ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಎರಡು ಬೈಕ್‌ಗಳ ನಡುವೆ ಡಿಕ್ಕಿ, ಸೈನಿಕ–ಯುಟ್ಯೂಬರ್ ಸಾವು

Published 29 ಅಕ್ಟೋಬರ್ 2023, 15:39 IST
Last Updated 29 ಅಕ್ಟೋಬರ್ 2023, 15:39 IST
ಅಕ್ಷರ ಗಾತ್ರ

ಬೆಂಗಳೂರು: ಬಳ್ಳಾರಿ ರಸ್ತೆಯಲ್ಲಿರುವ ಬಿಎಸ್‌ಎಫ್‌ ಕ್ಯಾಂಪಸ್‌ ಬಳಿ ಎರಡು ಬೈಕ್‌ಗಳ ನಡುವೆ ಶನಿವಾರ ರಾತ್ರಿ ಅಪಘಾತ ಸಂಭವಿಸಿದ್ದು, ಸೈನಿಕ ಹಾಗೂ ಯುಟ್ಯೂಬರ್‌ ಮೃತಪಟ್ಟಿದ್ದಾರೆ.

‘ತಮಿಳುನಾಡಿನ ಸುಧಾಕರ್ (41) ಹಾಗೂ ಕೋಲಾರದ ಗಿರೀಶ್ (32) ಮೃತರು. ಇಬ್ಬರೂ ಪ್ರತ್ಯೇಕ ಬೈಕ್‌ಗಳಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ಅಪಘಾತ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಯಲಹಂಕ ಸಂಚಾರ ಪೊಲೀಸರು ಹೇಳಿದರು.

‘ಬಿಎಸ್‌ಎಫ್‌ನಲ್ಲಿ ಕೆಲಸ ಮಾಡುತ್ತಿದ್ದ ಸುಧಾಕರ್, ಯಲಹಂಕ ಕ್ಯಾಂಪಸ್‌ನಲ್ಲಿದ್ದರು. ಮೃತ ಗಿರೀಶ್, ಯುಟ್ಯೂಬ್‌ನಲ್ಲಿ ‘ಗಣಿ 07’ ಚಾನೆಲ್ ಹೊಂದಿದ್ದರು. ರಾಯಲ್ ಎನ್‌ಫೀಲ್ಡ್‌ ಬೈಕ್‌ನಲ್ಲಿ ಸುತ್ತಾಡಿ ವಿಡಿಯೊ ಚಿತ್ರೀಕರಿಸಿ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು’ ಎಂದು ತಿಳಿಸಿದರು.

ಮುಖಾಮುಖಿ ಡಿಕ್ಕಿ: ‘ಸೈನಿಕ ಸುಧಾಕರ್ ಅವರು ಬಿಎಸ್‌ಎಫ್‌ ಕ್ಯಾಂಪಸ್‌ನ 2ನೇ ಪ್ರವೇಶದ್ವಾರದಿಂದ ಹೊರಗೆ ಬಂದು ಮುಖ್ಯ ರಸ್ತೆಯತ್ತ (ಬಳ್ಳಾರಿ ರಸ್ತೆ) ಸಾಗಿದ್ದರು. ಗಿರೀಶ್ ಅವರು ಸ್ನೇಹಿತನ ಜೊತೆ ಬಾಗಲೂರು ವೃತ್ತದಿಂದ ಬೆಂಗಳೂರಿಗೆ ಬರುತ್ತಿದ್ದರು. ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದವು’ ಎಂದು ಹೇಳಿದರು.

‘ಅಪಘಾತದಿಂದ ಮೂವರು ಸವಾರರು, ಬೈಕ್‌ ಸಮೇತ ರಸ್ತೆಯಲ್ಲಿ ಹಾರಿ ಬಿದ್ದಿದ್ದರು. ಸುಧಾಕರ್ ಹಾಗೂ ಗಿರೀಶ್, ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ. ಗಿರೀಶ್ ಸ್ನೇಹಿತ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದರು.

‘ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಜೊತೆಗೆ, ಸವಾರರು ಹೆಲ್ಮೆಟ್ ಧರಿಸಿರಲಿಲ್ಲವೆಂದು ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT