ಗುರುವಾರ , ಫೆಬ್ರವರಿ 27, 2020
19 °C
ಠಾಣೆಗೆ ಹಾಜರಾದ ಮೊಹಮದ್‌ ನಲಪಾಡ್‌

ಕಾರು ಅಪಘಾತ ಪ್ರಕರಣ: ನಲಪಾಡ್‌ಗೆ ಠಾಣಾ ಜಾಮೀನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೇಖ್ರಿ ವೃತ್ತದ ಕೆಳಸೇತುವೆ ಬಳಿ ಭಾನುವಾರ (ಫೆ. 9) ಮಧ್ಯಾಹ್ನ ಬೆಂಟ್ಲಿ ಕಾರು ಗುದ್ದಿ ಸಂಭವಿಸಿದ್ದ ಸರಣಿ ಅಪಘಾತಕ್ಕೆ ಸಂಬಂಧಿಸಿದಂತೆ ಶಾಸಕ ಎನ್‌.ಎ. ಹ್ಯಾರಿಸ್‌ ಮಗ ಮೊಹಮದ್‌ ನಲಪಾಡ್‌ ಅವರನ್ನು ಬುಧವಾರ ಬೆಳಿಗ್ಗೆ ಬಂಧಿಸಿದ ಪೊಲೀಸರು, ಬಳಿಕ ಠಾಣಾ ಜಾಮೀನು (ಸ್ಟೇಷನ್ ಬೇಲ್‌) ಮೇಲೆ ಬಿಡುಗಡೆ ಮಾಡಿದರು.

ಮತ್ತೊಂದೆಡೆ, ‘ಅಪಘಾತ ವೇಳೆ ಕಾರು ಚಾಲನೆ ಮಾಡುತ್ತಿದ್ದುದ್ದು ನಾನೇ’ ಎಂದು ಸುಳ್ಳು ಹೇಳಿ ಪೊಲೀಸರ ಎದುರು ಶರಣಾಗಿದ್ದ ನಲಪಾಡ್‍ ಅವರ ಗನ್‌ಮ್ಯಾನ್‌ ಬಾಲಕೃಷ್ಣ ಅಲಿಯಾಸ್‌ ಬಾಲು ಅವರನ್ನು ತಪ್ಪು ಮಾಹಿತಿ ನೀಡಿ ತನಿಖೆಯ ದಿಕ್ಕು ತಪ್ಪಿಸಿದ ಮತ್ತು ಸಾಕ್ಷ್ಯನಾಶ ಆರೋಪದಡಿಯಲ್ಲಿ ಬಂಧಿಸಿ ಏಳನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಅಪಘಾತದ ಬಳಿಕ ನಲಪಾಡ್ ಸ್ಥಳದಿಂದ ಕಾಲ್ಕಿತ್ತಿದ್ದರು. ಆದರೆ, ಅಪಘಾತ ಸಂದರ್ಭದಲ್ಲಿ ನಲಪಾಡ್‌ ಕಾರು ಚಲಾಯಿಸುತ್ತಿದ್ದರು ಎಂದು ಪ್ರತ್ಯಕ್ಷ ಸಾಕ್ಷಿದಾರರೊಬ್ಬರು ಪೊಲೀಸರಿಗೆ ಹೇಳಿಕೆ ನೀಡಿದ್ದರು. ಅದರ ಆಧಾರದಲ್ಲಿ ವಿಚಾರಣೆಗೆ ಹಾಜರಾಗುವಂತೆ ನಲಪಾಡ್ ಅವರಿಗೆ ಪೊಲೀಸರು ಮಂಗಳವಾರ ನೋಟಿಸ್ ನೀಡಿದ್ದರು. ನೋಟಿಸ್ ಪಡೆದ ನಲಪಾಡ್ ಬುಧವಾರ ಬೆಳಿಗ್ಗೆ ಸದಾಶಿವನಗರ ಸಂಚಾರ ಠಾಣೆಗೆ ಬಂದು ತನಿಖಾಧಿಕಾರಿ ಬಿ.ಪಿ. ನಾಗರಾಜು ಎದುರು ಹಾಜರಾದರು.

ಸಂಚಾರ ವಿಭಾಗದ ಜಂಟಿ ಕಮಿಷನರ್‌ ಬಿ.ಆರ್‌. ರವಿಕಾಂತೇಗೌಡ ಮಾತನಾಡಿ, ‘ಅಪಘಾತಕ್ಕೆ ಸಂಬಂಧಿಸಿ ನಲಪಾಡ್‌ ಅವರನ್ನು ಬಂಧಿಸಿ, ಬಾಂಡ್‌ ಬರೆಸಿಕೊಂಡು ಠಾಣಾ ಜಾಮೀನು (ಸ್ಟೇಷನ್‌ ಬೇಲ್‌) ನೀಡಿದ್ದೇವೆ’ ಎಂದರು.

ಠಾಣೆಯಿಂದ ಹೊರಬಂದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ನಲಪಾಡ್‌, ‘ಘಟನೆ ನಡೆದಾಗ ನಾನೇ ಸಹಾಯ ಮಾಡಿ‌ ಗಾಯಾಳುಗಳನ್ನು ಕಳುಹಿಸಿ‌ಕೊಟ್ಟಿದ್ದೇನೆ. ನನಗೆ 80 ವರ್ಷದ ಅಜ್ಜ, ಅಜ್ಜಿ‌ ಇದ್ದಾರೆ. ಮೊದಲನೇ‌ ಪ್ರಕರಣದಲ್ಲಿಯೇ ನಾನು ಸಾಕಷ್ಟು ನೋವು ಅನುಭವಿಸಿದ್ದೇನೆ. ಕಾರು ಅಪಘಾತ ‌ಎನ್ನುವುದು ಪ್ರಪಂಚದಲ್ಲಿ ಇದೇ‌ ಮೊದಲಲ್ಲ’ ಎಂದರು.

ಈ ನಡುವೆ, ‘ಕಾರು ಚಲಾಯಿಸುತ್ತಿದ್ದುದು ನೀವು’ ಎನ್ನುವುದು ತನಿಖೆಯಿಂದ ಗೊತ್ತಾಗಿದೆಯಲ್ವಾ ಎಂದಾಗ, ಉತ್ತರಿಸಲು ತಡಬಡಾಯಿಸಿದ ನಲಪಾಡ್‍ ಅವರನ್ನು ಉತ್ತರ ಕೊಡುವ ಮೊದಲೇ ಜೊತೆಗಿದ್ದ ಸ್ನೇಹಿತರು ಎಳೆದುಕೊಂಡು ಹೋಗಿ ಕಾರು ಹತ್ತಿಸಿದರು.

‘ನಲಪಾಡ್‌ ಅವರಿಗೆ ನೋಟಿಸ್ ನೀಡಲಾಗಿತ್ತು. ಹೀಗಾಗಿ, ಅವರು ವಿಚಾರಣೆಗೆ ಹಾಜರಾಗಿದ್ದರು. ಆದರೆ, ಅವರು ಕಾರು ಚಲಾಯಿಸಿಲ್ಲ. ಬೇರೊಬ್ಬ ವ್ಯಕ್ತಿ ಕಾರು ಚಲಾಯಿಸುತ್ತಿದ್ದರು. ಅವರಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಆರೋಪ ಮಾಡಲಾಗಿದೆ’ ಎಂದು ನಲಪಾಡ್‌ ಪರ ವಕೀಲ ಉಸ್ಮಾನ್‌ ಪ್ರತಿಕ್ರಿಯಿಸಿದರು.

ರವಿಕಾಂತೇಗೌಡ ಅವರ ಹೇಳಿಕೆಗೆ ಕೆಂಡಾಮಂಡಲವಾದ ಉಸ್ಮಾನ್‌, ‘ಅವರೇನು ಇನ್ವೆಸ್ಟಿಗೇಶನ್ ಆಫೀಸರಾ. ಅವರಿಗೇನ್ರಿ ಮಾಹಿತಿ ಗೊತ್ತು. ಅವರು ಇನ್ವೆಸ್ಟಿಗೇಷನ್ ಮಾಡ್ಲಿ. ಅವರೇನು ಸಿಸಿಟಿವಿ ತಂದಿದ್ದಾರಾ’ ಎಂದರು.

ಬಾಲಕೃಷ್ಣ ಸಿಕ್ಕಿ ಬಿದ್ದಿದ್ದು ಹೇಗೆ?

‘ಅಪಘಾತ ವೇಳೆ ನಾನೇ ಕಾರು ಚಲಾಯಿಸುತ್ತಿದ್ದೆ’ ಎಂದು ಪೊಲೀಸ್ ಠಾಣೆಗೆ ಬಂದು ಬಾಲಕೃಷ್ಣ ಹೇಳಿಕೆ ನೀಡಿದ್ದರು. ಆದರೆ, ವಿಚಾರಣೆ ವೇಳೆ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡಿಲ್ಲ. ಅನುಮಾನಗೊಂಡ ಪೊಲೀಸರು, ಬೆಂಟ್ಲಿ ಕಾರು ಚಾಲನೆ ಮಾಡಲು ಹೇಳಿದ್ದಾರೆ. ಆದರೆ, ಬಾಲಕೃಷ್ಣ ಅವರಿಗೆ ಕಾರು ಚಾಲನೆ ಮಾಡಲು ಬಂದಿಲ್ಲ ಎನ್ನಲಾಗಿದೆ.

ನಕಲಿ ಆರೋಪಿಯಾಗಿ ಹಾಜರು!

ಫೆ. 11ರಂದು ಬೆಳಿಗ್ಗೆ 8 ಗಂಟೆಗೆ ಬಾಲಕೃಷ್ಣ ಅವರು ಸದಾಶಿವ ನಗರ ಸಂಚಾರ ಪೊಲೀಸ್‌ ಠಾಣೆಗೆ ಹಾಜರಾಗಿ, ‘ಅಪಘಾತದ ವೇಳೆ ನಾನೇ ಕಾರು ಚಾಲನೆ ಮಾಡುತ್ತಿದ್ದೆ’ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ, ತನ್ನನ್ನು ಆರೋಪಿಯನ್ನಾಗಿ ಮಾಡಿದರೆ ಮಾತ್ರ ಹೇಳಿಕೆಗೆ ಸಹಿ ಮಾಡುವುದಾಗಿ ಹೇಳಿದ್ದರು. ವಿಚಾರಣೆ ನಡೆಸಿದ ತನಿಖಾಧಿಕಾರಿ ನಾಗರಾಜು, ‘ಬಾಲಕೃಷ್ಣ ಸುಳ್ಳು ಹೇಳುತ್ತಿದ್ದಾನೆ. ಅಪರಾಧಿಯನ್ನು ರಕ್ಷಿಸಲು ಸತ್ಯವನ್ನು ಮರೆಮಾಚಿ ತಾನೇ ಆರೋಪಿ ಎಂದು ಹೇಳುತ್ತಿದ್ದಾನೆ. ತನಿಖೆಯ ದಿಕ್ಕುತಪ್ಪಿಸಿ ನಿಜವಾದ ಆರೋಪಿಗೆ ಕಾನೂನಿನಿಂದ ತಪ್ಪಿಸಲು ಸಹಾಯ ಮಾಡುವ ಉದ್ದೇಶದಿಂದ ನಕಲಿ ಆರೋಪಿಯಾಗಿ ಹಾಜರಾಗಿದ್ದಾನೆ’ ಎಂದು ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಿದ್ದಾರೆ. 

ಬಾಲಕೃಷ್ಣ ಅವರನ್ನು ಪೊಲೀಸರು ಬುಧವಾರ ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ಈ ವೇಳೆ, ಆರೋಪಿ ಪರ ವಕೀಲ ಸೂರ್ಯ ಮುಕುಂದ್‍ರಾಜ್ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ದಂಡ ಕಟ್ಟಿಸಿಕೊಂಡು ಜಾಮೀನು ನೀಡಿದ ನ್ಯಾಯಾಲಯ, ತನಿಖೆಗೆ ಸಂಪೂರ್ಣ ಸಹಕರಿಸಬೇಕು ಎಂದು ಸೂಚಿಸಿದೆ. ‘ನ್ಯಾಯಾಲಯ ನಗದು ಶ್ಯೂರಿಟಿ ಪಡೆದು ಬಾಲಕೃಷ್ಣ ಅವರಿಗೆ ಜಾಮೀನು ಮಂಜೂರು ಮಾಡಿದೆ’ ಎಂದು ಸೂರ್ಯ ಮುಕುಂದ್‍ರಾಜ್ ತಿಳಿಸಿದರು.

***

ಆರೋಪಿಯನ್ನು ತನಿಖೆ ನಡೆಸಲು‌ ಸಾಕಷ್ಟು ಸಮಯಾವಕಾಶವಿದೆ. ಸೂಕ್ತ ಸಾಕ್ಷ್ಯಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುತ್ತೇವೆ
-ಬಿ.ಆರ್‌. ರವಿಕಾಂತೇಗೌಡ, ಜಂಟಿ ಕಮಿಷನರ್‌, ಸಂಚಾರ ವಿಭಾಗ

ನಾನು ಕಾರು ಓಡಿಸಿಲ್ಲ. ಬಾಲು (ಗನ್‌ ಮ್ಯಾನ್‌ ಬಾಲಕೃಷ್ಣ) ಕಾರು ಓಡಿಸುತ್ತಿದ್ದ. ಮತ್ತೇ ನನಗ್ಯಾಕೆ ಈ ರೀತಿ ಶಿಕ್ಷೆ ಕೊಡುತ್ತಿದ್ದಾರೆ
-ಮೊಹಮದ್‌ ನಲಪಾಡ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು