‘ಉಡುಪಿಯಲ್ಲಿ ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ 11ರಿಂದ’
ಬೆಂಗಳೂರು: ‘ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ರಾಜ್ಯ ಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಆಶ್ರಯದಲ್ಲಿ ಉಡುಪಿಯಲ್ಲಿ ಫೆ.11 ಹಾಗೂ 12ರಂದು ನಡೆಯಲಿದೆ’ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಕೆ.ರಘುಪತಿ ಭಟ್ ಇಲ್ಲಿ ಹೇಳಿದರು.
‘ಬಜೆಟ್‌ನಲ್ಲಿ ಸರ್ಕಾರವು ಘೋಷಿಸಿದಂತೆ ₹ 2 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಉಡುಪಿಯ ಕುಂಜಿಬೆಟ್ಟುವಿನ ಎಎಲ್‌ಎಸ್ ರಾವ್ ಕ್ರೀಡಾಂಗಣದಲ್ಲಿ ಸಮ್ಮೇಳನ ನಡೆಯಲಿದೆ. ಸಮ್ಮೇಳನಾಧ್ಯಕ್ಷರಾಗಿ ಡಾ.ಎಂ.ಪ್ರಭಾಕರ ಜೋಷಿ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೆ.11ರಂದು ಚಾಲನೆ ನೀಡಲಿದ್ದಾರೆ. 10 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. 75 ಮಂದಿ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಲಾಗುವುದು. 200 ಕಲಾವಿದರ ಭಾವಚಿತ್ರ ಹಾಗೂ ಕಿರುಪರಿಚಯದ ಪ್ರದರ್ಶನ ಇರಲಿದೆ’ ಎಂದು ಹೇಳಿದರು.
‘ಉಡುಪಿಯಲ್ಲಿ 2006ರಿಂದಲೂ ಯಕ್ಷ ಶಿಕ್ಷಣ ಟ್ರಸ್ಟ್ ಅಡಿ 41 ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸಲಾಗುತ್ತಿದೆ. ಪ್ರತಿವರ್ಷ 1,500 ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಅವರೆಲ್ಲರೂ ಈ ಸಮ್ಮೇಳನದಲ್ಲಿ ಪ್ರದರ್ಶನ ನೀಡಲಿದ್ದಾರೆ’ ಎಂದರು.
‘ಪಠ್ಯಕ್ರಮ ರೂಪಿಸಿ, ಯಕ್ಷಗಾನ ಶಿಕ್ಷಣ ನೀಡಬೇಕು ಎಂಬ ನಿರ್ಣಯ ಕೈಗೊಳ್ಳಲಾಗುವುದು. ಯಕ್ಷಗಾನವು ಬರೀ ಕರಾವಳಿ ಜಿಲ್ಲೆಗಳಿಗೆ ಸೀಮಿತವಾದ ಕಲೆ ಅಲ್ಲ. ಚಿಕ್ಕಮಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲೂ ವ್ಯಾಪಿಸಿದೆ’ ಎಂದು ಹೇಳಿದರು.
‘ಸಮ್ಮೇಳನಕ್ಕೆ ದುಬೈ, ಅಮೆರಿಕ ಹಾಗೂ ಮುಂಬೈನಿಂದಲೂ ಯಕ್ಷಗಾನ ಆಸಕ್ತರು ಬರುತ್ತಿದ್ದಾರೆ’ ಎಂದು ಕಾರ್ಯಾಧ್ಯಕ್ಷ ಡಾ.ಬಿ.ಎಲ್.ಹೆಗಡೆ ತಿಳಿಸಿದರು.
‘ಯಕ್ಷಗಾನದ ಪಾರಂಪರಿಕ ಹಾಗೂ ಪ್ರಾದೇಶಿಕ ಪಠ್ಯಗಳು’, ‘ಆಧುನಿಕ ಶಿಕ್ಷಣ ಮಾದರಿಯ ಪಠ್ಯದ ಪ್ರಸ್ತುತತೆ’, ‘ಯಕ್ಷಗಾನ ಮತ್ತು ಶಾಸ್ತ್ರೀಯತೆಯ ಇತಿಮಿತಿಗಳು’, ‘ಕನ್ನಡ ಶಾಸ್ತ್ರೀಯ ಭಾಷೆಗೆ ಯಕ್ಷಗಾನ ಕೊಡುಗೆ’, ‘ಯಕ್ಷಗಾನ ಪ್ರಸಂಗ ಪಠ್ಯಗಳಲ್ಲಿ ಕಾವ್ಯ ಸೌಂದರ್ಯ’, ‘ಯಕ್ಷಗಾನ ಮತ್ತು ಕನ್ನಡ ಆಶು ಪರಂಪರೆಯ ಸ್ವರೂಪ’ ಕುರಿತು ತಜ್ಞರು ವಿಷಯ ಮಂಡಿಸಲಿದ್ಧಾರೆ. ಎರಡು ದಿನವೂ ಯಕ್ಷಗಾನ ಪ್ರದರ್ಶನ ನಡೆಯಲಿದೆ’ ಎಂದು ಮಾಹಿತಿ ನೀಡಿದರು.
‘18 ಕೃತಿ ಬಿಡುಗಡೆಯಾಗಲಿವೆ. ಸ್ಥಳೀಯ, ಹೊರ ರಾಜ್ಯದ 27 ಯಕ್ಷಗಾನ ಕಲಾತಂಡಗಳು ಪ್ರದರ್ಶನ ನೀಡಲಿವೆ’ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಪ್ರಕಾಶ ಜಿ.ಟಿ. ನಿಟ್ಟಾಲಿ, ಯಕ್ಷಗಾನ ಅಕಾಡೆಮಿ ಆಡಳಿತಾಧಿಕಾರಿ ಅಶೋಕ್ ಎನ್. ಚಲವಾದಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.