ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾಕರ್‌ ಭೇಟಿಗೆ ಸಿಗದ ಎಸ್‌.ಆರ್. ವಿಶ್ವನಾಥ್‌

Published 31 ಮಾರ್ಚ್ 2024, 20:16 IST
Last Updated 31 ಮಾರ್ಚ್ 2024, 20:16 IST
ಅಕ್ಷರ ಗಾತ್ರ

ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರನಿಗೆ ಟಿಕೆಟ್‌ ಸಿಗದ ಕಾರಣ ಮುನಿಸಿಕೊಂಡಿರುವ ಯಲಹಂಕ ಶಾಸಕ ಎಸ್‌.ಆರ್.ವಿಶ್ವನಾಥ್‌ ಅವರು ಭಾನುವಾರ ತಮ್ಮ ಮನೆಗೆ ಬಂದ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಅವರನ್ನು ಭೇಟಿಯಾಗಲಿಲ್ಲ. ಇದರಿಂದ ನಿರಾಶರಾಗಿ ಸುಧಾಕರ್ ಅವರು ಹಿಂದಕ್ಕೆ ಮರಳಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸುಧಾಕರ್ ಅವರು, ‘ಈಗಾಗಲೇ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ಆರಂಭವಾಗಿದೆ. ಯಲಹಂಕ ಕ್ಷೇತ್ರದಲ್ಲಿ ಆರಂಭವಾಗಿರಲಿಲ್ಲ. ವಿಶ್ವನಾಥ್‌ ಅವರು ತಮ್ಮ ಮಗನಿಗೆ ಟಿಕೆಟ್ ಸಿಗದಿರುವುದರಿಂದ ಬೇಸರದಲ್ಲಿದ್ದಾರೆ. ಅವರಿಗೆ ಹಲವು ಬಾರಿ ಪೋನ್‌, ಮೆಸೇಜ್‌ ಮಾಡಿದರೂ ಪ್ರತಿಕ್ರಿಯಿಸಿರಲಿಲ್ಲ. ಇಂದು ಅವರು ಸಿಂಗನಾಯಕನಹಳ್ಳಿಯ ಮನೆಯಲ್ಲಿ ಇರುವುದನ್ನು ಖಚಿತಪಡಿಸಿಕೊಂಡು ನೇರವಾಗಿ ಭೇಟಿ ಮಾಡಲು ಬಂದಿದ್ದೆ. ಆದರೆ, ಅವರು ಮನೆಯಲ್ಲಿ ಇಲ್ಲ ಎಂದು ಭದ್ರತಾ ಸಿಬ್ಬಂದಿ ಹೇಳುತ್ತಿದ್ದಾರೆ’ ಎಂದು ತಿಳಿಸಿದರು.

‘ಇನ್ನೂ ಒಂದೆರಡು ಬಾರಿ ಅವರ ಮನವೊಲಿಸಲು ಪ್ರಯತ್ನಿಸುತ್ತೇನೆ. ಬಿ.ಎಸ್‌. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು, ವಿಶ್ವನಾಥ್‌ ಅವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಒಂದೇ ಪಕ್ಷದಲ್ಲಿ ನಾವೆಲ್ಲರೂ ಮುಂದೆ ಸಾಗಬೇಕಾಗಿದ್ದು, ಇದೇ ಚುನಾವಣೆ ಕೊನೆಯಲ್ಲ. ಪಕ್ಷದ ಸಿದ್ದಾಂತ ಮತ್ತು ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರಬೇಕಾಗಿರುವುದರಿಂದ ಅವರ ಸಹಕಾರವನ್ನು ಪಡೆಯಲು ಬಂದಿದ್ದೇನೆ. ಅಮಿತ್‌ ಶಾ ಅವರು ಬೆಂಗಳೂರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಸಮಸ್ಯೆ ಬಗೆಹರಿಯಬಹುದು ಎಂದು ನಿರೀಕ್ಷಿಸಿದ್ದೇನೆ’ ಎಂದು ತಿಳಿಸಿದರು.

ಅಸಮಾಧಾನ: ಶಾಸಕ ಎಸ್‌.ಆರ್‌. ವಿಶ್ವನಾಥ್‌ ಅವರ ಪುತ್ರ ಅಲೋಕ್‌ಗೆ ಟಿಕೆಟ್‌ ಕೊಡಿಸಲು ಪ್ರಯತ್ನಿಸಿದ್ದರು. ಕ್ಷೇತ್ರದಲ್ಲಿ ತಂದೆ ಮತ್ತು ಮಗ ಪ್ರಚಾರ ಕೂಡ ನಡೆಸಿದ್ದರು. ಬಿಜೆಪಿ ವರಿಷ್ಠರು ಸುಧಾಕರ್‌ ಅವರಿಗೆ ಟಿಕೆಟ್‌ ಘೋಷಿಸಿದಾಗ ವಿಶ್ವನಾಥ್‌ಗೆ ಅಸಮಾಧಾನ ಉಂಟಾಗಿತ್ತು. ಇದರಿಂದ ರೊಚ್ಚಿಗೆದ್ದ ವಿಶ್ವನಾಥ್‌ ಅಭಿಮಾನಿಗಳು ‘ಗೋ ಬ್ಯಾಕ್‌ ಸುಧಾಕರ್‌’ ಅಭಿಯಾನವನ್ನು ನಡೆಸಿದ್ದರು. ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದರು.

‘ಕಾರ್ಯಕರ್ತರು ಮತ್ತು ಮುಖಂಡರ ಕಷ್ಟಗಳಿಗೆ ಸುಧಾಕರ್‌ ಸ್ಪಂದಿಸಿಲ್ಲ. ಆರೋಗ್ಯ ಸಚಿವರಾಗಿದ್ದಾಗ ಕೋವಿಡ್‌ ಸಂದರ್ಭದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸದೆ ಕೋವಿಡ್‌ ಸಾಮಗ್ರಿಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿದ್ದರು. ಇಂತಹ ವ್ಯಕ್ತಿಯ ಪರವಾಗಿ ಜನರ ಬಳಿಗೆ ತೆರಳಿ ಮತಕೇಳಲು ಮುಜುಗರವಾಗುತ್ತಿದೆ’ ಎಂದು ಆಗ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದ್ದರು.

ಆನಂತರ ಬಿಜೆಪಿ ಮುಖಂಡರ ಸಭೆ ನಡೆದಿತ್ತು. ‘ನಾನು ಸುಧಾಕರ್‌ ಪರ ಮತಯಾಚಿಸದೆ, ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ಮತ ಕೇಳುತ್ತೇನೆ. ಸುಧಾಕರ್‌ ಜೊತೆಗೆ ವೇದಿಕೆ ಹಂಚಿಕೊಳ್ಳುವುದಿಲ್ಲ’ ಎಂದು ಸಭೆಯಲ್ಲಿ ವಿಶ್ವನಾಥ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಿಶ್ವನಾಥ್‌ ಅವರ ಮನವೊಲಿಸಲು ಸುಧಾಕರ್‌ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT