ಬೆಂಗಳೂರು: ಪ್ರಾಂಶುಪಾಲರು ನಿಂದಿಸಿದರು ಎಂಬ ಕಾರಣಕ್ಕೆ ಶಾಲೆಯ ಕಟ್ಟಡದ ಮೇಲಿಂದಲೇ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಬಾಪೂಜಿನಗರದ ಅಲ್ ಫಹಾದ್ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಶುಕ್ರವಾರ ಮಧ್ಯಾಹ್ನ ಮೂರನೇ ಮಹಡಿಯಿಂದ ಜಿಗಿದಿದ್ದಾಳೆ. ತಲೆ, ಕಾಲಿಗೆ ತೀವ್ರ ಪೆಟ್ಟು ಬಿದ್ದಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕಿ ಕಟ್ಟಡದಿಂದ ಜಿಗಿಯುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಇದುವರೆಗೂ ಯಾರು ದೂರು ನೀಡಿಲ್ಲ. ಪ್ರಾಂಶುಪಾಲರು ಹಾಗೂ ಶಿಕ್ಷಕರ ಹೇಳಿಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದರು.