ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಪಶ್ಚಿಮ ವಲಯ: ಕೋವಿಡ್ ಸ್ಥಿತಿಗತಿ ಪರಿಶೀಲಿಸಿದ ಅಶ್ವತ್ಥನಾರಾಯಣ

Last Updated 23 ಜುಲೈ 2020, 13:09 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯ ಪಶ್ಚಿಮ ವಲಯದ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರತಿ ವಾರ್ಡ್‌ಗೆ ಒಂದು ಸಹಾಯವಾಣಿ ಆರಂಭಿಸಬೇಕು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ನಗರದ ಪಶ್ಚಿಮ ವಲಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಗುರುವಾರ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಸಲಹೆಗಳನ್ನು ನೀಡಿದರು.

ಪಶ್ಚಿಮ ವಲಯದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿಯೂ ಕೋವಿಡ್‌ ಪರೀಕ್ಷೆ ನಡೆಸುವ ಪ್ರಯೋಗಾಲಯಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಬೇಕು. ಆ್ಯಂಟಿಜನ್ ಪರೀಕ್ಷೆಗೆ ಪ್ರತಿ ವಾರ್ಡ್‌ನಲ್ಲೂ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಸೂಚಿಸಿದರು.

‘ಪಶ್ಚಿಮ ವಲಯದ ಸಹಾಯವಾಣಿಗೆ (080- 68248454) ಕರೆಮಾಡಿ ಪಶ್ಚಿಮ ವಲಯಕ್ಕೆ ಸಂಬಂಧಿಸಿದ ಕೋವಿಡ್‌ ಕುರಿತ ಅಹವಾಲುಗಳನ್ನು ಸಾರ್ವಜನಿಕರು ಹೇಳಿಕೊಳ್ಳಬಹುದು. ಕೋವಿಡ್ ಸಲುವಾಗಿ ಇರುವ 104, 108, 14410, 1912 ಸಂಖ್ಯೆಗಳಿಗೂ ಕರೆ ಮಾಡಬಹುದು. ನಮ್ಮ ಅಧಿಕಾರಿಗಳು ಅಹವಾಲು ಆಲಿಸಲಿದ್ದಾರೆ’ ಎಂದರು.

ಸೋಂಕಿತರನ್ನು ಗುರುತಿಸಿ ಅವರನ್ನು ಕೋವಿಡ್‌ ಆಸ್ಪತ್ರೆಗಳಿಗೆ ಅಥವಾ ಕೋವಿಡ್ ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಮನೇಯಲ್ಲೇ ಆರೈಕೆಗೆ ಒಳಗಾಗಲು ಬಯಸುವವರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು. ಈ ಎಲ್ಲ ಕೆಲಸಗಳನ್ನು ಯುದ್ಧೋಪಾದಿಯಲ್ಲಿ ಮಾಡಬೇಕು ಎಂದು ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕೋವಿಡ್‌ ರೋಗಿಗಳ ಆರೈಕೆಗೆ ಖಾಸಗಿ ಆಸ್ಪತ್ರೆಗಳ ಹಾಸಿಗೆಗಳನ್ನು ಬಳಸಿಕೊಳ್ಳುವ ಬಗ್ಗೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದರೂ ಕೆಲ ಖಾಸಗಿ ಆಸ್ಪತ್ರೆಗಳು ಇನ್ನೂ ಹಾಸಿಗೆಗಳನ್ನು ಕಾಯ್ದಿರಿಸಿಲ್ಲ. ರಾಜಾಜಿನಗರ ಮತ್ತು ಮಹಾಲಕ್ಷ್ಮೀ ಲೇಔಟ್’ಗಳಲ್ಲಿ ಖಾಸಗಿ ಆಸ್ಪತ್ರೆಗಳ ಮಾಲೀಕರು ಹಾಸಿಗೆಗಳನ್ನು ಒದಗಿಸಲು ಒಪ್ಪಿಕೊಂಡಿದ್ದಾರೆ. ಇವುಗಳನ್ನು ಬಳಸಿಕೊಳ್ಳಲು ಕ್ರಮವಹಿಸಬೇಕು ಎಂದರು.

ಪೀಣ್ಯಾದ ಲ್ಯಾಬಿನಲ್ಲಿ ನಿತ್ಯ 250 ಕೋವಿಡ್ ಪರೀಕ್ಷೆಗಳು ನಡೆಯುತ್ತಿವೆ. ಈ ಪ್ರಮಾಣವನ್ನು 1000ಕ್ಕೆ ಹೆಚ್ಚಿಸಬೇಕು. ಪಶ್ಚಿಮ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌಲಭ್ಯಗಳನ್ನು ಮತ್ತಷ್ಟು ಹೆಚ್ಚಿಸಬೇಕು ಹಾಗೂ ಇಂಥ ಕೇಂದ್ರಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಎಲ್ಲ ವಾರ್ಡ್‌ಗಳಲ್ಲಿ ಜ್ವರ ಚಿಕಿತ್ಸಾಲಯಗಳನ್ನು ಸ್ಥಾಪಿಸಬೇಕು. ಕೋವಿಡ್ ಮತ್ತು ಕೋವಿಡ್ ಸೋಂಕಿಲ್ಲದ ರೋಗಿಗಳ ನಡುವೆ ಚಿಕಿತ್ಸೆ ವೇಳೆ ತಾರತಮ್ಯ ಆಗದಂತೆ ನೋಡಿಕೊಳ್ಳಬೇಕು. ಔಷಧಗಳ ಕೊರತೆಯಾಗದಂತೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಐಸಿಯು ಹಾಸಿಗೆ ವ್ಯವಸ್ಥೆ:ಎಲ್ಲ ಆಸ್ಪತ್ರೆಗಳಲ್ಲಿಯೂ ತುರ್ತು ನಿಗಾ ಘಟಕದಲ್ಲಿ ಬೆಡ್’ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಐಸಿಯುನಲ್ಲಿ ಕೇವಲ 4 ಹಾಸಿಗೆಗಳನ್ನು ಹೊಂದಿದ್ದ ಕೆಸಿ ಜನರಲ್ ಆಸ್ಪತ್ರೆಯಲ್ಲಿ 100 ಹಾಸಿಗೆ ಒದಗಿಸಲಾಗುತ್ತಿದೆ. ಆಸ್ಪತ್ರೆಯ ಒಳಗೆ 50 ಮತ್ತು ಆಸ್ಪತ್ರೆಯ ಹೊರಗೆ 50 ಮಾಡ್ಯೂಲರ್ (ಮೊಬೈಲ್) ಐಸಿಯು ಹಾಸಿಗೆಗಳನ್ನು ಅಳವಡಿಸಲಾಗುತ್ತಿದ್ದು, ಈಗಾಗಲೇ ಅಂತಿಮ ಹಂತದಲ್ಲಿದೆ‌. ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯಲ್ಲೂ 50 ಐಸಿಯು ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಇಡೀ ವಿಭಾಗದಲ್ಲಿ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ, ಶುಶ್ರೂಷಕಿಯರು, ಆಂಬುಲೆನ್ಸ್, ಆಂಬುಲೆನ್ಸ್ ಚಾಲಕರು, ಔಷಧಗಳು ಕೊರತೆ ಉಂಟಾಗದಂತೆ ಎಚ್ಚರ ವಹಿಸಬೇಕು. ಕೋವಿಡ್ ಸೋಕಿತರಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸದಂತೆ ನೋಡಿಕೊಳ್ಳಬೇಕು.

‘ಕೋವಿಡ್ ಕಾರ್ಯಪಡೆಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳಿವೆ. ಇದಕ್ಕೆ ಅವಕಾಶ ನೀಡಬಾರದು. ಅವುಗಳ ಸದಸ್ಯರೆಲ್ಲರೂ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT