ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಒದಗಿಸದ ಸರ್ಕಾರ; ನಾಡದೇವಿ ಭುವನೇಶ್ವರಿಗಿಲ್ಲ ಪ್ರತಿಮೆ

ಕಲಾಗ್ರಾಮದಲ್ಲಿ ನಿರ್ಮಿಸಲು ಯೋಜನೆ ರೂಪಿಸಿದ್ದ ಸಂಸ್ಕೃತಿ ಇಲಾಖೆ
Published 27 ಜುಲೈ 2023, 21:27 IST
Last Updated 27 ಜುಲೈ 2023, 21:27 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಪ್ರಥಮ ಭುವನೇಶ್ವರಿ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅನುದಾನ ಒದಗಿಸಿಲ್ಲ. ಇದರಿಂದಾಗಿ ನಾಡದೇವಿಗೆ ಪ್ರತಿಮೆಯ ಸ್ವರೂಪ ಒದಗಿಸುವ ಕಾರ್ಯಕ್ಕೆ ಹಿನ್ನಡೆಯಾಗಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು ₹ 2 ಕೋಟಿ ವೆಚ್ಚದಲ್ಲಿ 30 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಿಸಲು ಇಲಾಖೆ ಯೋಜನೆ ರೂಪಿಸಿತ್ತು. ಇದಕ್ಕೆ ಅನುಮೋದನೆಯೂ ದೊರೆತಿತ್ತು. ಕಳೆದ ನವೆಂಬರ್ ತಿಂಗಳಲ್ಲಿಯೇ ಪ್ರತಿಮೆ ಸ್ಥಾಪಿಸಿ, ಚಾಲನೆ ನೀಡಲು ಸರ್ಕಾರ ಮುಂದಾಗಿತ್ತು. ಆದರೆ, ಪ್ರತಿಮೆಯ ಸ್ಥಳ ನಿಗದಿ ವಿಚಾರವಾಗಿ ಗೊಂದಲ ಉಂಟಾಗಿದ್ದರಿಂದ ಕಳೆದ ವರ್ಷ ಸಾಕಾರವಾಗಿರಲಿಲ್ಲ. ಬಳಿಕ ಚುನಾವಣೆ ನೀತಿ ಸಂಹಿತೆ ಜಾರಿಯಿಂದಾಗಿ ಪ್ರತಿಮೆ ನಿರ್ಮಾಣಕ್ಕೆ ಅನುದಾನ ಒದಗಿಸಿರಲಿಲ್ಲ. ಈಗ ಕಾಂಗ್ರೆಸ್ ನೇತೃತ್ವದ ಸರ್ಕಾರವು ಈ ಯೋಜನೆಯನ್ನು ಕೈಬಿಟ್ಟಿದೆ. 

ನಾಡದೇವಿಯ ಪ್ರತಿಮೆಯನ್ನು ಜೆ.ಸಿ.ರಸ್ತೆಯಲ್ಲಿರುವ ಕನ್ನಡ ಭವನದ ಮುಂಭಾಗ ನಿರ್ಮಿಸಲು ಇಲಾಖೆ ಮುಂದಾಗಿತ್ತು. 10 ಅಡಿ ಎತ್ತರದ ಪೀಠದ ಮೇಲೆ ಪ್ರತಿಮೆ ಸ್ಥಾಪಿಸಿ, ಪೀಠದ ಸುತ್ತ ನಾಡಿನ ಸಾಂಸ್ಕೃತಿಕ ವೈಭವ ಚಿತ್ರಿಸುವುದು ಯೋಜನೆಯಲ್ಲಿತ್ತು. ಆದರೆ, ಕನ್ನಡ ಭವನದ ಮುಂಭಾಗ ಸ್ಥಳಾವಕಾಶದ ಕೊರತೆ ಎದುರಾಗಿತ್ತು. ಹೀಗಾಗಿ, ಕಲಾಗ್ರಾಮದಲ್ಲಿ ಪ್ರತಿಮೆ ನಿರ್ಮಿಸಲು ಅಧಿಕಾರಿಗಳು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. 30 ಎಕರೆಯಲ್ಲಿ ವ್ಯಾಪಿಸಿಕೊಂಡಿರುವ ಕಲಾಗ್ರಾಮದಲ್ಲಿ, ಸಂಸ್ಕೃತಿ ಇಲಾಖೆ 11 ಎಕರೆ ಪ್ರದೇಶವನ್ನು ನಿರ್ವಹಣೆ ಮಾಡುತ್ತಿದೆ. 

700 ಪ‍್ರತಿಮೆ: ಇಂಡಿಯನ್ ಫೌಂಡೇಷನ್ ಫಾರ್ ದಿ ಆರ್ಟ್ಸ್‌ ಸಂಸ್ಥೆಯು ಬೆಂಗಳೂರಿನ ಪ್ರತಿಮೆಗಳ ಬಗ್ಗೆ ಅಧ್ಯಯನ ಮಾಡಿದ್ದು, ಇಲ್ಲಿ 700 ಪ್ರತಿಮೆಗಳನ್ನು ಗುರುತಿಸಿದೆ. ಇವುಗಳಲ್ಲಿ ಅರ್ಧದಷ್ಟು ಪ್ರತಿಮೆಗಳು 10 ವರ್ಷಗಳಲ್ಲಿ ತಲೆಯೆತ್ತಿವೆ. ಕೆಂಪೇಗೌಡ ಹಾಗೂ ರಾಜ್‌ಕುಮಾರ್ ಅವರ ಪ್ರತಿಮೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇಲ್ಲಿ ಸರ್ಕಾರವು ಇದೇ ಮೊದಲ ಬಾರಿ ಭುವನೇಶ್ವರಿ ಪ್ರತಿಮೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿತ್ತು.

‘ನಾಡದೇವಿಯ ಪ್ರತಿಮೆಯನ್ನು ಕಲಾಗ್ರಾಮದಲ್ಲಿ ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಅಲ್ಲಿ ಪ್ರತಿಮೆ ನಿರ್ಮಾಣದಿಂದ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಾಗುತ್ತಿತ್ತು. ಸ್ಥಳ, ಪ್ರತಿಮೆಯ ಸ್ವರೂಪ ಅಂತಿಮಗೊಳಿಸುವುದು ವಿಳಂಬವಾಯಿತು. ಅನುದಾನ ಇಲ್ಲವಾಗಿರುವುದರಿಂದ ಪ್ರತಿಮೆ ನಿರ್ಮಾಣ ಯೋಜನೆ ಕೈಬಿಟ್ಟಂತೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. 

ನಾಡದೇವಿ ಭುವನೇಶ್ವರಿ ಪ್ರತಿಮೆ ನಿರ್ಮಿಸುವ ಯೋಜನೆ ಈಗ ಸರ್ಕಾರದ ಮುಂದಿಲ್ಲ. ಹಿಂದೆ ಏನಾಗಿತ್ತು ಎನ್ನುವುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ.
ಶಿವರಾಜ ತಂಗಡಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ

ಅಧಿಕೃತ ಚಿತ್ರ ಬಳಕೆ

ಭುವನೇಶ್ವರಿ ಪ್ರತಿಮೆಯ ವಿನ್ಯಾಸವೂ ಸಾಂಸ್ಕೃತಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ನಾಡದೇವಿ ಚಿತ್ರವನ್ನು ಆಯ್ಕೆ ಮಾಡುವ ಸಂಬಂಧ ಈ ಹಿಂದೆ ಲಲಿತ ಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದ ಡಿ. ಮಹೇಂದ್ರ ಅಧ್ಯಕ್ಷತೆಯಯಲ್ಲಿ ಸಮಿತಿ ರಚಿಸಿತ್ತು. ಆ ಸಮಿತಿ ಕಲಾವಿದ ಕೆ. ಸೋಮಶೇಖರ್‌ ಅವರು ಸಿದ್ಧಪಡಿಸಿರುವ ‘ನಾಡದೇವಿ’ಯ ಚಿತ್ರವನ್ನು ಶಿಫಾರಸು ಮಾಡಿತ್ತು. ಇದನ್ನು ಅಧಿಕೃವೆಂದು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿತ್ತು. ಅಂತಿಮವಾಗಿ ಇದೇ ಚಿತ್ರವನ್ನು ಬಳಸಿಕೊಂಡು ಪ್ರತಿಮೆ ನಿರ್ಮಿಸಲು ನಿರ್ಧರಿಸಲಾಗಿತ್ತು. ವಿಗ್ರಹ ನಿರ್ಮಾಣದ ಜವಾಬ್ದಾರಿಯನ್ನು ಕರ್ನಾಟಕ ಶಿಲ್ಪಕಲಾ ಅಕಾಡೆಮಿಗೆ ನೀಡಲಾಗಿತ್ತು.  ‘ಕಲಾಗ್ರಾಮದಲ್ಲಿ ಭುವನೇಶ್ವರಿ ಪ್ರತಿಮೆ ನಿರ್ಮಿಸಿ ಥೀಮ್ ಪಾರ್ಕ್‌ ರೂಪಿಸಿದಲ್ಲಿ ಪ್ರವಾಸಿ ತಾಣವಾಗಲಿದೆ. ಇದು ಸರ್ಕಾರಕ್ಕೆ ಆದಾಯದ ಮೂಲವೂ ಆಗಲಿದೆ’ ಎಂದು ಡಿ. ಮಹೇಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT