ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಂಟ್‌ ಜೋಸೆಫ್ಸ್‌ ಶಾಲೆಯ ನೆನಪಿನ ದೋಣಿಯಲಿ

Last Updated 6 ಜನವರಿ 2019, 20:22 IST
ಅಕ್ಷರ ಗಾತ್ರ

ಬೆಂಗಳೂರು: ಹಲವಾರು ಹಿರಿಯ ಜೀವಗಳು ಮುಖದಲ್ಲೊಂದಿಷ್ಟು ಮಂದಹಾಸ ತುಂಬಿಕೊಂಡು ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತ ಬರುತ್ತಿದ್ದರು. ಅವರ ನಡಿಗೆಯೆನೋ ನಿಧಾನವಾಗಿತ್ತು. ಆದರೆ, ತಮ್ಮೊಂದಿಗೆ ಓದಿದ ಸಹಪಾಠಿ, ಶಿಕ್ಷಕರನ್ನು ಅಪ್ಪಿಕೊಳ್ಳುವ ತವಕ ಹೆಚ್ಚಾಗಿತ್ತು.

ಗೆಳೆಯರನ್ನು ಕಂಡೊಡನೆಯೇಅವರನ್ನು ಅಪ್ಪಿಕೊಂಡು, ಕೈ ಕುಲುಕಿ, ಕುಶಲ– ಕ್ಷೇಮ ವಿಚಾರಿಸಿ, ಪರಸ್ಪರ ಶುಭಾಶಯ ಕೋರುತ್ತಲೇ ಮಾತಿಗಿಳಿಯುತ್ತಿದ್ದ ಅವರ ಹುರುಪು ಗಮನ ಸೆಳೆಯುತ್ತಿತ್ತು. ಸೇಂಟ್‌ ಜೋಸೆಫ್ಸ್‌ ಶಾಲೆಯಲ್ಲಿ ಕಳೆದ ವಿದ್ಯಾರ್ಥಿ ಜೀವನದ ನೆನಪಿನ ದೋಣಿಯಲ್ಲಿ ಅವರೆಲ್ಲ ತೇಲಾಡಿದರು.

ಸೇಂಟ್‌ ಜೋಸೆಫ್ಸ್‌ ಇಂಡಿಯನ್‌ ಇನ್‌ಸ್ಟಿಟ್ಯೂಷನ್ಸ್‌ ಹಳೆ ವಿದ್ಯಾರ್ಥಿಗಳ ವತಿಯಿಂದ ಶಾಲಾ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಹಳೆ ವಿದ್ಯಾರ್ಥಿಗಳ ಪುನರ್‌ ಸಮ್ಮಿಲನ ಹಾಗೂ ಶಾಲೆಯ 115ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಂಡ ದೃಶ್ಯಗಳಿವು.

ಸ್ನೇಹಿತರು ತಮ್ಮ ಪ್ರೌಢಶಾಲಾ ದಿನಗಳನ್ನು ಮೆಲುಕು ಹಾಕಿದರು. ಗೆಳೆಯ–ಗೆಳತಿಯರು ಆಡಿದ ಆಟಗಳು, ಆ ತುಂಟತನಗಳನ್ನು ಮತ್ತೆ ನೆನಪಿಸಿಕೊಂಡರು. ವಿದ್ಯೆ ಕಲಿಸಿದ ಮೇಷ್ಟ್ರುಗಳಿಗೆ ಗುರುವಂದನೆ ಸಲ್ಲಿಸಿದರು.ಶಾಲೆಯ ಪ್ರಾರ್ಥನಾ ಗೀತೆಗೆ ಹಳೆಯ ವಿದ್ಯಾರ್ಥಿಗಳೆಲ್ಲ ಗುನುಗುತ್ತ ಧ್ವನಿಗೂಡಿಸಿದರು.

ಹಿರಿಯರ ಮತ್ತು ಕಿರಿಯರ ಪಿಸು ಮಾತುಗಳು, ಹಾಗೇ ಒಂದಷ್ಟು ನಗೆ ಚಟಾಕಿಗಳು ಕಾರ್ಯಕ್ರಮದ ಮಧ್ಯೆ ಮಧ್ಯೆ ಕೇಳಿ ಬಂದವು. ಶಾಲೆಯ ಹಿರಿಯ ಹಳೆ ವಿದ್ಯಾರ್ಥಿ ಏರ್‌ ಮಾರ್ಷಲ್‌ ಕೆ.ಪಿ.ನಯ್ಯರ್‌, ‘ಹಲವು ಶಿಕ್ಷಕರು ನನ್ನನ್ನು ತಿದ್ದಿ, ತೀಡಿ ಒಂದು ಸುಂದರ ರೂಪವಾಗಿಸಿದ್ದಾರೆ. ನನ್ನ ಬದುಕನ್ನು ಶಿಲ್ಪವಾಗಿ ನಿರ್ಮಿಸಿದ್ದಾರೆ’ ಎಂದರು.

1947, 1949ರ ತಂಡಗಳ ವಿದ್ಯಾರ್ಥಿಗಳಾದ ಆರ್ಮುಗಂ, ಸುಬ್ರಹ್ಮಣ್ಯ ಸೇರಿದಂತೆ ಹಲವು ಹಳೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

‘ಮೌಲ್ಯ ತುಂಬಿದ ಶಾಲೆ ನನ್ನ ಹೆಮ್ಮೆ’
‘ನನ್ನ ಶಾಲೆಯ ಬಗ್ಗೆ ಮಾತನಾಡಲು ಹೆಮ್ಮೆ ಎನಿಸುತ್ತದೆ. ಧೈರ್ಯ, ಸಂಯಮ, ಜವಾಬ್ದಾರಿಯುತ ಮೌಲ್ಯಗಳನ್ನು ನನ್ನಲ್ಲಿ ತುಂಬಿದೆ’ ಎಂದು ನಟ ಪ್ರಕಾಶ್‌ ರೈ ಹೇಳಿದರು.

ಶಾಲಾ ದಿನಗಳ ಸವಿನೆನಪುಗಳನ್ನು ಸ್ಮರಿಸಿದ ಅವರು, ‘7ನೇ ತರಗತಿ ಓದಲು ಈ ಶಾಲೆಗೆ ಸೇರಿದೆ. ಸ್ಕೌಟ್‌ ಮತ್ತು ಗೈಡ್ಸ್‌, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಬಳಸುವ ಬಗ್ಗೆ ಹೇಳಿಕೊಟ್ಟಿದ್ದೇ ಇಲ್ಲಿನ ಶಿಕ್ಷಕರು. ಅಕ್ಷರ ಜ್ಞಾನ ನೀಡಿ, ಬದುಕಿನ ಪಾಠ ಹೇಳಿದವರಿಗೆ ಋಣಿಯಾಗಿರುವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT