ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧ್ಯಾತ್ಮಿಕ ಸತ್ಯಗಳನ್ನು ನಾಶ ಮಾಡಲು ಸಾಧ್ಯವಿಲ್ಲ: ಸಕಲಮಾ

Published 28 ಮೇ 2024, 13:11 IST
Last Updated 28 ಮೇ 2024, 13:11 IST
ಅಕ್ಷರ ಗಾತ್ರ

ಬೆಂಗಳೂರು: ನಮ್ಮ ಆಧ್ಯಾತ್ಮಿಕ ಸತ್ಯಗಳು ಚಿರಕಾಲ ಇರುವಂಥದ್ದು. ಕಾಲ ಬದಲಾದಂತೆ ಅವು ಬದಲಾದ ಭಾಷೆಯಲ್ಲಿ, ಸರಳೀಕರಣವಾಗುತ್ತಾ ಜನರಿಗೆ ಇಂದೂ ತಲುಪುತ್ತಿವೆ. ಅದನ್ನಿನ್ನೂ ನಾವು ಕಳೆದುಕೊಂಡಿಲ್ಲ. ಯಾರು ಏನೇ ಪ್ರಯತ್ನ ಮಾಡಿದರೂ ಇದನ್ನು ನಾಶ ಮಾಡಲು ಸಾಧ್ಯವಿಲ್ಲ ಎಂದು ಹಿಮಾಲಯದ ಯೋಗಿ ಸ್ವಾಮಿ ರಾಮ ಅವರ ಶಿಷ್ಯೆ ಹಾಗೂ ಗುರು ಸಕಲಮಾ ಹೇಳಿದ್ದಾರೆ.

ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಪುಸ್ತಕದ ಇಂಗ್ಲೀಷ್‌ ಹಾಗೂ ಕನ್ನಡ ಆತ್ಮಚರಿತ್ರೆಯ ಮುಖಪುಟ ಮತ್ತು ಯೂಟ್ಯೂಬ್ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಧ್ಯಾತ್ಮದ ಬಗ್ಗೆ ಸಮಾಜದಲ್ಲಿ ಇರುವ ತಪ್ಪು ತಿಳಿವಳಿಕೆ ಹಾಗೂ ಅಂಜಿಕೆಗಳಿಂದಾಗಿ ಅವನ್ನು ಮೊದಲಿನಷ್ಟು ಮೌಲ್ಯಯುತವಾಗಿ ನಮಗೆ ಉಳಿಸಿಕೊಳ್ಳಲಾಗಿಲ್ಲ ಎಂದರು.

ಬದುಕಿನ ಪಯಣದಲ್ಲಿ ಗುರುವಿನ ಸ್ಥಾನ ದೊಡ್ಡದು. ನಾನು, ನನ್ನದು ಎಂಬುದನ್ನು ಬಿಟ್ಟಾಗ ಗುರು ಸಿಗುತ್ತಾನೆ. ಗುರುವಿನ ಅನ್ವೇಷಣೆಯಲ್ಲಿ ನಾವಿದ್ದೇವೆ ಎಂಬುದು ಅನೇಕ ಸಾರಿ ನಮಗೆ ಅರಿವೇ ಇರುವುದಿಲ್ಲ. ಅದಕ್ಕಾಗಿಯೇ, ಅರಿವೇ ಗುರುವು ಗುರುವೇ ಅರಿವು. ಗುರು ಸಿಕ್ಕ ಮೇಲೆ ಕೆಲವರಿಗೆ ಅರಿವು ಸಿಕ್ಕರೆ, ಇನ್ನು ಕೆಲವರಿಗೆ ಅರಿವಾಗಿ ಗುರು ಬೇಕು ಅನಿಸುತ್ತದೆ ಎಂದು ಹೇಳಿದರು.

ಪುರಾಣದ ಕತೆಗಳನ್ನು ಕೇಳಿ ಬೆಳೆದಿರುವ ನಾವೆಲ್ಲ, ಅವಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ಇದ್ದುಬಿಡುತ್ತೇವೆ. ಅವನ್ನೆಲ್ಲ ಕತೆಗಳಾಗಿ ಕೇಳುತ್ತೇವೆ. ಆದರೆ, ಶ್ರದ್ಧೆಯಿಂದ ನೀವು ಈ ಲೋಕಕ್ಕೆ ಬಂದರೆ, ಇವು ಕೇವಲ ಕತೆಗಳಲ್ಲ, ಅಧ್ಯಾತ್ಮಿಕ ಸತ್ಯಗಳು ಎಂಬುದು ನಿಮಗೆ ಗೋಚರವಾಗಬಹುದು. ನೀವು ಬಯಸಿದಲ್ಲಿ, ಈ ಪುಸ್ತಕದಲ್ಲಿ ಬಂದಿರುವ ಋಷಿಮುನಿಗಳನ್ನೆಲ್ಲ ಈಗಲೂ ನೀವು ನಿತ್ಯ ಜೀವನದಲ್ಲಿ ಭೇಟಿ ಮಾಡಬಹುದು. ಋಷಿಮುನಿಗಳೆಲ್ಲ ಈಗಲೂ ನಮ್ಮನ್ನು ಪೊರೆಯುತ್ತಿದ್ದಾರೆ. ಈ ಪುಸ್ತಕದ ಮೂಲಕ ಹಲವು ಸತ್ಯಗಳನ್ನು ನಾನು ವಾಸ್ತವಿಕ ನೆಲೆಗಟ್ಟಿನಲ್ಲಿ ಹೇಳಲು ಪ್ರಯತ್ನಪಟ್ಟಿದ್ದೇನೆ ಎಂದು ಅವರು ಹೇಳಿದರು.

ಸಕಲಮಾ ಅವರ ಯುಟ್ಯೂಬ್‌ಗೆ ಚಾಲನೆ ನೀಡಿದ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಮಾತನಾಡಿ, ಒಳ ಹೂರಣ ಇದ್ದರೆ ಸಿನಿಮಾವಿರಲಿ, ಪುಸ್ತಕವಿರಲಿ ಗೆದ್ದೇ ಗೆಲ್ಲುತ್ತದೆ ಎಂಬುದು ನಾನು ಕಾಂತಾರದಿಂದ ಕಲಿತ ಪಾಠ ಎಂದರು.

ಪುಸ್ತಕ ಬರೆಯುವುದೂ ಕೂಡಾ ಸಾಕಷ್ಟು ಶ್ರಮ ಬೇಡುವ ಕೆಲಸ. ಸಿನಿಮಾದ ಕುತೂಹಲಕ್ಕಾಗಿ ಟ್ರೈಲರ್‌ ಬಿಡುಗಡೆ ಮಾಡುವಂತೆ, ಪುಸ್ತಕದ ಬಗ್ಗೆ ಕುತೂಹಲ ಹೆಚ್ಚಿಸಲು, ಮುಖಪುಟ ಅನಾವರಣದಂತಹ ಕಾರ್ಯಕ್ರಮಗಳು ಸ್ವಾಗತಾರ್ಹ ಎಂದು ನುಡಿದರು.

ಪತ್ರಕರ್ತ ಜೋಗಿ ಮಾತನಾಡಿ, ಜೀವನದಲ್ಲಿ ನಾವು ಕಳೆದುಕೊಳ್ಳುವುದು ಅಪನಂಬಿಕೆಯಿಂದ. ನಮ್ಮಲ್ಲಿ ಅಪನಂಬಿಕೆಯಿದೆ ಎಂದರೆ ಅದು ನಮ್ಮ ವ್ಯಕ್ತಿತ್ವದ ದೋಷವೇ ಹೊರತು ಗುರುವಿನ ದೋಷವಲ್ಲ. ಒಂದು ಕತೆಯೊಳಗೆ ಇಳಿಯಲಾಗದಿದ್ದರೆ ಅದು ಆ ಕಥನದ ದೋಷವಲ್ಲ, ಆ ಕಥನವನ್ನು ಸ್ವೀಕರಿಸುವ ಅನುಭವದ ಕೊರತೆಯೇ ಕಾರಣ. ಮನುಷ್ಯ ಎಲ್ಲ ದುಃಖಗಳನ್ನೂ, ಸುಖವನ್ನು ಬದುಕಿನಲ್ಲಿ ಅನುಭವಿಸಿದ ಮೇಲೆ ಒಂದು ಹುಡುಕಾಟ ಹಾದಿಯತ್ತ ಹೊರಳುತ್ತಾನೆ. ಈ ಹಾದಿಯಲ್ಲಿ ಸಿಗುವ ಗುರು ಯಾವುದೇ ರೂಪದಲ್ಲಿರಬಹುದು. ಇಂಥ ಸಂದರ್ಭ ನಂಬಿಕೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಯೋಗ ತರಬೇತುದಾರ ಗೌರವ್‌ಪ್ರೀತ್‌ ಸಿಂಗ್‌ ಬಾಜ್ವಾ ಅವರು ಚಂದ್ರಕಲಾ ನಮಸ್ಕಾರ ಪ್ರಸ್ತುತಪಡಿಸಿದರು. ಆಯುರ್ವೇದ ವೈದ್ಯೆ ಹಾಗೂ ನೃತ್ಯವಿದುಷಿ ಡಾ. ಸಾಧನಾಶ್ರೀ ಮತ್ತು ತಂಡದವರಿಂದ ಗುರುವಂದನೆ ನೃತ್ಯ ಪ್ರದರ್ಶಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT