ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನಗರ ರೈಲು: ಕೆಎಸ್‌ಆರ್‌–ದೇವನಹಳ್ಳಿ ಮಾರ್ಗ ಮೊದಲು ನಿರ್ಮಾಣವಾಗಲಿ

ದಶಕಗಳ ಕನಸು ಸಾಕಾರದತ್ತ
Last Updated 7 ಅಕ್ಟೋಬರ್ 2020, 20:17 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಉಪನಗರ ರೈಲು ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವ ಬೆನ್ನಲ್ಲೇ, ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಗರ ರೈಲು ನಿಲ್ದಾಣ– ದೇವನಹಳ್ಳಿ ಕಾರಿಡಾರನ್ನು ಆದ್ಯತೆ ಮೇರೆಗೆ ನಿರ್ಮಿಸಬೇಕು ಎಂದು ರೈಲ್ವೆ ಹೋರಾಟಗಾರರು ಒತ್ತಾಯಿಸಿದ್ದಾರೆ.

ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮವನ್ನು (ಕೆ–ರೈಡ್‌) ಉಪನಗರ ರೈಲು ಯೋಜನೆ ಅನುಷ್ಠಾನದ ವಿಶೇಷ ಉದ್ದೇಶದ ಘಟಕವನ್ನಾಗಿ (ಎಸ್‌ಪಿವಿ) ಗೊತ್ತುಪಡಿಸಲಾಗಿದೆ. ಕೇಂದ್ರ ಸರ್ಕಾರ 2020–21ನೇ ಸಾಲಿನ ಬಜೆಟ್‌ನಲ್ಲಿ ಪ್ರಕಟಿಸಿರುವ ಪರಿಷ್ಕೃತ ಯೋಜನೆಯ ಪ್ರಕಾರ ಈ ಯೋಜನೆಯಡಿ ನಾಲ್ಕು ಕಾರಿಡಾರ್‌ಗಳನ್ನು ಹೊಸತಾಗಿ ನಿರ್ಮಿಸಲಾಗುತ್ತಿದೆ.

ಕೆಎಸ್‌ಆರ್‌ ರೈಲು ನಿಲ್ದಾಣ– ಯಶವಂತಪುರ– ದೇವನಹಳ್ಳಿ ಕಾರಿಡಾರ್‌ (41.40 ಕಿ.ಮೀ), ಚಿಕ್ಕಬಾಣಾವರ–ಯಶವಂತಪುರ– ಬೈಯಪ್ಪನಹಳ್ಳಿ ಕಾರಿಡಾರ್‌ ( 25.01 ಕಿ.ಮೀ), ಕೆಂಗೇರಿ–ಬೈಯಪ್ಪನಹಳ್ಳಿ– ವೈಟ್‌ಫೀಲ್ಡ್ ಕಾರಿಡಾರ್‌ (36.12 ಕಿ.ಮೀ) ಹಾಗೂ ಹೀಲಳಿಗೆ–ಬೈಯಪ್ಪನಹಳ್ಳಿ–ಯಲಹಂಕ–ರಾಜಾನುಕುಂಟೆ ಕಾರಿಡಾರ್‌ (46.24 ಕಿ.ಮೀ). ನಿರ್ಮಾಣವಾಗಲಿವೆ. ಈ ಯೋಜನೆಯ ಅನುಷ್ಠಾನದ ಸಂಪೂರ್ಣ ಉಸ್ತುವಾರಿ ಕೆ–ರೈಡ್‌ ಸಂಸ್ಥೆಯದಾದರೂ, ಈ ನಾಲ್ಕು ಕಾರಿಡಾರ್‌ಗಳಲ್ಲಿ ಯಾವುದನ್ನು ಮೊದಲು ಅನುಷ್ಠಾನಗೊಳಿಸಬೇಕು ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದು ರಾಜ್ಯ ಸರ್ಕಾರ.

ಇನ್ನೊಂದೆಡೆ, ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದಾಗಿದೆ. ಈ ಕಾರಣಕ್ಕೆ ಕೆಎಸ್‌ಆರ್‌– ದೇವನಹಳ್ಳಿ ಬದಲು ಬೇರೆ ಕಾರಿಡಾರ್‌ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಬಹುದು ಎಂಬ ಆತಂಕ ಈ ಯೋಜನೆಗೆ ಒತ್ತಾಯಿಸುತ್ತಿರುವ ಹೋರಾಟಗಾರರನ್ನು ಕಾಡುತ್ತಿದೆ.

‘ಕೆಎಸ್‌ಆರ್‌ ರೈಲು ನಿಲ್ದಾಣ– ದೇವನಹಳ್ಳಿ ಕಾರಿಡಾರ್‌ ತುರ್ತಾಗಿ ನಿರ್ಮಿಸಬೇಕು. ಮೂರು ವರ್ಷಗಳಲ್ಲಿ ಇದರ ಕಾಮಗಾರಿ ಪೂರ್ಣಗೊಳಿಸಬಹುದು. ವಿಮಾನನಿಲ್ದಾಣ ಸಂಪರ್ಕಿಸುವ ಮೆಟ್ರೊ ಕಾರಿಡಾರ್‌ಗೆ ಇನ್ನೂ ಕೇಂದ್ರದಿಂದ ಅನುಮೋದನೆ ಸಿಕ್ಕಿಲ್ಲ. ಒಂದು ವೇಳೆ ಸಿಕ್ಕರೂ ಅದರ ಅನುಷ್ಠಾನಕ್ಕೆ ಏನಿಲ್ಲವೆಂದರೂ ಆರು ವರ್ಷ ಬೇಕು’ ಎನ್ನುತ್ತಾರೆ ಸಿಟಿಜನ್ಸ್‌ ಫಾರ್‌ ಸಿಟಿಜನ್ಸ್‌ ಸಂಘಟನೆಯ ರಾಜ್‌ಕುಮಾರ್‌ ದುಗರ್‌.

‘ನಗರದಿಂದ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸುವ ಕೆಎಸ್‌ಆರ್‌– ದೇವನಹಳ್ಳಿ ಮಾರ್ಗಕ್ಕೆ ಹೆಚ್ಚಿನ ಭೂಸ್ವಾಧೀನದ ಅಗತ್ಯವಿಲ್ಲ. ಕೆಎಸ್‌ಆರ್‌ ರೈಲು ನಿಲ್ದಾಣ ಹಾಗೂ ಯಶವಂತಪುರ ರೈಲು ನಿಲ್ದಾಣಗಳ ಮೂಲಕ ಹಾದು ಹೋಗುವ ಈ ಮಾರ್ಗಕ್ಕೆ ಎರಡು ಕಡೆ ಮೆಟ್ರೊ ಸಂಪರ್ಕವಿದೆ. ಹಾಗಾಗಿ ನಗರದ ಇತರ ಪ್ರದೇಶಗಳಿಗೂ ಸುಲಭ ಸಂಪರ್ಕ ಲಭ್ಯ. ವಿಮಾನನಿಲ್ದಾಣ ತಲುಪುವ ಪ್ರಯಾಣಿಕರು ರೈಲು ಬಳಸಿದರೆ ರಸ್ತೆಗಳ ಮೇಲಿನ ಒತ್ತಡ ಬಹಳಷ್ಟು ಕಡಿಮೆಯಾಗಲಿದೆ’ ಎಂದು ಅವರು ವಿವರಿಸಿದರು.

‘ಸರ್ಕಾರ ಹೊಸ ಹಳಿಗಳ ನಿರ್ಮಾಣದವರೆಗೆ ಕಾಯಬಾರದು. ಈಗಿರುವ ಹಳಿಗಳನ್ನೇ ಬಳಸಿ ಉಪನಗರ ರೈಲುಗಳ ಪ್ರಮಾಣ ಹೆಚ್ಚಿಸಬೇಕು’ ಎಂದು ಒತ್ತಾಯಿಸುತ್ತಾರೆ ಪ್ರಜಾ ರಾಗ್‌ ಸಂಘಟನೆಯ ಸಂಜೀವ ದ್ಯಾಮಣ್ಣವರ್‌.

‘ಈಗಾಗಲೇ ದಂಡುಪಾಳ್ಯ– ವೈಟ್‌ಫೀಲ್ಡ್‌ ನಡುವೆ ನಾಲ್ಕು ಹಳಿಗಳನ್ನು ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ಕಂಟೋನ್ಮೆಂಟ್‌ ನಿಲ್ದಾಣವನ್ನೂ ಮೇಲ್ದರ್ಜೆಗೇರಿಸಲಾಗುತ್ತಿದೆ. ಬೈಯಪ್ಪನಹಳ್ಳಿಯ ನೂತನ ಟರ್ಮಿನಲ್‌ ಕೂಡ ಸಜ್ಜಾಗಿದೆ. ಹೊರಗಡೆಯಿಂದ ಬರುವ ಕೆಲವು ರೈಲುಗಳನ್ನು ನಗರದೊಳಗೆ ಪ್ರವೇಶ ನಿರ್ಬಂಧಿಸಿ ಉಪನಗರ ರೈಲಿನ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ‍ಪೂರ್ಣಗೊಳಿಸಬೇಕು’ ಎಂದು ಅವರು ಸಲಹೆ ನೀಡಿದರು.

‘ಕೋವಿಡ್‌ ಕಾಣಿಸಿಕೊಂಡ ಬಳಿಕ ರೈಲುಗಳ ಸಂಚಾರ ಪೂರ್ಣಪ್ರಮಾಣದಲ್ಲಿ ಪುನರಾರಂಭವಾಗಿಲ್ಲ. ನಮ್ಮ ಮೆಟ್ರೊಗೆ ಹೋಲಿಸಿದರೆ ರೈಲು ಹೆಚ್ಚು ಸುರಕ್ಷಿತ. ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಹೆಚ್ಚು ಪ್ರಯಾಣಿಕರರು ಸುರಕ್ಷಿತ ಅಂತರ ಕಾಪಾಡಿಕೊಂಡು ಪ್ರಯಾಣಿಸುವಂತೆ ಮಾಡಲು ರೈಲಿನಲ್ಲಿ ಅವಕಾಶ ಇದೆ’ ಎಂದರು.

ಸ್ಥಗಿತಗೊಂಡ ರೈಲುಗಳ ಸಂಚಾರವನ್ನು ಶೀಘ್ರ ಆರಂಭಿಸಬೇಕು ಎಂದೂ ಅವರು ಒತ್ತಾಯಿಸಿದರು.

***

ಉಪನಗರ ರೈಲು ಯೋಜನೆ ಬಗ್ಗೆ ರಾಜ್ಯ ಸರ್ಕಾರವೂ ಆಸಕ್ತಿ ವಹಿಸಿ ಕೆಲಸ ಮಾಡಿದೆ. ಈ ಯೋಜನೆ ಶೀಘ್ರವೇ ಅನುಷ್ಠಾನಗೊಳ್ಳಲಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿವೆ.

– ಪಿ.ಸಿ.ಮೋಹನ್‌, ಸಂಸದ

‘₹ 1 ಸಾವಿರ ಕೋಟಿ ಅನುದಾನ ಸಿಗದೆ ಕೆಲಸ ಶುರುವಾಗದು’

ಕೇಂದ್ರ ಸಚಿವ ಸಂಪುಟವು ಉಪನಗರ ರೈಲು ಯೋಜನೆಗೆ ಅನುಮೋದನೆ ನೀಡಿರಬಹುದು. ಆದರೆ, ಸಾಲ ಸಿಗದಿದ್ದರೆ ಈ ಯೋಜನೆಯ ಕಾಮಗಾರಿ ಮತ್ತಷ್ಟು ವಿಳಂಬವಾಗಬಹುದು.

‘₹19 ಸಾವಿರ ಕೋಟಿ ಮೊತ್ತದ ಯೋಜನೆಯ ಕಾಮಗಾರಿ ಶುರು ಮಾಡಲು ಪ್ರಾಥಮಿಕವಾಗಿ ಕನಿಷ್ಠ ₹1 ಸಾವಿರ ಕೋಟಿಯಾದರೂ ಬೇಕಿದೆ. ಇಷ್ಟು ಅನುದಾನ ದೊರೆತರೆ ಶೇ 50ರಷ್ಟು ಭೂಸ್ವಾಧೀನ ಪ್ರಕ್ರಿಯೆ ಮುಗಿಯಲಿದೆ. ಅಲ್ಲದೇ ಶೇ 5ರಷ್ಟು ಕಾಮಗಾರಿ ಆರಂಭವೂ ಆಗಲಿದೆ’ ಎಂದು ಕೆ–ರೈಡ್‌ ಮೂಲಗಳು ತಿಳಿಸಿವೆ.

ಈ ಯೋಜನೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುವ ಸಲುವಾಗಿ ಜಾಗತಿಕ ಮಟ್ಟದ ಹಣಕಾಸು ಸಂಸ್ಥೆಗಳ ಜತೆ ಕೆ–ರೈಡ್‌ ಮಾತುಕತೆ ನಡೆಸಿತ್ತು. ವಿಶ್ವಬ್ಯಾಂಕ್, ಜೈಕಾ, ಕೊರಿಯಾ ಎಕ್ಸಿಮ್ ಬ್ಯಾಂಕ್, ಏಷ್ಯನ್ ಇನ್‍ಫ್ರಾಸ್ಟ್ರಕ್ಚರ್ ಇನ್‍ವೆಸ್ಟ್‌ಮೆಂಟ್ ಬ್ಯಾಂಕ್, ಏಷ್ಯನ್ ಡೆವಲಪ್‍ಮೆಂಟ್ ಬ್ಯಾಂಕ್ ಜತೆಗೂ ಮಾತುಕತೆ ನಡೆದಿತ್ತು. ಆದರೆ, ಈ ಕುರಿತು ಮಾತುಕತೆ ಅಂತಿಮವಾಗಿಲ್ಲ.

ಯಾರ ಪಾಲು ಎಷ್ಟು?

ಕೇಂದ್ರ ಸರ್ಕಾರ; ₹2,953.50 ಕೋಟಿ

ರಾಜ್ಯ ಸರ್ಕಾರ; ₹2,953.50 ಕೋಟಿ

ಸಾಲ; ₹8,860 ಕೋಟಿ

ಜಿಎಸ್‌ಟಿ, ಇತರೆ ಸುಂಕಗಳಿಗೆ ಮಾಡಬೇಕಾದ ಪ್ರತ್ಯೇಕ ಖರ್ಚು; ₹3,854 ಕೋಟಿ

ಹೋರಾಟಕ್ಕೆ ಸಂದ ಜಯ

ಉಪನಗರ ರೈಲಿನ ಪ್ರಸ್ತಾವ 1983ರಿಂದಲೂ ಇತ್ತಾದರೂ ಈ ಕುರಿತ ಕೂಗು ಜೋರಾಗಿದ್ದು 2016ರಲ್ಲಿ ‘ಚುಕುಬುಕು ಬೇಕು’ ಹೋರಾಟದ ಬಳಿಕ. ಹೋರಾಟಗಾರರು ಜನಪ್ರತಿನಿಧಿಗಳ ಬೆನ್ನುಬಿದ್ದಿದ್ದರಿಂದ ಕೇಂದ್ರ ಸರ್ಕಾರ 2018–19ರ ಬಜೆಟ್‌ನಲ್ಲಿ ₹ 17ಸಾವಿರ ಕೋಟಿ ವೆಚ್ಚದ ಯೊಜನೆಯನ್ನು ಪ್ರಕಟಿಸಿತು. 2018ರ ನವೆಂಬರ್‌ನಲ್ಲಿ ಡಿಪಿಆರ್‌ ಕರಡು ಸಿದ್ಧವಾಯಿತು. ಆ ಬಳಿಕ ಯೋಜನಾ ವೆಚ್ಚ ಭರಿಸುವ ಬಗ್ಗೆ ಕೇಂದ್ರ –ರಾಜ್ಯ ಸರ್ಕಾರಗಳ ನಡುವೆ ಹಗ್ಗ ಜಗ್ಗಾಟ ನಡೆಯಿತು. 2019ರಲ್ಲಿ ಲೋಕಸಭಾ ಚುನಾವಣೆಯ ಸಮೀಪಿಸಿದಾಗ ಈ ಯೋಜನೆಗೆ ಅಗತ್ಯ ಇರುವ ಭೂಮಿಯನ್ನು ಉಚಿತವಾಗಿ ಬಿಟ್ಟುಕೊಡುವ ಬಗ್ಗೆ ರೈಲ್ವೆ ಇಲಾಖೆ ರಾಜ್ಯ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿತು. 2019ರಲ್ಲಿ ಪಿಂಕ್ ಬುಕ್‌ನಲ್ಲಿ ಈ ಯೋಜನೆಗೆ ₹ 10 ಕೋಟಿ ಹಂಚಿಕೆ ಮಾಡಲಾಯಿತು. ಇನ್ನೇನು ಯೋಜನೆ ಅನುಷ್ಠಾನವಾಗಲಿದೆ ಎನ್ನುವಾಗ ಉಚಿತವಾಗಿ ರೈಲ್ವೆ ಇಲಾಖೆಯ ಭೂಮಿ ಒದಗಿಸುವ ಒಪ್ಪಂದದ ಬಗ್ಗೆ ಪ್ರಧಾನಿ ಕಚೇರಿ ಆಕ್ಷೇಪ ವ್ಯಕ್ತಪಡಿಸಿತು. ವೆಚ್ಚವನ್ನು ಕಡಿತಗೊಳಿಸವಂತೆಯೂ ಸೂಚನೆ ನೀಡಿತು. ರೈಟ್ಸ್‌ ಸಂಸ್ಥೆ ಮೊದಲು ತಯಾರಿಸಿದ್ದ ಡಿಪಿಆರ್‌ ಅನ್ನು ಕೇಂದ್ರದ ಸೂಚನೆ ಮೇರೆಗೆ ಪರಿಷ್ಕರಿಸಿತು. ಯೋಜನಾ ವೆಚ್ಚವನ್ನು ₹19,500 ಕೋಟಿಯಿಂದ ₹16,500 ಕೋಟಿಗೆ ತಗ್ಗಿಸಿತು. ಚಿಕ್ಕಬಾಣಾವರದಿಂದ ನೆಲಮಂಗಲ ನಡುವಿನ ಮಾರ್ಗವನ್ನು ಕೈಬಿಟ್ಟಿತು. ರೈಲು ಹಳಿಗಳ ಒಟ್ಟು ಉದ್ದವನ್ನು 161 ಕಿ.ಮೀ.ಯಿಂದ 148 ಕಿ.ಮೀ.ಗೆ ಹಾಗೂ ನಿಲ್ದಾಣಗಳ ಸಂಖ್ಯೆಯನ್ನು 86ರಿಂದ 57ಕ್ಕೆ ಇಳಿಸಿತು. 2020–21ನೇ ಸಾಲಿನ ಬಜೆಟ್‌ನಲ್ಲಿ ಈ ಯೋಜನೆಯನ್ನು ಮತ್ತೆ ಪ್ರಕಟಿಸಲಾಯಿತು. ₹500 ಕೋಟಿಗಿಂತ ಹೆಚ್ಚು ಅನುದಾನ ಬಯಸುವ ಯೋಜನೆಗಳಿಗೆ ಹಣಕಾಸು ವ್ಯವಹಾರಗಳ ಸಂಪುಟ ಸಮಿತಿಯ ಅನುಮೋದನೆ ಅಗತ್ಯ. ಆದರೆ ಈ ಯೋಜನೆಗೆ ಸಂಪುಟದ ಒಪ್ಪಿಗೆ ಇದುವರೆಗೆ ಸಿಕ್ಕಿರಲಿಲ್ಲ. ಈಗ ಒಪ್ಪಿಗೆ ಸಿಕ್ಕಿದ್ದರಿಂದ ಈ ಯೋಜನೆ ಸಾಕಾರವಾಗುವ ಕನಸು ಮತ್ತೆ ಗರಿಗೆದರಿದೆ.

ಯೋಜನೆಯ ಹಾದಿ....

1983: ಬೆಂಗಳೂರಿನಲ್ಲಿ 3 ಪ್ರಯಾಣಿಕರ ರೈಲು ಮಾರ್ಗ ಹಾಗೂ 58 ಕಿ.ಮೀ ಉದ್ದದ ವರ್ತುಲ ರೈಲು ಮಾರ್ಗ ನಿರ್ಮಿಸಲು ರೈಲ್ವೆ ಇಲಾಖೆ ಪ್ರಸ್ತಾಪ

1988; ನಗರಕ್ಕೆ ಪ್ರಯಾಣಿಕ ರೈಲು ವ್ಯವಸ್ಥೆ ಬಲಪಡಿಸುವಂತೆ ರೈಟ್ಸ್‌ ಸಂಸ್ಥೆ ಪ್ರತಿಪಾದನೆ

1998; ರಾಜ್ಯ ಸರ್ಕಾರ ಸ್ಥಳೀಯ ರೈಲು ಸೇವೆ ಆರಂಭಿಸುವ ಬಗ್ಗೆ ವಿಶ್ವಬ್ಯಾಂಕ್‌ ನೆರವಿನಿಂದ ಸರ್ವೆ ಆರಂಭಿಸಿದ ರೈಟ್ಸ್‌

2007; ಬೆಂಗಳೂರು ಮತ್ತು ಸಮೀಪದ ನಗರಗಳಿಗೆ ಪ್ರಯಾಣಿಕ ರೈಲು ಆರಂಭಿಸುವಂತೆ ರೈಟ್ಸ್‌ ಸರ್ವೆಯಲ್ಲಿ ಶಿಫಾರಸು.

2009ರ ನವೆಂಬರ್‌: ಹೊರವಲಯದ ನಿಲ್ದಾಣಗಳನ್ನು ಸಂಪರ್ಕಿಸುವ ಪ್ರಯಾಣಿಕ ರೈಲು ಸೇವೆ ಆರಂಭಿಸುವಂತೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯನ್ನು ಕೋರಿದ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ (ಬಿಎಂಎಲ್‌ಟಿಎ).

2010 ಮಾರ್ಚ್‌; ಸ್ಥಳೀಯವಾಗಿ ರೈಲು ಯೋಜನೆ ಆರಂಭಿಸುವಂತೆ ಕೇಂದ್ರವನ್ನು ಕೋರಿದ ರಾಜ್ಯ ಸರ್ಕಾರ. ಶೇ 50ರಷ್ಟು ವೆಚ್ಚ ಭರಿಸುವ ಭರವಸೆ.

2014 ಜುಲೈ; ರೈಲ್ವೆ ಬಜೆಟ್‌ನಲ್ಲಿ ನಗರಕ್ಕೆ ಉಪನಗರ ರೈಲಿನ ಅಗತ್ಯ ಪ್ರಸ್ತಾಪಿಸಿದ್ದ ಡಿ.ವಿ.ಸದಾನಂದ ಗೌಡ

2017ರ ನವೆಂಬರ್‌; ರೈಟ್ಸ್ ಸಂಸ್ಥೆಯಿಂದ ಯೋಜನೆಯ ಕಾರ್ಯಸಾಧ್ಯತಾ ಪೂರ್ವ ವರದಿ ಸಲ್ಲಿಕೆ

2017ರ ಡಿಸೆಂಬರ್‌; ಡಿಪಿಆರ್‌ ಸಿದ್ಧಪಡಿಸಲು ರೈಲ್ವೆ ಮಂಡಳಿ ಅನುಮತಿ

2018 ಫೆಬ್ರುವರಿ; ಯೋಜನೆಗೆ ₹ 17 ಸಾವಿರ ಕೋಟಿ– ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪ

2018 ನವೆಂಬರ್‌; ಕರಡು ಡಿಪಿಆರ್‌ ಸಿದ್ಧಪಡಿಸಿದ ರೈಟ್ಸ್‌

2019ರ ಫೆಬ್ರುವರಿ; ರೈಟ್ಸ್ ಸಂಸ್ಥೆಯಿಂದ ಡಿಪಿಆರ್ ಸಲ್ಲಿಕೆ

2019ರ ಮಾರ್ಚ್‌; ರೈಲ್ವೆ ವಿಸ್ತರಿತ ಮಂಡಳಿಯಿಂದ (ಇಬಿಆರ್‌) ಅನುಮೋದನೆ

2019 ಮಾರ್ಚ್‌; ವೆಚ್ಚ ಕಡಿತಕ್ಕಾಗಿ ಡಿಪಿಆರ್‌ ಪರಿಷ್ಕರಿಸಲು ರೈಲ್ವೆ ಸಚಿವಾಲಯ ನಿರ್ದೇಶನ

2019ರ ಜುಲೈ; ರೈಟ್ಸ್ ಸಂಸ್ಥೆಯಿಂದ ಪರಿಷ್ಕೃತ ಡಿಪಿಆರ್‌ ಸಲ್ಲಿಕೆ

2019ರ ನವೆಂಬರ್‌; 4ರಂದು ರೈಲ್ವೆ ಮಂಡಳಿಯಿಂದ ಅನುಮೋದನೆ‌

2020 ಫೆಬ್ರುವರಿ 1; ಕೇಂದ್ರ ಬಜೆಟ್‌ನಲ್ಲಿ ಘೋಷಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT