ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೆಟ್ರೊ ರೈಲು ಹಳಿಗೆ ಜಿಗಿದು ಆತ್ಮಹತ್ಯೆ: ವ್ಯಾಪಾರದಲ್ಲಿ ನಷ್ಟ ಹೊಂದಿದ್ದ ನವೀನ್

ಉತ್ತರ ಪ್ರದೇಶದಲ್ಲಿಯೂ ಹಲವರ ಬಳಿ ಸಾಲ ಮಾಡಿದ್ದ ನವೀನ್
Published 4 ಆಗಸ್ಟ್ 2024, 14:54 IST
Last Updated 4 ಆಗಸ್ಟ್ 2024, 14:54 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ದ ಹಸಿರು ಮಾರ್ಗದಲ್ಲಿ ಶನಿವಾರ ಮೆಟ್ರೊ ರೈಲು ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಉತ್ತರ ಪ್ರದೇಶದ ನವೀನ್ ಕುಮಾರ್ ಅರೋರ (57) ಅವರು ವ್ಯಾಪಾರದಲ್ಲಿ ಭಾರಿ ನಷ್ಟ ಅನುಭವಿಸಿ, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.

ಉತ್ತರ ಪ್ರದೇಶದ ನವೀನ್ ಅವರು ಕೆಲ ವರ್ಷಗಳಿಂದ ಕೆ.ಆರ್. ಮಾರುಕಟ್ಟೆಯಲ್ಲಿ ಹಾರ್ಡ್​ವೇರ್ ಅಂಗಡಿ ನಡೆಸುತ್ತಿದ್ದರು. ಆರಂಭದಲ್ಲಿ ವ್ಯಾಪಾರ, ವಹಿವಾಟು ಚೆನ್ನಾಗಿಯೇ ನಡೆಯುತ್ತಿತ್ತು. ಕ್ರಮೇಣ ವ್ಯಾಪಾರದಲ್ಲಿ ನಷ್ಟ ಅನುಭವಿಸಿ, ಅಂಗಡಿ ಬಂದ್ ಮಾಡಿದ್ದರು. ಉದ್ಯೋಗವೂ ಇಲ್ಲದೆ ನಿತ್ಯದ ಖರ್ಚಿಗಾಗಿ ಹಣಕ್ಕಾಗಿ ಪರದಾಡುತ್ತಿದ್ದರು. ಇದೇ ವಿಚಾರವಾಗಿ ಕುಟುಂಬದ ಸದಸ್ಯರ ಜತೆ ಜಗಳವಾಡಿಕೊಂಡು, ಪತ್ನಿ ಹಾಗೂ ಮಕ್ಕಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ನಗರದ ಲಾಡ್ಜ್‌ವೊಂದರಲ್ಲಿ ಕೊಠಡಿ ಬಾಡಿಗೆಗೆ ಪಡೆದು ವಾಸವಾಗಿದ್ದ ಅವರು, ಮಾನಸಿಕ ಖಿನ್ನತೆಗೂ ಒಳಗಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

‘ನಿತ್ಯದ ಖರ್ಚು, ವೆಚ್ಚಕ್ಕೆ ಸಂಬಂಧಿಕರು ಹಾಗೂ ಕುಟುಂಬದವರಿಗೆ ಕರೆ ಮಾಡಿ ಹಣ ಹಾಕಿಸಿಕೊಳ್ಳುತ್ತಿದ್ದರು. ಉತ್ತರ ಪ್ರದೇಶದಲ್ಲಿ ನೂರಕ್ಕೂ ಹೆಚ್ಚು ಜನರ ಬಳಿ ಸಾಲ ಮಾಡಿದ್ದರು. ನವೀನ್ ಅವರು ಅಣ್ಣನಿಗೆ ಆಗಾಗ್ಗೆ ಕರೆ ಮಾಡಿ ಹಣ ಕೇಳುತ್ತಿದ್ದರು. ಆತ್ಮಹತ್ಯೆಗೂ ಮುನ್ನ ಸಹ ಅಣ್ಣನಿಗೆ ಕರೆ ಮಾಡಿ ಹಣ ಕೇಳಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

ಮೃತರ ಪತ್ನಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಪುತ್ರ ಬಟ್ಟೆ ಅಂಗಡಿ ಹೊಂದಿದ್ದಾರೆ. ಪುತ್ರಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ನವೀನ್ ಅವರು ಕುಟುಂಬದ ಜತೆ ಸಂಪರ್ಕದಲ್ಲಿ ಇರಲಿಲ್ಲ ಎಂದು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT