ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಷ್ಟ ಪಟ್ಟು ಓದಿದರೆ ಯಶಸ್ಸು ನಿಶ್ಚಿತ: ‘ಚಿನ್ನದ ಹುಡುಗಿ’ ಎನ್‌.ಹರ್ಷಿತಾ

ಚಿನ್ನದ ಪದಕ ಪಡೆದ ಹುಡುಗಿ ಹರ್ಷಿತಾ ಮನದಾಳ
Last Updated 7 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಯಾವುದನ್ನೂ ಕಷ್ಟ ಅಂದುಕೊಳ್ಳಬಾರದು. ಅಸಾಧ್ಯವಾದುದು ಏನೂ ಇಲ್ಲ. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಇಷ್ಟಪಟ್ಟು, ಖುಷಿಯಿಂದ ಓದಿದರೆ ಯಶಸ್ಸು ನಿಶ್ಚಿತ’...

ಬೆಂಗಳೂರಿನ ‘ಚಿನ್ನದ ಹುಡುಗಿ’ ಎನ್‌.ಹರ್ಷಿತಾ ಅವರ ಮನದಾಳದ ಮಾತುಗಳಿವು.

ನಗರದ ನಂದಿನಿ ಬಡಾವಣೆ ನಿವಾಸಿಯಾಗಿರುವ ಹರ್ಷಿತಾ,ಅರ್ಬನ್‌ ಆ್ಯಂಡ್‌ ರೀಜನಲ್‌ ಪ್ಲಾನಿಂಗ್‌ ವಿಷಯದಲ್ಲಿ (ಎಂ.ಟೆಕ್‌) 9 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಸ್ಕೂಲ್‌ ಆಫ್‌ ಪ್ಲ್ಯಾನಿಂಗ್‌ ಆ್ಯಂಡ್‌ ಆರ್ಕಿಟೆಕ್ಚರ್‌ನಲ್ಲಿ ವ್ಯಾಸಂಗ ಮಾಡಿರುವ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಂದ ಪದಕಗಳನ್ನು ಸ್ವೀಕರಿಸಿದರು.

‘9 ಚಿನ್ನದ ಪದಕಗಳನ್ನು ಗೆದ್ದಿದ್ದು ಖುಷಿ ನೀಡಿದೆ. ಪೋಷಕರು ಹಾಗೂ ಶಿಕ್ಷಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ. ಎರಡು ವರ್ಷಗಳ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಹೀಗಾಗಿ ಮನದಲ್ಲಿ ಸಾರ್ಥಕತೆಯ ಭಾವವೂ ಮೂಡಿದೆ’ ಎಂದರು.

‘ಕೋವಿಡ್‌ ಕಾಣಿಸಿಕೊಂಡಾಗ ಅಂತಿಮ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದೆ. ಲಾಕ್‌ಡೌನ್‌ ಅವಧಿಯಲ್ಲಿ ಪಠ್ಯ ಕಲಿಕೆ ಅಷ್ಟೊಂದು ಕಷ್ಟವಾಗಲಿಲ್ಲ. ಪ್ರಬಂಧ ರಚನೆಯತ್ತ ಹೆಚ್ಚು ಗಮನ ಹರಿಸಬೇಕಾಗಿತ್ತು. ಅದರ ವಿಷಯ ಮೊದಲೇ ನಿರ್ಧರಿತವಾಗಿತ್ತಾದರೂ ಅದಕ್ಕೆ ಬೇಕಿರುವ ಮಾಹಿತಿಗಳನ್ನು ಕಲೆಹಾಕುವುದು ಸ್ವಲ್ಪ ಸವಾಲೆನಿಸಿತ್ತು. ಪೋಷಕರು ಹಾಗೂ ಮಾರ್ಗದರ್ಶಕರ ಸಹಕಾರದಿಂದ ಈ ಕೆಲಸವು ಸುಲಭವಾಯಿತು. ಪ್ರಬಂಧಕ್ಕೆ ರಾಷ್ಟ್ರೀಯ ಮಟ್ಟದಲ್ಲೂ ಮನ್ನಣೆ ಲಭಿಸಿತು. ಮೂರನೇ ಅತ್ಯುತ್ತಮ ‌ಪ್ರಶಸ್ತಿಯೂ ಸಿಕ್ಕಿತ್ತು’ ಎಂದು ಸಂತಸ ವ್ಯಕ್ತಪಡಿಸಿದರು.

‘ಬೆಂಗಳೂರಿನ ಬಿಜಿಎಸ್‌ ಸ್ಕೂಲ್‌ ಆಫ್‌ ಆರ್ಕಿಟೆಕ್ಚರ್‌ ಆ್ಯಂಡ್‌ ಪ್ಲಾನಿಂಗ್‌ನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಸರ್ಕಾರಿ ಸೇವೆಗೆ ಸೇರುವ ಬಯಕೆ ಇದೆ. ಹೀಗಾಗಿ ಈಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಯತ್ತ ಚಿತ್ತ ಹರಿಸಿದ್ದೇನೆ’ ಎಂದರು.

‘ಮಗಳ ಸಾಧನೆ ಹೆಮ್ಮೆಯಿಂದ ಬೀಗುವಂತೆ ಮಾಡಿದೆ. ಎಂ.ಎಸ್‌.ರಾಮಯ್ಯ ಕಾಲೇಜಿನಲ್ಲಿ ಎಂಜಿನಿಯರಿಂಗ್‌ (ಬಿ.ಇ) ವ್ಯಾಸಂಗ ಮಾಡಿದ್ದ ಅವಳು 2018ರಲ್ಲಿ ಎಂ.ಟೆಕ್‌ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದಳು. ಅದರಲ್ಲಿ ಅಗ್ರಸ್ಥಾನ ಪಡೆದಿದ್ದಳು. ಅದೇ ಉತ್ಸಾಹವನ್ನು ಮುಂದುವರಿಸಿಕೊಂಡು 9 ಚಿನ್ನದ ಪದಕಗಳನ್ನು ಜಯಿಸಿದ್ದಾಳೆ. ಆಕೆಯ ಮೇಲೆ ನಾವು ಯಾವುದೇ ಒತ್ತಡ ಹೇರಿರಲಿಲ್ಲ. ಓದಿನ ವಿಚಾರದಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೆವು’ ಎಂದು ಹರ್ಷಿತಾ ಅವರ ತಂದೆ ಕೆ.ಎನ್‌. ನಾರಾಯಣಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT