ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಸಮಾನತೆ ಅರಿಯದೆ ಸಾಮಾಜಿಕ ನ್ಯಾಯ ಗೊತ್ತಾಗದು: ನಾಗಮೋಹನದಾಸ್‌

Published 15 ಜೂನ್ 2024, 3:32 IST
Last Updated 15 ಜೂನ್ 2024, 3:32 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದಲ್ಲಿ ಜಾತಿ ಅಸಮಾನತೆಯೂ ಸೇರಿ, ಎಲ್ಲ ಅಸಮಾನತೆಗಳನ್ನು ಅರ್ಥ ಮಾಡಿಕೊಂಡರಷ್ಟೇ ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ ಅರ್ಥವಾಗಲು ಸಾಧ್ಯ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ತಿಳಿಸಿದರು.

ರಾಷ್ಟ್ರೀಯ ಕಾನೂನು ಶಾಲೆಯ ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರವು ಸಮಾಜ ಕಲ್ಯಾಣ ಇಲಾಖೆ, ಬಾಬು ಜಗಜೀವನರಾಂ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ‘ಸಾಮಾಜಿಕ ನ್ಯಾಯ ನಾಯಕತ್ವ ತರಬೇತಿ’ ಬಗ್ಗೆ ಹಮ್ಮಿಕೊಂಡಿರುವ ಎರಡು ದಿನಗಳ ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ನ್ಯಾಯ ಅರ್ಥವಾದರೆ ಸಂವಿಧಾನ ಅರ್ಥವಾಗುತ್ತದೆ. ನಮ್ಮ ಸಂವಿಧಾನದಲ್ಲಿ ಬುದ್ಧನ ಧರ್ಮ ಮಾರ್ಗ, ಬಸವಣ್ಣನ ಸಮಾನತೆಯ ಮಾರ್ಗ, ಗಾಂಧೀಜಿಯವರ ಅಹಿಂಸಾ ಮಾರ್ಗ ಮತ್ತು ಅಂಬೇಡ್ಕರ್‌ ಅವರ ಸಾಮಾಜಿಕ ನ್ಯಾಯದ ಮಾರ್ಗದ ಪ್ರಭಾವವಿದೆ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದಲ್ಲಿ ಎಲ್ಲರೂ ಸಮಾನವಾಗಿ ಭಾಗವಹಿಸುವ ಅವಕಾಶವನ್ನು ಸಂವಿಧಾನ ಕಲ್ಪಿಸಿಕೊಟ್ಟಿದೆ ಎಂದು ವಿವರಿಸಿದರು.

ಬಾಬು ಜಗಜೀವನರಾಂ ಸಂಶೋಧನಾ ಸಂಸ್ಥೆಯ ನಿರ್ದೇಶಕ ಯು.ಚಂದ್ರನಾಯಕ್ ಮಾತನಾಡಿ, ‘ಡಾ.ಬಾಬು ಜಗಜೀವನರಾಂ ಸಂಶೋಧನೆ ಸಂಸ್ಥೆವತಿಯಿಂದ ಈ ಸಮುದಾಯಗಳಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ವಿವಿಧ ತರಬೇತಿಗಳನ್ನು ನೀಡಿ ಉದ್ಯೋಗ ಪಡೆದುಕೊಳ್ಳುವಂತೆ ಮಾಡಲಾಗುತ್ತಿದೆ’ ಎಂದು ವಿವರಿಸಿದರು.

ರಾಷ್ಟ್ರೀಯ ಕಾನೂನು ಶಾಲೆಯ ಕಾರ್ಮಿಕ ಅಧ್ಯಯನ ಕೇಂದ್ರ ನಿರ್ದೇಶಕ ಬಾಬು ಮ್ಯಾಥ್ಯೂ ಮಾತನಾಡಿ, ‘ಸಂವಿಧಾನವನ್ನು ನಾಶಮಾಡಲು ಒಳ ಸಂಚುಗಳು ನಡೆಯುತ್ತಿವೆ. ಸಂವಿಧಾನ ರಕ್ಷಣೆಗಾಗಿ ಹಲವಾರು ಕಾರ್ಯಾಗಾರಗಳನ್ನು ಹಮ್ಮಿಕೊಂಡಾಗ ಸಾಮಾನ್ಯ ಜನರನ್ನು ತಲುಪಲು ಸಾಧ್ಯ’ ಎಂದರು.

ಮೈಸೂರು ವಿಭಾಗದ 10 ಜಿಲ್ಲೆಗಳಿಂದ 120 ಜನ ಸಾಮಾಜಿಕ ಕಾರ್ಯಕರ್ತರು ಮತ್ತು ವಕೀಲರು ಈ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಎನ್.ಸಿ.ಡಿ.ಎಚ್.ಆರ್‌ನ ಸಿದ್ದರಾಜು, ಎಸ್‌ಸಿಎಸ್‌ಪಿ–ಟಿಎಸ್‌ಪಿ ನೋಡಲ್ ಏಜೆನ್ಸಿ ಸಲಹೆಗಾರ ಬಿ.ಟಿ.ವೆಂಕಟೇಶ್, ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅರುಣ್ ಚಕ್ರವರ್ತಿ, ಕಾರ್ಯಾಗಾರದ ಸಂಯೋಜಕ ಆರ್.ವಿ. ಚಂದ್ರಶೇಖರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT