ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿಗಾಗಿ ಅಪ್ಪನನ್ನು ಕೊಲ್ಲಲು ₹ 1 ಕೋಟಿ ಸುಪಾರಿ ಕೊಟ್ಟ ಪುತ್ರ!

Last Updated 27 ಫೆಬ್ರವರಿ 2023, 22:30 IST
ಅಕ್ಷರ ಗಾತ್ರ

ಬೆಂಗಳೂರು: ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎನ್. ನಾರಾಯಣಸ್ವಾಮಿ (70) ಎಂಬುವವರ ಕೊಲೆ ಪ್ರಕರಣದ ಸಂಬಂಧ ಮಗ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

‘ಕಾವೇರಪ್ಪ ಬಡಾವಣೆ ನಿವಾಸಿ ನಾರಾಯಣಸ್ವಾಮಿ ಅವರನ್ನು ಫೆ. 13ರಂದು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಮಗ ಮಣಿಕಂಠ ಅಲಿಯಾಸ್ ಮಣಿ (30), ಹೊಸಕೋಟೆ ನಡುವತ್ತಿಯ ಎನ್‌.ಎಂ. ಶಿವಕುಮಾರ್ ಅಲಿಯಾಸ್ ಶಿವ (24) ಹಾಗೂ ಅನುಗೊಂಡನಹಳ್ಳಿಯ ಟಿ. ಆದರ್ಶ ಅಲಿಯಾಸ್ ಬೆಂಕಿ (26) ಎಂಬುವವರನ್ನು ಬಂಧಿಸಲಾಗಿದೆ’ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಎಸ್‌. ಗಿರೀಶ್ ತಿಳಿಸಿದರು.

‘ರಿಯಲ್ ಎಸ್ಟೇಟ್ ಉದ್ಯಮಿ ನಾರಾಯಣಸ್ವಾಮಿ, 28 ಫ್ಲ್ಯಾಟ್‌ಗಳನ್ನು ಒಳಗೊಂಡ ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್ ಸಮುಚ್ಚಯ ನಿರ್ಮಿಸಿದ್ದರು. ಅದರಲ್ಲೇ ಒಂದು ಫ್ಲ್ಯಾಟ್‌ನಲ್ಲಿ ಅವರು ವಾಸವಿದ್ದರು’ ಎಂದು ಹೇಳಿದರು.

ಪತ್ನಿಯ ಕೊಂದು ಜೈಲಿಗೆ: ‘ನಾರಾಯಣಸ್ವಾಮಿ ಅವರಿಗೆ ನಾಲ್ವರು ಪುತ್ರಿಯರಿದ್ದಾರೆ. ಮಣಿಕಂಠ ಒಬ್ಬನೇ ಮಗ. ಈತ ಬಿ.ಕಾಂ ಪದವೀಧರನಾಗಿದ್ದು, 2013ರಲ್ಲಿ ಪತ್ನಿಯನ್ನು ಕೊಂದಿದ್ದ. ಈ ಪ್ರಕರಣದಲ್ಲಿ ಜೈಲು ಸೇರಿ, ಜಾಮೀನು ಮೇಲೆ ಹೊರಬಂದಿದ್ದ’ ಎಂದು ಗಿರೀಶ್ ತಿಳಿಸಿದರು.

‘ಮಗನ ಜೀವನ ಸರಿಪಡಿಸಲು ಮುಂದಾಗಿದ್ದ ತಂದೆ, ಆತನಿಗೆ ಅರ್ಚನಾ ಎಂಬುವರನ್ನು ಎರಡನೇ ಮದುವೆ ಮಾಡಿಸಿದ್ದರು. ಅರ್ಚನಾ ಜೊತೆಗೂ ಮಣಿ ಗಲಾಟೆ ಮಾಡಲಾರಂಭಿಸಿದ್ದ. ಕೆಲ ದಿನಗಳ ಹಿಂದೆಯಷ್ಟೇ ಚಾಕುವಿನಿಂದ ಇರಿದು ಅರ್ಚನಾ ಅವರನ್ನು ಕೊಲ್ಲಲು ಯತ್ನಿಸಿದ್ದ. ಈ ಪ್ರಕರಣದಲ್ಲಿ ಈತ ಪುನಃ ಜೈಲು ಸೇರಿದ್ದ’ ಎಂದು ಹೇಳಿದರು.

‘ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅರ್ಚನಾ ನೋವಿಗೆ ಸ್ಪಂದಿಸಿದ್ದ ನಾರಾಯಣಸ್ವಾಮಿ, ‘ಒಂದು ಫ್ಲ್ಯಾಟ್‌ ನೀಡುತ್ತೇನೆ’ ಎಂದು ಭರವಸೆ ನೀಡಿದ್ದರು. ಈ ವಿಷಯ ಗೊತ್ತಾಗುತ್ತಿದ್ದಂತೆ ಸಿಟ್ಟಾಗಿದ್ದ ಮಣಿಕಂಠ, ‘ಎಲ್ಲ ಆಸ್ತಿಯನ್ನು ಬೇರೆಯವರಿಗೆ ದಾನ ಮಾಡುತ್ತಿದ್ದೀಯಾ? ಆಸ್ತಿಯನ್ನು ನನ್ನ ಹೆಸರಿಗೆ ಮಾಡು’ ಎಂದು ತಂದೆಗೆ ಹೇಳಿದ್ದ. ಅದಕ್ಕೆ ತಂದೆ ಒಪ್ಪಿರಲಿಲ್ಲ’ ಎಂದರು.

ಆಸ್ತಿಗಾಗಿ ಕೊಲೆ ಸಂಚು: ‘ತಾನೊಬ್ಬನೇ ಮಗ. ತಂದೆಯನ್ನು ಕೊಂದರೆ ಎಲ್ಲ ಆಸ್ತಿ ತನ್ನ ಪಾಲಾಗುತ್ತದೆಂದು ಮಣಿ ಅಂದುಕೊಂಡಿದ್ದ. ಜೈಲಿನಲ್ಲಿ ಪರಿಚಯವಾಗಿದ್ದ ಶಿವ ಹಾಗೂ ಆದರ್ಶ ಜೊತೆ ಸೇರಿ ತಂದೆ ಕೊಲ್ಲಲು ಸಂಚು ರೂಪಿಸಿದ್ದ’ ಎಂದು ಡಿಸಿಪಿ ಹೇಳಿದರು.

‘ಆರೋಪಿಗಳಿಗೆ ಮುಂಗಡವಾಗಿ ₹ 1 ಲಕ್ಷ ನೀಡಿದ್ದ ಮಣಿ, ತಂದೆಯನ್ನು ಕೊಂದ ನಂತರ ₹ 15 ಲಕ್ಷ ನೀಡುವುದಾಗಿ ಹೇಳಿದ್ದ. ಬಳಿಕ, ಹಂತ ಹಂತವಾಗಿ ₹ 1 ಕೋಟಿ ನಗದು, 1 ಫ್ಲ್ಯಾಟ್ ಹಾಗೂ ಕಾರು ಕೊಡುವುದಾಗಿ ಭರವಸೆ ನೀಡಿದ್ದ’ ಎಂದು ಗಿರೀಶ್ ತಿಳಿಸಿದರು.

‘ಸೊಸೆ ಅರ್ಚನಾ ಹೆಸರಿಗೆ ಫ್ಲ್ಯಾಟ್‌ ನೋಂದಣಿ ಮಾಡಿಸಲು ಕೆ.ಆರ್.ಪುರ ಉಪ ನೋಂದಣಾಧಿಕಾರಿ ಕಚೇರಿಗೆ ಹೊರಟಿದ್ದ ವೇಳೆಯಲ್ಲಿ ನಾರಾಯಣಸ್ವಾಮಿ ಮೇಲೆ ಶಿವ ಹಾಗೂ ಸಹಚರ ದಾಳಿ ಮಾಡಿದ್ದರು. ಮಚ್ಚಿನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ, ಆದರ್ಶ್ ಹಾಗೂ ಶಿವನ ಬಗ್ಗೆ ಸುಳಿವು ಸಿಕ್ಕಿತ್ತು. ಇಬ್ಬರನ್ನೂ ವಿಚಾರಿಸಿದಾಗ ಮಗನೇ ಪ್ರಮುಖ ಆರೋಪಿ ಎಂಬುದು ತಿಳಿಯಿತು‘ ಎಂದು ಹೇಳಿದರು.

‘ಬಂಧಿತ ಶಿವ ವಿರುದ್ಧ ವಿವಿಧ ಠಾಣೆಗಳಲ್ಲಿ 9 ಪ್ರಕರಣ ದಾಖಲಾಗಿವೆ. ಆದರ್ಶ ವಿರುದ್ಧ ತಿರುಮಲಶೆಟ್ಟಿಹಳ್ಳಿ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿರುವುದು ಗೊತ್ತಾಗಿದೆ’ ಎಂದು ಡಿಸಿಪಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT