ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರನ್ನು 7 ವಲಯಗಳಾಗಿ ವಿಂಗಡಿಸಲು ರಾಜ್ಯ ಸರ್ಕಾರ ಚಿಂತನೆ

ಅನುಮತಿಗಾಗಿ ಕೇಂದ್ರಕ್ಕೆ ಪತ್ರ– ಸಚಿವ ಆರ್‌. ಅಶೋಕ
Last Updated 4 ಮೇ 2020, 20:58 IST
ಅಕ್ಷರ ಗಾತ್ರ

ಬೆಂಗಳೂರು: 28 ವಿಧಾನಸಭಾ ಕ್ಷೇತ್ರಗಳಿರುವ ಬೆಂಗಳೂರನ್ನು ತಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳ ಏಳು ವಲಯಗಳಾಗಿ ವಿಂಗಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಮಾಧ್ಯಮ ಪ್ರತಿನಿಧಿಗಳಿಗೆ ಸೋಮವಾರ ಈ ವಿಷಯ ತಿಳಿಸಿದ ಕಂದಾಯ ಸಚಿವ ಆರ್‌. ಅಶೋಕ, ‘ಈ ರೀತಿ ವಿಂಗಡನೆಗೆ ಅನುಮತಿ ನೀಡುವಂತೆ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆಯಲಾಗುವುದು’ ಎಂದರು.

ಕೋವಿಡ್‌ 19 ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸದ್ಯ ಇಡೀ ಬೆಂಗಳೂರನ್ನು ಕೆಂಪು ವಲಯವಾಗಿ ಗುರುತಿಸಲಾಗಿದೆ. ವಲಯಗಳಾಗಿ ವಿಂಗಡಿಸುವ ಮೂಲಕ, ಕೊರೊನಾ ಸೋಂಕು ಇಲ್ಲದ ವಲಯವನ್ನು ಹಸಿರು ವಲಯವೆಂದು ಪರಿಗಣಿಸಿ ಆರ್ಥಿಕ ಚಟುವಟಿಕೆ ಆರಂಭಿಸಲು ಸರ್ಕಾರ ಮುಂದಾಗಿದೆ.

‘ಈ ಕುರಿತಂತೆ ಬಿಬಿಎಂಪಿ ಆಯುಕ್ತರ ಜೊತೆ ಚರ್ಚಿಸಿದ್ದು, ನಕ್ಷೆ ಸಿದ್ಧಪಡಿಸಲು ಸೂಚನೆ ನೀಡಿದ್ದೇನೆ’ ಎಂದೂ ಅಶೋಕ ತಿಳಿಸಿದರು.

‘ಮೈಸೂರು ಸೇರಿದಂತೆ ರಾಜ್ಯದ ಎಲ್ಲ ಭಾಗಗಳಲ್ಲಿ ಸಬ್‌ ರಿಜಿಸ್ಟ್ರಾರ್ ಕಚೇರಿಗಳು ಕಾರ್ಯಾರಂಭಿಸಿವೆ. ಏಪ್ರಿಲ್ 30ರಂದು ಬೆಂಗಳೂರಿನಲ್ಲಿ‌ ₹ 4 ಕೋಟಿ ಮತ್ತು ರಾಜ್ಯದಲ್ಲಿ ₹ 7.31 ಕೋಟಿ ನೋಂದಣಿ ಶುಲ್ಕ ಸಂಗ್ರಹವಾಗಿದೆ. ಮೇ 2ರಂದು ₹ 3 ಕೋಟಿ ಹಣ ಬಂದಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಹಣ ಹರಿದು ಬರುವ ನಿರೀಕ್ಷೆ ಇದೆ’ ಎಂದರು.

ಕಾಂಗ್ರೆಸ್ ನಾಯಕರು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಕುರಿತು ಪ್ರತಿಕ್ರಿಯಿಸಿದ ಅಶೋಕ, ‘ಬಸ್‌ ನಿಲ್ದಾಣದಲ್ಲಿ ಸುಮಾರು 5 ಸಾವಿರ ಮಂದಿ ಇದ್ದರು. ಅವರ ನಡುವೆ ಕಾಂಗ್ರೆಸ್ ನಾಯಕರು ಯಾವುದೇ ಅಂತರ ಕಾಯ್ದುಕೊಂಡಿಲ್ಲ. ಯಾರಿಗಾದರೂ ಸೋಂಕು ಇರಬಹುದೆಂಬ ಪರಿಜ್ಞಾನವೂ ಅವರಿಗಿರಲಿಲ್ಲ.‌ ಈ ಕಾರಣಕ್ಕೆ ಅವರನ್ನೂ ಕ್ವಾರೆಂಟೈನ್‌ ಗೆ ಒಳಪಡಿಸುವ ಸಂದರ್ಭ ಬರಬಹುದು. ಅಂತರ ಕಾಯ್ದುಕೊಳ್ಳದ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳವ ಬಗ್ಗೆ ಅಧಿಕಾರಿಗಳು ಮತ್ತು ಮುಖ್ಯಮಂತ್ರಿ ಜೊತೆ ಚರ್ಚಿಸುತ್ತೇನೆ‘ ಎಂದೂ ಅವರು ಹೇಳಿದರು.

ಚಿತ್ರೀಕರಣಕ್ಕೂ ಅವಕಾಶ?
‘ಸಿನಿಮಾ, ಧಾರಾವಾಹಿ ಚಿತ್ರೀಕರಣ ಆರಂಭಿಸಲು ಅನುಮತಿ ನೀಡುವಂತೆ ಈ ವಲಯದ ಪ್ರಮುಖರು ಬೇಡಿಕೆ ಮುಂದಿಟ್ಟಿದ್ದಾರೆ. ಅಂತರ ಕಾಪಾಡುವುದು ಸೇರಿದಂತೆ ಎಲ್ಲ ನಿಯಮಗಳನ್ನು ಪಾಲಿಸುವ ಬಗ್ಗೆಯೂ ಅವರು ತಿಳಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಮಂಗಳವಾರ ಚರ್ಚಿಸಿ ತೀರ್ಮಾನಿಸುತ್ತೇವೆ’ ಎಂದೂ ಅಶೋಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT