ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಕಡ 40ರಷ್ಟು ಕಮಿಷನ್‌ ಪಡೆದ ಆರೋಪ: ವಿಚಾರಣೆ ನಡೆಸಲು ಸಿಬ್ಬಂದಿ ಕೊರತೆ

Published 17 ಜನವರಿ 2024, 23:22 IST
Last Updated 17 ಜನವರಿ 2024, 23:22 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ ಐದು ಇಲಾಖೆಗಳಲ್ಲಿ ನಡೆದಿರುವ ಕಾಮಗಾರಿ ಗಳಲ್ಲಿ ಶೇಕಡ 40ರಷ್ಟು ಕಮಿಷನ್‌ ಪಡೆದ ಆರೋಪದ ಕುರಿತು ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್ ದಾಸ್ ಆಯೋಗವು ಸಿಬ್ಬಂದಿ ಕೊರತೆಯಿಂದ ಬಿಕ್ಕಟ್ಟಿಗೆ ಸಿಲುಕಿದೆ.

ಮೂರು ತಿಂಗಳಿನಿಂದ ಬೆರಳೆಣಿಕೆಯಷ್ಟು ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಕೆಲಸ ಮಾಡುತ್ತಿರುವ ಆಯೋಗಕ್ಕೆ ಹೆಚ್ಚಿನ ಸಿಬ್ಬಂದಿ ನೇಮಕಕ್ಕೆ ಆರ್ಥಿಕ ಇಲಾಖೆ ತಕರಾರು ಎತ್ತಿದೆ. 57 ಅಧಿಕಾರಿಗಳು, ಸಿಬ್ಬಂದಿಯನ್ನು ಹೊರ ಗುತ್ತಿಗೆ ಆಧಾರದಲ್ಲಿ ನೇಮಿಸಬೇಕೆಂಬ ಆಯೋಗದ ಬೇಡಿಕೆಗೆ ಮನ್ನಣೆ ನೀಡಿಲ್ಲ. ಅರ್ಧ ಕ್ಕಿಂತಲೂ ಕಡಿಮೆ ಸಂಖ್ಯೆಯ ಹುದ್ದೆ
ಗಳಿಗಷ್ಟೇ ಮಂಜೂರಾತಿ ನೀಡಿದೆ.

ಲೋಕೋಪಯೋಗಿ, ಜಲ ಸಂಪನ್ಮೂಲ, ಸಣ್ಣ ನೀರಾವರಿ, ನಗರಾಭಿವೃದ್ಧಿ ಹಾಗೂ ಗ್ರಾಮೀಣಾಭಿ ವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗಳಲ್ಲಿ 2019ರಿಂದ 2023ರ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಆಯೋಗ ವಿಚಾರಣೆ ನಡೆಸುತ್ತಿದೆ. ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಮಾಡಿದ್ದ ಶೇ 40ರಷ್ಟು ಕಮಿಷನ್‌ ಆರೋಪವೂ ತನಿಖೆಯ ಭಾಗವಾಗಿದೆ.

ನಾಗಮೋಹನ್‌ ದಾಸ್‌ ನೇತೃತ್ವದ ವಿಚಾರಣಾ ಆಯೋಗವನ್ನು ನೇಮಿಸಿ 2023ರ ಆಗಸ್ಟ್‌ 25ರಂದು ಆದೇಶ ಹೊರಡಿಸಲಾಗಿತ್ತು. ಸೆಪ್ಟೆಂಬರ್‌ 2ರಿಂದ ಆಯೋಗವು ಕಾರ್ಯನಿರ್ವಹಿಸುತ್ತಿದೆ. ಆರಂಭದಲ್ಲಿ ಏಳು ಮಂದಿಯನ್ನು ಹೊರ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿತ್ತು. ಅಷ್ಟೇ ಸಿಬ್ಬಂದಿಯಲ್ಲಿ ಮೂರು ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿರುವ ಆಯೋಗವು, ದೂರುಗಳ ಪರಿಶೀಲನೆ ಮತ್ತು ವಿಚಾರಣಾ ಕಡತಗಳನ್ನು ತಯಾರಿಸಲಾಗದ ಸ್ಥಿತಿಯಲ್ಲಿದೆ.

ವಿಷಯ ತಜ್ಞರು, ಕಾನೂನು ತಜ್ಞರು, ತನಿಖಾಧಿಕಾರಿ, ಲೆಕ್ಕಪತ್ರ ಅಧೀಕ್ಷಕರು, ಕಚೇರಿ ಸಹಾಯಕರು, ಡೇಟಾ ಎಂಟ್ರಿ ಆಪರೇಟರ್ಸ್‌, ಚಾಲಕರು, ಗುಮಾಸ್ತರು ಸೇರಿದಂತೆ 57 ಹುದ್ದೆಗಳನ್ನು ಸೃಜಿಸುವಂತೆ ನಾಗಮೋಹನ್‌ ದಾಸ್‌ ಅವರು ಸೆಪ್ಟೆಂಬರ್‌ 23ರಂದು ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಈ ಹುದ್ದೆಗಳ ಸೃಜನೆಗೆ ಮಂಜೂರಾತಿ ಕೋರಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದರು.

2024ರ ಜನವರಿ 8ರಂದು ಟಿಪ್ಪಣಿ ಹೊರಡಿಸಿರುವ ಆರ್ಥಿಕ ಇಲಾಖೆ, 24 ಹುದ್ದೆಗಳ ಸೃಜನೆಗೆ ಮಾತ್ರ ಒಪ್ಪಿಗೆ ನೀಡಿದೆ. ಅದರ ಅನುಸಾರ ಲೋಕೋಪಯೋಗಿ ಇಲಾಖೆಯು ಈ ಹುದ್ದೆಗಳನ್ನು ಸೃಜಿಸಿ ಜ. 12ರಂದು ಆದೇಶ ಹೊರಡಿಸಿದೆ. ಮೂವರು ನಿವೃತ್ತ ಮುಖ್ಯ ಎಂಜಿನಿಯರ್‌ಗಳು ಆಯೋಗದಲ್ಲಿ ಹಿರಿಯ ವಿಷಯ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅವರೂ ಸೇರಿದಂತೆ ಐದು ಹುದ್ದೆಗಳ ಸೃಜನೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಒಂದು ಹುದ್ದೆಗಷ್ಟೇ ಮಂಜೂರಾತಿ ನೀಡಲಾಗಿದೆ. ಉಪ ಹಿರಿಯ ವಿಷಯ ತಜ್ಞರಲ್ಲಿ ಮೂರನೇ ಒಂದರಷ್ಟು ಮತ್ತು ಸಹಾಯಕ ವಿಷಯ ತಜ್ಞರಲ್ಲಿ ನಾಲ್ಕನೇ ಒಂದರಷ್ಟು ಹುದ್ದೆಗಳಿಗೆ ಮಾತ್ರ ಒಪ್ಪಿಗೆ ನೀಡಲಾಗಿದೆ.

ಮತ್ತೆ ಪ್ರಸ್ತಾವ: ‘ಆಯೋಗವು ಮಂಜೂರಾತಿ ಕೋರಿದ್ದ ಹುದ್ದೆಗಳ ಸಂಖ್ಯೆಗೂ ಈಗ ಒಪ್ಪಿಗೆ ನೀಡಿರುವ ಹುದ್ದೆಗಳ ಸಂಖ್ಯೆಗೂ ಭಾರಿ ವ್ಯತ್ಯಾಸವಿದೆ. ಬೇಡಿಕೆಯಷ್ಟು ಅಧಿಕಾರಿ, ಸಿಬ್ಬಂದಿ ನೇಮಿಸದಿದ್ದರೆ ಕಾಲಮಿತಿಯಲ್ಲಿ ವಿಚಾರಣೆ ಪೂರ್ಣಗೊಳಿಸುವುದು ಅಸಾಧ್ಯ. ಅಗತ್ಯ ಸಂಖ್ಯೆಯ ಹುದ್ದೆಗಳಿಗೆ ಮಂಜೂರಾತಿ ನೀಡುವಂತೆ ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರಿಗೆ ಮತ್ತೊಮ್ಮೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮೂರು ತಿಂಗಳಿನಿಂದ ವೇತನವಿಲ್ಲ

ಆಯೋಗದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಹಿರಿಯ ವಿಷಯತಜ್ಞರು, ರಿಜಿಸ್ಟ್ರಾರ್, ಗುಮಾಸ್ತರು, ಶೀಘ್ರಲಿಪಿಗಾರರು, ಡಿ ದರ್ಜೆ ನೌಕರರಿಗೆ ಮೂರು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಇದರಿಂದಾಗಿ ಆಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಆಯೋಗದ ಅಧಿಕಾರಿಗಳು, ಸಿಬ್ಬಂದಿ ವೇತನ ಪಾವತಿಗೆ ಎರಡು ಕಂತಿನಲ್ಲಿ ₹ 2.56 ಕೋಟಿ ಅನುದಾನ ಬಿಡುಗಡೆಯಾಗಿದೆ. ಈ ಮೊತ್ತವನ್ನು ಇಲಾಖೆಯ ನಂಬರ್‌ 2ನೇ ಕಟ್ಟಡಗಳ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಶೀಘ್ರದಲ್ಲಿ ವೇತನ ಪಾವತಿಯಾಗಲಿದೆ’ ಎಂದು ವಿಚಾರಣಾ ಆಯೋಗದ ವೇತನ ಪಾವತಿ ಜವಾಬ್ದಾರಿ ಹೊಂದಿರುವ ಲೋಕೋಪಯೋಗಿ ಇಲಾಖೆಯ ದಕ್ಷಿಣ ವಲಯದ ಮುಖ್ಯ ಎಂಜಿನಿಯರ್‌ ಕೆ. ದುರುಗಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕಡತ ಎತ್ತಲೂ ಜನರಿಲ್ಲ

ವಿಚಾರಣಾ ವ್ಯಾಪ್ತಿಯಲ್ಲಿರುವ ಐದು ಇಲಾಖೆಗಳಿಂದ ಸಾವಿರಾರು ಕಡತ ಗಳನ್ನು ಆಯೋಗದ ಕಚೇರಿಗೆ ತರಲಾಗಿದೆ. ಆದರೆ, ಅಲ್ಲಿ ಸಿಬ್ಬಂದಿಯೇ ಇಲ್ಲದ ಕಾರಣದಿಂದ ಕಡತಗಳನ್ನು ಎತ್ತಿಡಲೂ ಸಾಧ್ಯವಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT