ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆಪತ್ರಿಕೆ ಲೀಕ್ ವದಂತಿ; ವಿದ್ಯಾರ್ಥಿಗಳು ವಶಕ್ಕೆ

Last Updated 10 ಏಪ್ರಿಲ್ 2019, 19:37 IST
ಅಕ್ಷರ ಗಾತ್ರ

ಬೆಂಗಳೂರು: ‘ಪಿಯುಸಿ ಕನ್ನಡ ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆ’ ಎಂದು ವದಂತಿ ಸೃಷ್ಟಿಸಿ ವಿದ್ಯಾರ್ಥಿಗಳ ಹಾಗೂ ಪೋಷಕರ ಆತಂಕಕ್ಕೆ ಕಾರಣವಾಗಿದ್ದ ಯಾದಗಿರಿಯ ಪಿಯುಸಿ ವಿದ್ಯಾರ್ಥಿಗಳಿಬ್ಬರನ್ನು ಸೈಬರ್ ಕ್ರೈಂ ಪೊಲೀಸರು ವಶಕ್ಕೆ ‍ಪಡೆದು ಬಾಲಮಂದಿರಕ್ಕೆ ಕಳುಹಿಸಿದ್ದಾರೆ.

2017ರ ಪ್ರಶ್ನೆಪತ್ರಿಕೆಯನ್ನು ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡಿದ್ದ ವಿದ್ಯಾರ್ಥಿಗಳು, ಅದರ ಇಸವಿಯನ್ನು 2019 ಎಂದು ಬದಲಾಯಿಸಿದ್ದರು. ನಂತರ ಆ ಪ್ರತಿಯನ್ನೇ ವಾಟ್ಸ್‌ಆ್ಯಪ್‌ನಲ್ಲಿ ಹಲವರಿಗೆ ಕಳುಹಿಸಿ, ‘ಈ ಸಲದ ಕನ್ನಡ ಪ್ರಶ್ನೆ‍ಪತ್ರಿಕೆ ಸೋರಿಕೆ ಆಗಿದೆ’ ಎಂದು ಸುದ್ದಿ ಹಬ್ಬಿಸಿದ್ದರು. ಅದು ಒಬ್ಬರಿಂದ ಒಬ್ಬರಿಗೆ ರವಾನೆಯಾಗಿ ದೊಡ್ಡ ಮಟ್ಟದಲ್ಲಿ ಆತಂಕ ಸೃಷ್ಟಿಯಾಗಿತ್ತು.

ಪ್ರಶ್ನೆಪತ್ರಿಕೆ ಹರಿದಾಡುತ್ತಿರುವ ಬಗ್ಗೆ ಸಿಸಿಬಿ ಪೊಲೀಸರು ಪಿಯು ಮಂಡಳಿಗೆ ವಿಷಯ ಮುಟ್ಟಿಸಿದ್ದರು. ಕ್ರಮ ಸಂಖ್ಯೆ ಪರಿಶೀಲಿಸಿದ ಅಧಿಕಾರಿಗಳು, ‘ಅದು 2017ರ ಪ್ರಶ್ನೆಪತ್ರಿಕೆ’ ಎಂದು ಸ್ಪಷ್ಟ‍ಪಡಿಸಿದ್ದರು. ಅಲ್ಲದೇ, ವದಂತಿ ಸೃಷ್ಟಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಪಿ.ಸಿ.ಜಾಫರ್ ಅವರೇ ಸೈಬರ್ ಕ್ರೈಂ ಪೊಲೀಸರಿಗೆ ದೂರು ಕೊಟ್ಟಿದ್ದರು.

ತನಿಖೆ ಕೈಗೆತ್ತಿಕೊಂಡ ಪೊಲೀಸರು, ಯಾರ‍್ಯಾರ ಮೊಬೈಲ್‌ಗಳಿಗೆ ಪ್ರಶ್ನೆಪತ್ರಿಕೆ ‍ಪ್ರತಿ ಹೋಗಿತ್ತೋ ಅವರೆಲ್ಲರ ಪೂರ್ವಾಪರವನ್ನೂ ಪರಿಶೀಲಿಸಿದ್ದರು. ಕೊನೆಗೆ 25 ವಿದ್ಯಾರ್ಥಿಗಳನ್ನು ಕಚೇರಿಗೆ ಕರೆಸಿ ವಿಚಾರಣೆ ನಡೆಸಿದಾಗ, ಇಬ್ಬರು ತಪ್ಪೊಪ್ಪಿಕೊಂಡಿದ್ದಾರೆ.

‘ಸುಮ್ಮನೆ ತಮಾಷೆ ಮಾಡಲೆಂದು ಹಳೆಯದೊಂದು ಪ್ರಶ್ನೆಪತ್ರಿಕೆಯನ್ನು ವಾಟ್ಸ್‌ಆ್ಯಪ್‌ಗೆ ಹಾಕಿದ್ದೆವು. ಅದು ಇಷ್ಟೊಂದು ಗಂಭೀರವಾಗುತ್ತದೆ ಎಂದು ಗೊತ್ತಿರಲಿಲ್ಲ. ಹಣ ಮಾಡುವ ಉದ್ದೇಶದಿಂದ ಹೀಗೆ ಮಾಡಲಿಲ್ಲ. ದಯವಿಟ್ಟು ನಮ್ಮನ್ನು ಕ್ಷಮಿಸಿ’ ಎಂದು ವಿದ್ಯಾರ್ಥಿಗಳು ಅಂಗಲಾಚಿದ್ದಾಗಿ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT