ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ಬದಿ ವ್ಯಾಪಾರ ಕಾನೂನುಬದ್ಧ; ಆದರೂ ತಪ್ಪದ ಕಿರುಕುಳ

ಪೊಲೀಸ್, ಬಿಬಿಎಂಪಿ ಅಧಿಕಾರಿಗಳಿಗೇ ಇಲ್ಲ ಕಾಯ್ದೆಯ ಅರಿವು
Last Updated 3 ನವೆಂಬರ್ 2021, 22:15 IST
ಅಕ್ಷರ ಗಾತ್ರ

ಬೆಂಗಳೂರು: ಬೀದಿ ಬದಿ ವ್ಯಾಪಾರ ಮಾಡುವುದು ಆ ವ್ಯಾಪಾರಿ ಕಾನೂನು ಬದ್ಧ ಹಕ್ಕು. ಆದರೆ, ಇದರ ಅರಿವಿಲ್ಲದ ಪೊಲೀಸ್ ಮತ್ತು ಸ್ಥಳೀಯ ಸಂಸ್ಥೆಗಳಿಂದ ವ್ಯಾಪಾರಿಗಳು ನಿತ್ಯ ಕಿರುಕುಳ ಅನುಭವಿಸುತ್ತಿದ್ದಾರೆ.

ಬೀದಿ ಬದಿ ವ್ಯಾಪಾರ ಎಂದ ಕೂಡಲೇ ಪಾದಚಾರಿ ಮಾರ್ಗ ಅಥವಾ ರಸ್ತೆ ಒತ್ತುವರಿ ಮಾಡಿಕೊಂಡು ಯಾವುದೇ ಪರವಾನಗಿ ಇಲ್ಲದೆ ಮಾಡುವ ವ್ಯಾಪಾರ ಎಂಬ ಕಲ್ಪನೆ ಪೊಲೀಸ್ ಅಧಿಕಾರಿ ವರ್ಗದವರಲ್ಲಿ ಹಿಂದಿನಿಂದ ಬೆಳೆದು ಬಂದಿದೆ.

ಸತತ ಹೋರಾಟದ ಬಳಿಕ 2014ರಲ್ಲಿ ರಾಷ್ಟ್ರೀಯ ಬೀದಿ ವ್ಯಾಪಾರಿಗಳ ಕಾಯ್ದೆ ಜಾರಿಗೆ ಬಂದಿದೆ. ಈ ಕಾಯ್ದೆ ಅಡಿಯಲ್ಲಿ ರಾಜ್ಯ ಸರ್ಕಾರಗಳು ನಿಯಮಾವಳಿ ರೂಪಿಸಿಕೊಂಡು ಬೀದಿ ಬದಿ ವ್ಯಾಪಾರಿಗಳ ಸರ್ವೆ ನಡೆಸಬೇಕು. ವ್ಯಾಪಾರಿಗಳ ಸಂಖ್ಯೆ ಎಷ್ಟಿದೆ ಎಂಬ ಅಂಕಿ–ಅಂಶ ಸಂಗ್ರಹಿಸಿ ಅವರಿಗೆ ಗುರುತಿನ ಚೀಟಿ ನೀಡಬೇಕು. ಅಲ್ಲದೇ, ಅವರ ಕಲ್ಯಾಣಕ್ಕೆ ಯೋಜನೆಗಳನ್ನು ರೂಪಿಸಬೇಕು.

ಎಲ್ಲಾ ಕಡೆಯೂ ಪಟ್ಟಣ ವ್ಯಾಪಾರ ಸಮಿತಿಗಳನ್ನು ರಚಿಸಬೇಕು. ಬೀದಿ ಬದಿ ವ್ಯಾಪಾರಿಗಳನ್ನೇ ಈ ಸಮಿತಿ ಸದಸ್ಯರನ್ನು ಚುಣಾವಣೆ ಮೂಲಕ ಆಯ್ಕೆ ಮಾಡಬೇಕು. ಬಿಬಿಎಂಪಿ ಜಂಟಿ ಆಯುಕ್ತರು ಈ ಸಮಿತಿ ಸದಸ್ಯರ ಜೊತೆ ಆಗಾಗ ಸಭೆ ನಡೆಸಿ ವ್ಯಾಪಾರಿಗಳ ಸಮಸ್ಯೆ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು.

‘ನಿಗದಿತ ಜಾಗದಲ್ಲಿ ವ್ಯಾಪಾರ ನಡೆಸುವ ಬೀದಿ ಬದಿ ವ್ಯಾಪಾರಿಗಳಿಗೆ ಪೊಲೀಸರಾಗಲೀ, ಬಿಬಿಎಂಪಿ ಅಧಿಕಾರಿಗಳಾಗಲೀ ತೊಂದರೆ ಕೊಡುವಂತಿಲ್ಲ. ಅವರನ್ನು ಎತ್ತಂಗಡಿ ಮಾಡಿಸುವಂತಿಲ್ಲ. ಆದರೆ, ಈ ಕಾಯ್ದೆಯ ಬಗ್ಗೆ ಅಧಿಕಾರಿಗಳಿಗೆ, ಅದರಲ್ಲೂ ಪೊಲೀಸ್ ಅಧಿಕಾರಿಗಳಿಗೆ ಅರಿವೇ ಇಲ್ಲ. ಆದ್ದರಿಂದಲೇ ಆಗಾಗ ಪಾದಚಾರಿ ಮಾರ್ಗ ಒತ್ತುವರಿ ಹೆಸರಿನಲ್ಲಿ ಬೀದಿ ಬದಿ ವ್ಯಾಪಾರಿಗಳ ಬದುಕನ್ನೇ ಈ ಅಧಿಕಾರಿಗಳು ಕಸಿದುಕೊಳ್ಳುತ್ತಿದ್ದಾರೆ’ ಎಂದು ವ್ಯಾಪಾರಿಗಳ ಪರ ಹೋರಾಟಗಾರರು ಹೇಳುತ್ತಾರೆ.

‘ವೈಟ್‌ಫೀಲ್ಡ್‌ನಲ್ಲಿ ದೊಡ್ಡ ದೊಡ್ಡ ಹೋಟೆಲ್‌ಗಳು ಬಿಟ್ಟರೆ ಸಾಮಾನ್ಯ ಜನ ಹೋಗಬಹುದಾದ ಹೋಟೆಲ್‌ಗಳ ಸಂಖ್ಯೆ ತೀರಾ ವಿರಳ. ಐ.ಟಿ ಕಂಪನಿಗಳಲ್ಲಿ ಕೆಲಸ ಮಾಡುವ ಭದ್ರತಾ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ, ಟ್ಯಾಕ್ಸಿ ಚಾಲಕರಿಗೆ ಬೀದಿ ಬದಿಯಲ್ಲಿನ ಗೂಡಂಗಡಿ ಕ್ಯಾಂಟೀನ್‌ಗಳೇ ಆಧಾರ. ಆದರೆ, ಈ ರೀತಿಯ ಅಂಗಡಿಗಳನ್ನು ಅಲ್ಲಿನ ಅಧಿಕಾರಿಗಳು ಆಗಾಗ ತೆರವುಗೊಳಿಸುತ್ತಿದ್ದಾರೆ. ಅವರಿಗೆ ಈ ಕಾಯ್ದೆಯ ಬಗ್ಗೆ ಅರಿವಿಲ್ಲದೆ ಇರುವುದೇ ಕಾರಣ’ ಎಂದು ಬೀದಿ ಬದಿ ವ್ಯಾಪಾರಿಗಳ ಪರ ಹೋರಾಟಗಾರ ವಿನಯ ಶ್ರೀನಿವಾಸ್ ಹೇಳುತ್ತಾರೆ.

‘ಅಧಿಕಾರಿಗಳು ಕಿರುಕುಳ ನೀಡಿದಾಗ ಶಾಸಕರು ಮತ್ತು ಇತರ ಜನಪ್ರತಿನಿಧಿಗಳಿಗೆ ದುಂಬಾಲು ಬಿದ್ದು ಸಮಸ್ಯೆ ಸರಿಪಡಿಸಿಕೊಳ್ಳಬೇಕಾದ ಸ್ಥಿತಿ ಇದೆ. ಕೆಲ ಶಾಸಕರು ಬಡ ವ್ಯಾಪಾರಿಗಳ ಬೆಂಬಲಕ್ಕೆ ನಿಂತರೆ, ಕೆಲವಡೆ ಜನಪ್ರತಿನಿಧಿಗಳೇ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿಸಲು ಮುಂದೆ ನಿಲ್ಲುತ್ತಾರೆ. ಕೋರಮಂಗಲದಲ್ಲಿ ಬೀದಿ ಬದಿ ವ್ಯಾಪಾರಕ್ಕೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ವಿರೋಧ ಇದೆ. ಅದಕ್ಕೆ ಅಲ್ಲಿನ ಜನ ಪ್ರತಿನಿಧಿಗಳೂ ಸಾಥ್ ನೀಡಿ ವ್ಯಾಪಾರಿಗಳಿಗೆ ಆಗಾಗ ತೊಂದರೆ ನೀಡುತ್ತಿದ್ದಾರೆ’ ಎಂದು ವಿವರಿಸಿದರು.

ತರಬೇತಿ ನೀಡದ ಬಿಬಿಎಂಪಿ

ಕಾಯ್ದೆಯ ಪ್ರಕಾರ ಬೀದಿ ಬದಿ ವ್ಯಾಪಾರಿಗಳಿಗೆ ಇರುವ ಹಕ್ಕಿನ ಬಗ್ಗೆ ಪೊಲೀಸ್ ಮತ್ತು ಬಿಬಿಎಂಪಿ ಅಧಿಕಾರಿಗಳಿಗೆ ತರಬೇತಿ ನೀಡಬೇಕಿದೆ. ಆದರೆ, ಈವರೆಗೆ ಅಧಿಕಾರಿಗಳಿಗೆ ತರಬೇತಿಯನ್ನೂ ನೀಡಿಲ್ಲ.

‘ಸಂಚಾರ ಪೊಲೀಸರಿಂದ ವ್ಯಾಪಾರಿಗಳಿಗೆ ಅಲ್ಲಲ್ಲಿ ಕಿರುಕುಳ ಇದೆ. ಕಾಯ್ದೆಯ ಬಗ್ಗೆ ತಿಳಿವಳಿಕೆ ಮೂಡಿಸಿದರೆ ಕಿರುಕುಳ ತಪ್ಪಿಸಲು ಸಾಧ್ಯವಿದೆ. ಎಷ್ಟೇ ಬಾರಿ ಮನವಿ ಮಾಡಿದರು ತರಬೇತಿ ಕಾರ್ಯಾಗಾರಗಳನ್ನು ಸರ್ಕಾರ ಆಯೋಜಿಸುತ್ತಿಲ್ಲ’ ಎಂದು ವಿನಯ ಶ್ರೀನಿವಾಸ್ ಹೇಳಿದರು.

ಕಾಡುತ್ತಿರುವ ಸ್ಮಾರ್ಟ್‌ಸಿಟಿ ಭೀತಿ

ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿ ಪೂರ್ಣಗೊಂಡ ಕಡೆ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ಸಿಗುವುದೋ ಇಲ್ಲವೋ ಎಂಬ ಆತಂಕವನ್ನು ವ್ಯಾಪಾರಿಗಳು ಎದುರಿಸುತ್ತಿದ್ದಾರೆ.

ನಗರದಲ್ಲಿ ಕೆಲವು ಪಾರಂಪರಿಕ ಮತ್ತು ಹಲವು ನೈಸರ್ಗಿಕ ಮಾರುಕಟ್ಟೆಗಳಿವೆ. ಶಿವಾಜಿನಗರದಲ್ಲಿ ಸದ್ಯ ಸ್ಮಾರ್ಟ್‌ಸಿಟಿ ಕಾಮಗಾರಿ ನಡೆಯುತ್ತಿದ್ದು, ಬಳಿಕ ಅಲ್ಲಿನ ಬದಿ ಬದಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಎಂಬ ಭಯ ಕೂಡ ವ್ಯಾಪಾರಿಗಳನ್ನು ಕಾಡುತ್ತಿದೆ. ನೈಸರ್ಗಿಕ ಮಾರುಕಟ್ಟೆ ಎಂದು ಘೋಷಿಸಬೇಕು ಎಂಬ ಒತ್ತಾಯವನ್ನು ವ್ಯಾಪಾರಿಗಳು ಬಿಬಿಎಂಪಿ ಮುಂದಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT