ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಜನ್ಯ ಪ್ರಕರಣ: ಕೆಆರ್‌ಎಸ್‌ ಪಕ್ಷದ ಪಾದಯಾತ್ರೆ ಸೆ.8ರಂದು ಬೆಂಗಳೂರಿಗೆ ಪ್ರವೇಶ

Published 6 ಸೆಪ್ಟೆಂಬರ್ 2023, 14:05 IST
Last Updated 6 ಸೆಪ್ಟೆಂಬರ್ 2023, 14:05 IST
ಅಕ್ಷರ ಗಾತ್ರ

ಬೆಂಗಳೂರು: ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಸೌಜನ್ಯ ಪ್ರಕರಣ ಪ್ರಮುಖ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬೆಳ್ತಂಗಡಿಯಿಂದ ಕೈಗೊಂಡಿರುವ ಪಾದಯಾತ್ರೆಯು ಇದೇ 8ರಂದು ಬೆಂಗಳೂರಿಗೆ ತಲುಪಲಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್‌) ತಿಳಿಸಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಆರ್‌ಎಸ್‌ ರಾಜ್ಯ ಕಾರ್ಯದರ್ಶಿ ಮಂಜುನಾಥ ಎಸ್., ‘ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಈ ಪ್ರಕರಣದ ನ್ಯಾಯಾಂಗ ತನಿಖೆ ನಡೆಸಿ, ಆರೋಪಿಗಳಿಗೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಆಗಸ್ಟ್‌ 26ರಿಂದ ಬೆಳ್ತಂಗಡಿಯಿಂದ ಬೆಂಗಳೂರಿಗೆ ಕೆಆರ್‌ಎಸ್‌ ಪಕ್ಷ ಪಾದಯಾತ್ರೆ ಕೈಗೊಂಡಿದೆ’ ಎಂದು ಮಾಹಿತಿ ನೀಡದರು.

‘14 ದಿನಗಳಲ್ಲಿ ಸುಮಾರು 330 ಕಿ.ಮೀ ಪಾದಯಾತ್ರೆಯು ಧರ್ಮಸ್ಥಳ– ಉಜಿರೆ– ಚಾರ್ಮಾಡಿ– ಕೊಟ್ಟಿಗೆಹಾರ– ಮೂಡಿಗೆರೆ– ಬೇಲೂರು– ಹಾಸನ ಮಾರ್ಗವಾಗಿ ಶುಕ್ರವಾರ ಬೆಂಗಳೂರು ತಲುಪಲಿದೆ. ಅಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಯಲಿದೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಕಳೆದ 10 ವರ್ಷಗಳಿಂದ ಈಚೆಗೆ ನಡೆದ ಮಹಿಳಾ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಶೇ 1.18ರಷ್ಟು ಅಪರಾಧಿಗಳಿಗೆ ಮಾತ್ರ ಶಿಕ್ಷೆಯಾಗಿದೆ. ಇಂತಹ ಪ್ರಕರಣಗಳ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದಲ್ಲಿ ಮಕ್ಕಳ ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ಶೀಘ್ರ ವಿಲೇವಾರಿಗೆ ವಿಶೇಷ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಸೌಜನ್ಯ ಸುರಕ್ಷಾ ಆಯೋಗವನ್ನು ಸ್ಥಾಪಿಸಬೇಕು. ರಾಜ್ಯದಲ್ಲಿ ಸಕ್ರಿಯವಾಗಿರುವ ಮಾನವ ಕಳ್ಳಸಾಗಣಿಕೆಯನ್ನು ನಿಯಂತ್ರಿಸಬೇಕು. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 40 ಸಾವಿರ ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯವೇ ಮಾಹಿತಿ ಬಿಡುಗಡೆಗೊಳಿಸಿದೆ’ ಎಂದರು.

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿಗೆ ಆತ್ಮಹತ್ಯೆ ಸೇರಿ ನೂರಾರು ಅಸಹಜ ಸಾವಿನ ಪ್ರಕರಣಗಳು ದಾಖಲಾಗುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಆದ್ದರಿಂದ, ಸರ್ಕಾರ ಕೂಡಲೇ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಕೈಗೊಳ್ಳಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT