ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪೆಲ್‌ ಬೀ... ಶಬ್ದಗಳೊಂದಿಗೆ ಸರಸ

Last Updated 19 ಸೆಪ್ಟೆಂಬರ್ 2018, 20:04 IST
ಅಕ್ಷರ ಗಾತ್ರ

ಬೆಂಗಳೂರು: ಸ್ಪೆಲ್‌ ಬೀ... ಕೂಟದಲ್ಲಿ ವಿದ್ಯಾರ್ಥಿಗಳು ಶಬ್ದಗಳೊಂದಿಗೆ ಸರಸವಾಡಿದರು.

ಹೊಸ ಶಬ್ದ, ಒಂದು ಶಬ್ದದೊಳಗೆ ಅಡಗಿರುವ ಇನ್ನೊಂದು ಶಬ್ದ, ಅಕ್ಷರಗಳ ವಿನ್ಯಾಸ, ಅವುಗಳ ಉಚ್ಚಾರ ಇತ್ಯಾದಿಗಳ ಆಟದಲ್ಲಿ ವಿದ್ಯಾರ್ಥಿಗಳು ಪೂರ್ಣ ತೊಡಗಿಕೊಂಡು ಖುಷಿಪಟ್ಟರು.

ಒಂದೊಂದು ಸವಾಲು ಬಿಡಿಸಿದಾಗಲೂ ಇಡೀ ಸಭಾಂಗಣದಲ್ಲಿ ವಿದ್ಯಾರ್ಥಿಗಳ ಕೂಗು, ಕೇಕೆ ಜೋರಾಗಿ ಕೇಳಿಸಿತು.

– ಇದು ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆ ಇಲ್ಲಿನ ಬಾಲಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ಪೆಲ್‌ ಬೀ ಸ್ಪರ್ಧೆಯ ನೋಟ. ಆಟವನ್ನು ಸಂತ ಜೋಸೆಫ್‌ ಕಾಲೇಜಿನ ಇಂಗ್ಲಿಷ್‌ ಪ್ರಾಧ್ಯಾಪಕ ಅರುಲ್ ಮಣಿ ನಿರ್ವಹಿಸಿದರು. ಸ್ಪೆಲ್‌ ಬೀಯ ವಿಷಯಗಳ ಆಯ್ಕೆ, ಇಡೀ ಸ್ಪರ್ಧೆಯ ವಿನ್ಯಾಸವೂ ಅವರದ್ದೇ ಆಗಿತ್ತು.

ಸಾಮಾನ್ಯ ಸ್ಪೆಲ್‌ ಬೀ ಸ್ಪರ್ಧೆಗಳಲ್ಲಿ ಸ್ಪರ್ಧಿಗಳು ದೊಡ್ಡ ಪ್ರಮಾಣದ ಶಬ್ದಗಳನ್ನು ಉಚ್ಚರಿಸಲು ಹೇಳಲಾಗುತ್ತದೆ. ಇದರಲ್ಲಿ ವಿವಿಧ ಸ್ವರೂಪದ ಕಠಿಣ ಸವಾಲುಗಳಿರುತ್ತವೆ. ಆದರೆ, ಈ ಸ್ಪರ್ಧೆ ಮಾತ್ರ ತೀರಾ ಭಿನ್ನವಾಗಿತ್ತು. ಶಬ್ದವೊಂದರಲ್ಲಿರುವ ಸಮಸ್ಯೆ ಬಿಡಿಸುವ ಸಾಮರ್ಥ್ಯವನ್ನು ಗುರುತಿಸಲಾಗುತ್ತದೆ. ಮಾತ್ರವಲ್ಲ ಕಲಿಕೆಯ ಹೊಸ ಅವಕಾಶಗಳು, ಮೋಜಿನ ಚಟುವಟಿಕೆಗಳೂ ಇದರಲ್ಲಿದ್ದವು.

ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳು ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಮೊದಲ ಸುತ್ತಿನಲ್ಲಿ ಸಾಮಾನ್ಯ ಪ್ರಶ್ನಾವಳಿಗಳನ್ನು ಎರಡೂ ವಿಭಾಗಗಳಿಗೆ ನೀಡಲಾಗಿತ್ತು. ಶಬ್ದವೊಂದರ ಅಕ್ಷರ, ದೋಷ ಪರೀಕ್ಷಿಸುವುದು (ಸ್ಪೆಲ್ಲಿಂಗ್‌ ಚೆಕ್‌), ಸಮಾನಾರ್ಥಕ ಶಬ್ದಗಳು, ಶಬ್ದಗಳ ಮರುಹೊಂದಾಣಿಕೆ, ಚಿತ್ರಗಳಿಗೆ ಸರಿಹೊಂದುವಂತೆ ಶಬ್ದಗಳನ್ನು ಜೋಡಿಸುವುದು ಇತ್ಯಾದಿ ಅಂಶಗಳನ್ನು ಪ್ರಶ್ನಾವಳಿ ಒಳಗೊಂಡಿತ್ತು.

ಹಲವು ಸವಾಲುಗಳು ಕಠಿಣವಾಗಿದ್ದವಾದರೂ ಅವುಗಳನ್ನು ಬಗೆಹರಿಸಲು ಪ್ರೇಕ್ಷಕರೂ ಧ್ವನಿಗೂಡಿಸಿದರು.

‘ಮೂರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಸ್ವಲ್ಪ ಕಠಿಣವೇ ಅನಿಸುವ ಪ್ರಶ್ನೆಗಳನ್ನು ನೀಡಲಾಗಿತ್ತು. ಎಂಥ ಕಠಿಣ ಸಂದರ್ಭದಲ್ಲಿಯೂ ಮಕ್ಕಳಿಂದ ಉತ್ತಮ ಪ್ರತಿಕ್ರಿಯೆಯೇ ವ್ಯಕ್ತವಾಯಿತು. ಕಠಿಣ ಪದಗಳ ಉಚ್ಚಾರಕ್ಕಿಂತ ಸಮಸ್ಯೆ ಬಗೆಹರಿಸುವ ವಿಭಾಗಕ್ಕೆ ಮಕ್ಕಳು ಹೆಚ್ಚು ಒಲವು ತೋರಿದರು’ ಎಂದು ನಿರ್ವಾಹಕಅರುಲ್ ಮಣಿ ಹೇಳಿದರು.

ವಾಸ್ತವವಾಗಿ ಅಂತಿಮ ಸುತ್ತಿಗೆ ಸೀನಿಯರ್‌ ಮತ್ತು ಜೂನಿಯರ್ ವಿಭಾಗಗಳಲ್ಲಿ ತಲಾ 8 ಜನ ಆಯ್ಕೆಯಾಗಬೇಕಿತ್ತು. ಆದರೆ, ಇಲ್ಲಿ ವಿದ್ಯಾರ್ಥಿಗಳು ಸಮಾನ ದಕ್ಷತೆ ಪ್ರದರ್ಶಿಸಿದ ಕಾರಣ ಪ್ರತಿ ಗುಂಪಿಗೆ 9 ಜನರನ್ನು ಸೇರಿಸಬೇಕಾಯಿತು.

ಫಲಿತಾಂಶ:ಕಿರಿಯರ ವಿಭಾಗದಲ್ಲಿ ಅನುಶ್ರೀ ಮೈತ್ರಾ 7ನೇ ತರಗತಿ ಬಿಜಿಎಸ್‌ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ (ಪ್ರಥಮ), ಮೃಣಾಲಿನಿ, 7ನೇ ತರಗತಿ ಮಹಿಳಾ ಸೇವಾ ಸಮಾಜ ಶಾಲೆ (ದ್ವಿತೀಯ), ಗೌರಿ ಪ್ರದೀಶ್‌, 6ನೇ ತರಗತಿ, ಎಚ್‌ಎಎಲ್‌ ಜ್ಞಾನಜ್ಯೋತಿ ಶಾಲೆ (ತೃತೀಯ), ಮಹಮದ್‌ ಸಾದ್‌ ಉರ್‌ ರೆಹಮಾನ್‌ 6ನೇ ತರಗತಿ ದೆಹಲಿ ಪಬ್ಲಿಕ್‌ ಸ್ಕೂಲ್‌, ದಕ್ಷಿಣ (ಸಮಾಧಾನಕರ ಬಹುಮಾನ).

ಹಿರಿಯರ ವಿಭಾಗ: ಪ್ರೀತಮ್‌ ಆರ್‌., 9ನೇ ತರಗತಿ, ರೇಯಾನ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ (ಪ್ರಥಮ), ಚಂದನ್‌ ಯು. ಹಂದೆ, 8ನೇ ತರಗತಿ, ಎಚ್‌.ಎ.ಎಲ್ ಜ್ಞಾನಜ್ಯೋತಿ ಶಾಲೆ (ದ್ವಿತೀಯ), ಶಾರ್ವರಿ ಪಿ.ಬಿ., 8ನೇ ತರಗತಿ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ ಕೋರಮಂಗಲ (ತೃತೀಯ), ಅರ್ಜುನ್‌ ರವಿಶಂಕರ್‌, 10ನೇ ತರಗತಿ ಸೈಂಟ್‌ ಥಾಮಸ್‌ ಪಬ್ಲಿಕ್‌ ಸ್ಕೂಲ್‌ (ಸಮಾಧಾನಕರ ಬಹುಮಾನ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT