ಕಿಂಗ್‌ ಸಲ್ಯೂಷನ್‌ ಕಂಪನಿ’ ತಂತ್ರಜ್ಞಾನ ಅಳವಡಿಕೆಗೆ ಸಂಬಂಧಿಸಿದ ಕೆಲಸ ಆರಂಭಿಸಿದೆ. ಜೂನ್‌ ಮೊದಲ ವಾರದಲ್ಲಿ ವಾಹನಗಳ ಪಾರ್ಕಿಂಗ್‌ಗೆ ಸ್ಥಳ ಲಭ್ಯವಾಗಲಿದೆ.

ಕಟ್ಟಡ ಉದ್ಘಾಟನೆಗೊಂಡರೆ ಕಾಳಿದಾಸ ರಸ್ತೆ, ಕನಕದಾಸ ರಸ್ತೆ, ಶೇಷಾದ್ರಿಪುರ ರಸ್ತೆ, ಗಾಂಧಿನಗರ, ಮೆಜೆಸ್ಟಿಕ್‌, ವಿಧಾನಸೌಧ ಸೇರಿದಂತೆ ಕೇಂದ್ರ ವಲಯದಲ್ಲಿ ವಾಹನಗಳ ಪಾರ್ಕಿಂಗ್‌ ಸಮಸ್ಯೆಗೆ ಮುಕ್ತಿ ಸಿಗುವ ಸಾಧ್ಯತೆಯಿದೆ.

10 ವರ್ಷಗಳ ಅವಧಿಗೆ ಪ್ರಿನ್ಸ್‌ ರಾಯಲ್‌ ಪಾರ್ಕಿಂಗ್‌ ಸಲ್ಯೂಷನ್‌ ಕಂಪನಿ ಗುತ್ತಿಗೆ ಪಡೆದಿದೆ. ಪಾರ್ಕಿಂಗ್ ತಾಣದಲ್ಲಿ ‘ಅಡ್ವಾನ್ಸ್ಡ್‌ ಪಾರ್ಕಿಂಗ್‌ ತಂತ್ರಜ್ಞಾನ’ ಅಳವಡಿಸಲಾಗುತ್ತಿದೆ. ಹೀಗಾಗಿ, ಕಟ್ಟಡದಲ್ಲಿ ‘ಸ್ಮಾರ್ಟ್‌ ಪಾರ್ಕಿಂಗ್‌’ ವ್ಯವಸ್ಥೆ ಜಾರಿಗೆ ಬರಲಿದೆ. ಕೇಬಲ್‌ ಕೆಲಸ ನಡೆಯುತ್ತಿದ್ದು, ಎರಡು ತಿಂಗಳಲ್ಲಿ ಕಾಮಗಾರಿ ಮುಕ್ತಾಯವಾಗಲಿದೆ ಎಂದು ಸಂಸ್ಥೆಯ ಸಿಬ್ಬಂದಿ ಹೇಳುತ್ತಾರೆ.

ನಗರೋತ್ಥಾನ ಯೋಜನೆ ಅಡಿ 2017ರಲ್ಲಿ ಕಟ್ಟಡದ ಕಾಮಗಾರಿಯನ್ನು ಬಿಬಿಎಂಪಿ ಆರಂಭಿಸಿತ್ತು. ₹78 ಕೋಟಿ ಖರ್ಚು ಮಾಡಲಾಗಿತ್ತು. ಎರಡು ವರ್ಷಗಳ ಹಿಂದೆಯೇ ಕಟ್ಟಡದ ಕೆಲಸ ಮುಕ್ತಾಯಗೊಂಡಿದ್ದರೂ ಗುತ್ತಿಗೆದಾರರು ಮುಂದೆ ಬಾರದ ಕಾರಣಕ್ಕೆ ಕಟ್ಟಡವು ಬಳಕೆಗೆ ಲಭ್ಯವಾಗಿರಲಿಲ್ಲ. ಇದನ್ನು ಬಿಬಿಎಂಪಿ, ಗೋದಾಮು ಕೇಂದ್ರವಾಗಿ ಮಾಡಿಕೊಂಡಿತ್ತು. 

ಬೇರೆ ಯಾವ ಮಹಾನಗರದ ಸರ್ಕಾರಿ ಪಾರ್ಕಿಂಗ್‌ ಕಟ್ಟಡಗಳಲ್ಲಿ ಈ ರೀತಿಯ ತಂತ್ರಜ್ಞಾನ ಅಳವಡಿಸಿಲ್ಲ. ‘ಬ್ರ್ಯಾಂಡ್‌ ಬೆಂಗಳೂರು’ ಭಾಗವಾಗಿ ಇಲ್ಲಿ ಹೊಸ ತಂತ್ರಜ್ಞಾನ ಅಳವಡಿಸಲಾಗುತ್ತಿದೆ.
ಕುಮಾರ್‌, ವ್ಯವಸ್ಥಾಪಕ ನಿರ್ದೇಶಕ, ಪ್ರಿನ್ಸ್‌ ರಾಯಲ್‌ ಪಾರ್ಕಿಂಗ್‌ ಸೆಲ್ಯೂಷನ್‌ ಕಂಪನಿ

‘ಪ್ರತಿ ವರ್ಷಕ್ಕೆ ₹1.50 ಕೋಟಿಗೆ ಗುತ್ತಿಗೆ ಪಡೆಯಲಾಗಿದೆ. 6ನೇ ವರ್ಷದಿಂದ ಗುತ್ತಿಗೆಯ ಮೊತ್ತ ಹೆಚ್ಚಳವಾಗಲಿದೆ. ದುಬೈನ ಕೆಲವು ಬಹುಮಹಡಿ ಕಟ್ಟಡದಲ್ಲಿ ಅಳವಡಿಕೆ ಮಾಡಿರುವ ತಂತ್ರಜ್ಞಾನವನ್ನೇ ಇಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಇದರಿಂದ ವಾಹನಗಳ ಪಾರ್ಕಿಂಗ್ ಸುಲಭವಾಗಲಿದೆ. ಫ್ಯಾಸ್ಟ್‌ಟ್ಯಾಗ್‌ ಸೇರಿದಂತೆ ಮೂರು ಮಾದರಿಯಲ್ಲಿ ವಾಹನ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗುವುದು. ಚಾಲಕರ ಭಾವಚಿತ್ರ ಸಹಿತ ರಶೀದಿ ನೀಡಲಾಗುವುದು. ಕಟ್ಟಡದ ಒಳಕ್ಕೆ ವಾಹನ ಪ್ರವೇಶಿಸುತ್ತಿದ್ದಂತೆ ಖಾಲಿ ಇರುವ ಸ್ಥಳವನ್ನು ‘ಡಿಜಿಟಲ್‌ ಸ್ಕ್ರೀನ್‌’ನಲ್ಲಿ ತೋರಿಸಲಾಗುವುದು. ಆ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಬಹುದು. ಮತ್ತೊಂದು ಫಲಕದಲ್ಲಿ ಪಾರ್ಕಿಂಗ್‌ ಮಾಡಿರುವ ವಾಹನಗಳ ಸಂಖ್ಯೆ ಪ್ರದರ್ಶಿಸಲಾಗುವುದು’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಮಾರ್ಟ್‌ ಪೋಲ್‌ ಅಳವಡಿಕೆ:

ಕೆ.ಆರ್‌.ವೃತ್ತ, ಮೆಜೆಸ್ಟಿಕ್‌, ಪೋತಿಸ್‌ ಸಿಗ್ನಲ್‌ನಲ್ಲಿ ‘ಸ್ಮಾರ್ಟ್‌ ಪೋಲ್‌’ ಅಳವಡಿಕೆ ಮಾಡಲಾಗುವುದು. ಅಲ್ಲಿ ಪಾರ್ಕಿಂಗ್‌ ಸ್ಥಳದ ಮಾಹಿತಿ ಹಾಗೂ ಕಟ್ಟಡದಲ್ಲಿ ಪಾರ್ಕಿಂಗ್‌ ಅವಕಾಶವಿದೆಯೇ ಎಂಬ ಮಾಹಿತಿಯು ದಿನದ 24 ಗಂಟೆಯೂ ಪ್ರದರ್ಶನವಾಗುತ್ತಿರುತ್ತದೆ. ಪ್ರತಿ ಐದು ಸೆಕೆಂಡ್‌ಗಳಿಗೆ ಒಮ್ಮೆ ವಾಹನಗಳ ಮಾಹಿತಿ ಅಪ್‌ಡೇಟ್‌ ಆಗಲಿದೆ ಎಂದು ವಿವರಿಸಿದರು.

‘ಕಟ್ಟಡದ ಐದು ಸ್ಥಳಗಳಲ್ಲಿ ಎಸ್‌ಒಎಸ್‌(ತುರ್ತು ಸಹಾಯಕ್ಕಾಗಿ) ಬಟನ್‌ ಅಳವಡಿಕೆ ಮಾಡಲಾಗುತ್ತಿದೆ. ಚಾಲಕಿಯರಿಗೆ ತೊಂದರೆಯಾದರೆ ಆ ಬಟನ್‌ ಒತ್ತಿದರೆ, ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನೆರವು ನೀಡಲಿದ್ದಾರೆ. ಹತ್ತಿರದ ಪೊಲೀಸ್‌ ಠಾಣೆಗೂ ಮಾಹಿತಿ ರವಾನೆ ಆಗಲಿದೆ. ಈ ಎಲ್ಲ ವ್ಯವಸ್ಥೆಗೆ ಅಂದಾಜು ₹6.50 ಕೋಟಿ ವೆಚ್ಚವಾಗುತ್ತಿದೆ’ ಎಂದು ಹೇಳಿದರು.

‘ಕಟ್ಟಡದ ಚಾವಣಿಯಲ್ಲಿ ಸೋಲಾರ್‌ ಪ್ಯಾನಲ್‌ ಅಳವಡಿಸಲಾಗಿದ್ದು, ಉತ್ಪಾದನೆಯಾಗುವ ವಿದ್ಯುತ್‌ ಅನ್ನು ಕಟ್ಟಡಕ್ಕೆ ಬಳಸಿಕೊಂಡು ಹೆಚ್ಚುವರಿ ವಿದ್ಯುತ್‌ ಅನ್ನು ಬೆಸ್ಕಾಂ ಗ್ರಿಡ್‌ಗೆ ಪೂರೈಸಲಾಗುವುದು. ಇದರ ನಿರ್ವಹಣೆ ಮಾತ್ರ ಬಿಬಿಎಂಪಿ ವ್ಯಾಪ್ತಿಗೆ ಒಳಪಡಲಿದೆ’ ಎಂದು ಸಿಬ್ಬಂದಿ ಹೇಳುತ್ತಾರೆ.

ಉಚಿತ ಬಸ್‌ ವ್ಯವಸ್ಥೆ

ವಾಹನ ನಿಲುಗಡೆ ಮಾಡಿದ ಬಳಿಕ ದೂರದ ಸ್ಥಳಕ್ಕೆ ತೆರಳುವುದಾದರೂ ಹೇಗೆ ಎಂಬ ಚಿಂತೆ ಚಾಲಕರನ್ನು ಕಾಡುವುದು ಸಾಮಾನ್ಯ. ಇದಕ್ಕೆ ಗುತ್ತಿಗೆ ಪಡೆದ ಕಂಪನಿಯೇ ಪರಿಹಾರ ಕಂಡುಕೊಂಡಿದೆ. ಮೂರು ಸ್ಥಳಗಳಿಗೆ ಉಚಿತವಾಗಿ ವಾಹನ ವ್ಯವಸ್ಥೆ ಮಾಡಲು ಮುಂದಾಗಿದೆ. ವಿಧಾನಸೌಧ ಮೆಜೆಸ್ಟಿಕ್‌ ಹಾಗೂ ಪೋತಿಸ್‌ಗೆ ಉಚಿತ ವಾಹನ ಸೌಕರ್ಯ ಇರಲಿದೆ ಎಂದು ಸಿಬ್ಬಂದಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT