ಬುಧವಾರ, ಜನವರಿ 22, 2020
24 °C

ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ; ಅಹೋರಾತ್ರಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿಗಳ ಮೇಲೆ ಇತ್ತಿಚೆಗೆ ಕಬ್ಬಿಣದ ರಾಡು ಮತ್ತು ಲಾಠಿಗಳಿಂದ ಗುಂ‍ಪೊಂದು ದೌರ್ಜನ್ಯ ನಡೆಸಿದ್ದನ್ನು ಪ್ರತಿಭಟಿಸಿ ಇಲ್ಲಿನ ಮೌರ್ಯ ವೃತ್ತದಲ್ಲಿ ಅಹೋರಾತ್ರಿ ಸರದಿ ಧರಣಿ ಸತ್ಯಾಗ್ರಹ ನಡೆಸಿದ ವಿದ್ಯಾರ್ಥಿಗಳು ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜೀನಾಮೆಗೆ ಆಗ್ರಹಿಸಿದರು.

ಮಂಗಳವಾರ ಸಂಜೆ ಆರು ಗಂಟೆಯಿಂದ ಆರಂಭವಾದ ಧರಣಿ ಬುಧವಾರ ಸಂಜೆವರೆಗೂ ನಡೆಯಿತು. ಸುಮಾರು 50ಕ್ಕೂ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟಗಳು ಸೇರಿ ‘ನಾವು ಭಾರತದ ಪ್ರಜೆಗಳು’ ಸಂಘಟನೆ‌ ಆಶ್ರಯದಲ್ಲಿ ನಡೆಸಿದ ಸತ್ಯಾಗ್ರಹದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಆಯಿಷಿ ಘೋಷ್‌ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸಬೇಕು. ಮುಖ ಮುಚ್ಚಿಕೊಂಡು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ಗೂಂಡಾಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಹಾಗೂ ಜೆಎನ್‌ಯು ಕುಲಪತಿ ಜಗದೀಶ್‌ ಕುಮಾರ್‌ ಅವರನ್ನು ವಜಾ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.  

ಧರಣಿ ಸತ್ಯಾಗ್ರಹವನ್ನು ಜೆಎನ್‌ಯು ಮತ್ತು ದೆಹಲಿಯ ಶಾಹಿನ್‌ ಬಾಗ್‌ಗಳಲ್ಲಿ (ಎರಡೂ ಸ್ಥಳಗಳಲ್ಲಿ ಚಳವಳಿ ನಡೆಯುತ್ತಿದೆ) ಇನ್‌ಸ್ಟಾಗ್ರಾಂ ಮೂಲಕ ನೇರ ಪ್ರಸಾರ ಮಾಡಲಾಯಿತು. ಆರಂಭದಲ್ಲಿ ವಿದ್ಯಾರ್ಥಿಗಳ ಗುಂಪೊಂದು ಮೌರ್ಯ ಸರ್ಕಲ್‌ನಲ್ಲಿ ಸೇರಿ ಧರಣಿ ಕುಳಿತಿತು. ಬಹಳಷ್ಟು ವಿದ್ಯಾರ್ಥಿಗಳು ಮತ್ತು ನಾಗರಿಕರು ಸೇರಿಕೊಳ್ಳುವ ಮೂಲಕ ದೊಡ್ಡ ಪ್ರತಿಭಟನೆಯಾಗಿ ಮಾರ್ಪಟ್ಟಿತ್ತು.

ಅಹೋರಾತ್ರಿ ನಡೆದ ಧರಣಿ ಸತ್ಯಾಗ್ರಹ ನಿರೀಕ್ಷೆ ಮೀರಿ ಯಶಸ್ವಿಯಾಯಿತು. ಅನಿರೀಕ್ಷಿತವಾಗಿ ಊಟ, ಉಪಹಾರದ ನೆರವು ಹರಿದು ಬಂತು. ಯಾರೋ ರೆಡ್‌ ಕಾರ್ಪೆಟ್‌ ತಂದು ಹಾಸಿದರು. ಮತ್ಯಾರೊ ತಾತ್ಕಾಲಿಕ ಟೆಂಟ್‌ ನಿರ್ಮಿಸಿದರು. ನೂರಾರು ಜನರಿಗೆ ಕಾಫಿ ಚಹಾ, ಕಾಫಿ ಪೂರೈಸಲಾಯಿತು. ‘ಇದೊಂದು ಹೃದಯ ತುಂಬಿಬಂದ ಸಂದರ್ಭ’ ಎಂದು ಸತ್ಯಾಗ್ರಹದ ಸಂಘಟಕರು ತಿಳಿಸಿದ್ದಾರೆ.

ಹಗಲು ರಾತ್ರಿ ಎನ್ನದೆ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕೆಲವರು ಪದ್ಯಗಳನ್ನು ಬರೆದು ಓದಿದರು. ಇನ್ನೂ ಅನೇಕರು ಸುಭಾಷ್‌ಚಂದ್ರ ಬೋಸ್‌ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಂಡರು.  ಆಗ ಚಳವಳಿ ಬ್ರಿಟೀಷರ ವಿರುದ್ಧವಾಗಿತ್ತು. ಈಗ ನಮ್ಮವರ ವಿರುದ್ಧವೇ ನಾವು ಹೋರಾಡಬೇಕಿದೆ. ಚಳವಳಿ ಹಿಂಸಾತ್ಮಕವಾಗಬಾರದು. ಶಾಂತಿಯುತವಾಗಿರಬೇಕು. ಹಿಂಸೆ ರೂಪ ತಳೆದರೆ ಹೋರಾಟ ದಿಕ್ಕು ತಪ್ಪಬಹುದು ಎಂದು ಹೋರಾಟಗಾರರು ಎಚ್ಚರಿಸಿದರು.

ವಿದ್ಯಾರ್ಥಿಗಳಿಂದ ಅಹೋರಾತ್ರಿ ಪ್ರತಿಭಟನೆ

ಪೌರತ್ವ (ತಿದ್ದುಪಡಿ) ಕಾಯಿದೆ (ಸಿಎಎ) ಪರ ಬಿಜೆಪಿ ಕಾರ್ಯಕರ್ತರು ಜ್ಯೋತಿ ನಿವಾಸ್ ಕಾಲೇಜು ಬಳಿ ಸಹಿ ಸಂಗ್ರಹಿಸುವ ವೇಳೆ ವಿದ್ಯಾರ್ಥಿನಿಯರ ನಡುವೆ ನಡೆದ ಮಾತಿನ ಚಕಮಕಿ ಗುರುವಾರ ತೀವ್ರ ಸ್ವರೂಪ ಪಡೆದಿದ್ದು, ಕಾಲೇಜಿನ ಬಳಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

ಸಿಎಎ ಪರ ಬಲವಂತ ಸಹಿ ಸಂಗ್ರಹ ವಿರೋಧಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ‘ಗೋ ಟು ಪಾಕಿಸ್ತಾನ್’, ‘ಅನ್ ಎಜುಕೇಟೆಡ್’, ‘ಆ್ಯಂಟಿ ನ್ಯಾಷನಲ್’ ಎಂದು ನಿಂದಿಸಿದ್ದಾಗಿ ಆರೋಪಿಸಿ ವಿದ್ಯಾರ್ಥಿನಿಯರ ಗುಂಪು ಕಾಲೇಜು ಬಳಿ ಮೌನ ಪ್ರತಿಭಟನೆ ನಡೆಸಿತು.

ಪೊಲೀಸರು ಮಧ್ಯಪ್ರವೇಶಿಸಿ ಎಲ್ಲ ವಿದ್ಯಾರ್ಥಿನಿಯರನ್ನು ಕಾಲೇಜು ಆವರಣಕ್ಕೆ ಕಳುಹಿಸಿ ಗೇಟ್‌ ಬಂದ್‌ ಮಾಡಿಸಿದರು. ಇದಾದ ಬಳಿಕವೂ ಕಾಲೇಜು ಆವರಣದಲ್ಲಿ ಸುಮಾರು ಒಂದು ಗಂಟೆ ಕುಳಿತ ವಿದ್ಯಾಾರ್ಥಿನಿಯರು ಸಿಎಎ ವಿರೋಧಿ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು.

ಪ್ರತಿಭಟನೆ ವಿಚಾರ ತಿಳಿದು ವಿದ್ಯಾಾರ್ಥಿನಿಯರ ಪೋಷಕರು ಆತಂಕದಿಂದ ಕಾಲೇಜಿನ ಬಳಿ ಬಂದಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ಹೆಚ್ಚಿಸಲಾಗಿತ್ತು. ವಿದ್ಯಾರ್ಥಿಗಳ ಸೋಗಿನಲ್ಲಿ ಪ್ರತಿಭಟನೆಗೆ ಸಾಥ್ ನೀಡಲು ಬಂದಿದ್ದವರನ್ನು ಗುರುತಿಸಿ ವಾಪಸು ಕಳುಹಿಸಲಾಯಿತು.

ಮೌನ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿನಿಯರನ್ನು ಕಾಲೇಜು ಆಡಳಿತ ಮಂಡಳಿ, ಉಪನ್ಯಾಸಕರು, ಸ್ಥಳೀಯ ಪೊಲೀಸರು ಮನವೊಲಿಸುವಲ್ಲಿ ಯಶಸ್ವಿಯಾದರು. ಸಂಜೆ ನಾಲ್ಕು ಗಂಟೆ ಬಳಿಕ ಕಾಲೇಜು ಬಳಿ ಪರಿಸ್ಥಿತಿ ತಿಳಿಯಾಯಿತು. 

ಸ್ಥಳೀಯ ಶಾಸಕ ರಾಮಲಿಂಗಾರೆಡ್ಡಿ ಕಾಲೇಜಿಗೆ ಭೇಟಿ ನೀಡಿ ಸಿಬ್ಬಂದಿ ಮತ್ತು ವಿದ್ಯಾಾರ್ಥಿಗಳ ಜತೆ ಚರ್ಚಿಸಿದರು. 

‘ಸಿಎಎ ಪರವಾಗಿ ಬಿಜೆಪಿ ಕಾರ್ಯಕರ್ತರು. ಸಹಿ ಸಂಗ್ರಹ ಮಾಡಲಿ ನಮ್ಮದೇನೂ ತಕರಾರಿಲ್ಲ. ಜನನಿಬಿಡ ಪ್ರದೇಶಗಳಲ್ಲಿ ಮಾಡಿಕೊಳ್ಳಲಿ, ಸಾರ್ವಜನಿಕ ಮೈದಾನಗಳಲ್ಲಿ ನಡೆಸಲಿ. ಅದನ್ನು ಬಿಟ್ಟು ಕಾಲೇಜು ಬಳಿ ಬಂದು ಸಹಿ ಮಾಡುವಂತೆ ವಿದ್ಯಾರ್ಥಿನಿಯರ ಬಳಿ ಒತ್ತಾಯಿಸಿ, ಅಲ್ಲಿನ ಶೈಕ್ಷಣಿಕ ವಾತಾವರಣ ಕೆಡಿಸುವುದು ಸರಿಯಲ್ಲ. ಈ ವಿಚಾರವನ್ನು ಸಹಿ ಸಂಗ್ರಹ ಮಾಡಲು ಬಂದಿದ್ದ ಬಿಜೆಪಿ ಮುಖಂಡರಿಗೂ ಹೇಳಿದ್ದೇನೆ’ ಎಂದು ರೆಡ್ಡಿ ಹೇಳಿದರು.

‘ದೇಶದಲ್ಲಿ ಸಿಎಎ ಪರವೂ ಇದ್ದಾರೆ. ವಿರೋಧವೂ ಇದ್ದಾರೆ. ಅದು ವೈಯಕ್ತಿಕ ನಿರ್ಧಾರ . ಈ ಬಗ್ಗೆ ನಾನು ಮಾತನಾಡುವುದಿಲ್ಲ’ ಎಂದರು.

‘ಜೆಎನ್‌ಯು ಮಾದರಿಯಲ್ಲಿ ಹಲ್ಲೆ ಮಾಡುತ್ತೇವೆ ಎಂದು ಕೆಲವರು ಬೆದರಿಸಿದ್ದಾರೆ’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಯಾವುದೇ ಕಾರಣಕ್ಕೂ ಆ ರೀತಿ ಮಾಡಲು ಬಿಡುವುದಿಲ್ಲ. ತಾಕತ್ತಿದ್ದರೆ ಬರಲಿ’ಎಂದು ಎಚ್ಚರಿಸಿದರು.

ಪರಿಶೀಲಿಸಿ ಕ್ರಮ: ಮುಖ್ಯಮಂತ್ರಿ

‘ಜ್ಯೋತಿ ನಿವಾಸ್‌ ಕಾಲೇಜಿನ ಘಟನೆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’  ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಘಟನೆ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಾರೆ. ಅಗತ್ಯ ಬಿದ್ದರೆ ತನಿಖೆ ಮಾಡಿಸೋಣ’ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಸಣ್ಣ ಘಟನೆಯನ್ನು ದೊಡ್ಡದು ಮಾಡುವುದು ಬೇಡ. ಈ ಬಗ್ಗೆ ಪರಿಶೀಲಿಸುವಂತೆ ಪೊಲೀಸರಿಗೆ ತಿಳಿಸಿದ್ದೇನೆ’ ಎಂದರು.

ಕಾಂಗ್ರೆಸ್‌ ನಾಯಕ ರಾಮಲಿಂಗಾರೆಡ್ಡಿ ಕಾಲೇಜಿಗೆ ಭೇಟಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ‘ಅವರು ರಾಜಕಾರಣ ಮಾಡಲು ಹೊರಟಿದ್ದು, ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.

ಗುಹಾ ಕಿವಿಮಾತು

ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಖ್ಯಾತ ಇತಿಹಾಸ ತಜ್ಞ ರಾಮಚಂದ್ರ ಗುಹಾ, ‘ಕೆಲವು ಹಿತಾಸಕ್ತಿಗಳು ಗಾಂಧಿ ಮತ್ತು ಅಂಬೇಡ್ಕರ್‌ ನಡುವೆ ವೈಚಾರಿಕ ಸಂಘರ್ಷವಿತ್ತು ಎಂದು ಹೇಳುವ ಮೂಲಕ ಚಳವಳಿ ಒಡೆಯಲು  ಯತ್ನಿಸುತ್ತಿವೆ. ಇಂಥ ಶಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಕಿವಿಮಾತು ಹೇಳಿದರು.

ಗಾಂಧಿ ಮತ್ತು ಅಂಬೇಡ್ಕರ್‌ ನಡುವೆ ಹಲವು ವಿಚಾರಗಳಲ್ಲಿ ಒಮ್ಮತ ಇರಲಿಲ್ಲ. ಆದರೆ, ಅಸ್ಪೃಶ್ಯತೆ ತೊಲಗಿಸಿ, ಸಮಾನತೆ ತರುವುದಕ್ಕೆ ಇಬ್ಬರೂ ಬದ್ಧರಾಗಿದ್ದರು. ಗಾಂಧಿ ಸದಾ ಹಿಂದು– ಮುಸ್ಲಿಂ ಏಕತೆ ಕುರಿತು ಪ್ರತಿಪಾದಿಸುತ್ತಿದ್ದರು ಎಂದರು.  

ನಿಯೋಗದಿಂದ ಡಿಸಿಎಂ ಭೇಟಿ

ಇನ್ನು ಘಟನೆ ಸಂಬಂಧ ಗೋಪಿನಾಥ್ ರೆಡ್ಡಿ ನೇತೃತ್ವದ ಬಿಜೆಪಿ ನಿಯೋಗ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್ ಅವರನ್ನು ಭೇಟಿ ಮಾಡಿತು.

‘ಕಾಲೇಜಿನಲ್ಲಿ ಅನಗತ್ಯವಾಗಿ ಗೊಂದಲ ಸೃಷ್ಟಿಸಿ, ರಾಜಕೀಯ ಮಾಡಲಾಗುತ್ತಿದೆ. ಪೌರತ್ವ ಕಾಯ್ದೆ ಪರ ಸಹಿ ಸಂಗ್ರಹಿಸಲು ನಾವು ಹೋಗಿದ್ದೆವು. ಆದರೆ ಕಾಲೇಜಿನ ಕೆಲ ಉಪನ್ಯಾಸಕರು, ವಿದ್ಯಾರ್ಥಿನಿಯರು ಅವಾಂತರ ಸೃಷ್ಟಿಸಿ ವಾಗ್ವಾದಕ್ಕಿಳಿದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಈ ರೀತಿ ಶಿಕ್ಷಣ ಸಂಸ್ಥೆಗಳನ್ನು ರಾಜಕೀಯವಾಗಿ ಬಳಸಿಕೊಳ್ಳದಂತೆ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

***

ಜ್ಯೋತಿ ನಿವಾಸ್‌ ಕಾಲೇಜಿನ ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ. ಕಾಲೇಜಿನ ಬಳಿ ಪೊಲೀಸರ ಭದ್ರತೆ ಮುಂದುವರಿಸಲಾಗಿದೆ
–ಇಶಾಪಂಥ್, ಡಿಸಿಪಿ, ಆಗ್ನೇಯ ವಿಭಾಗ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು