ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಲ ವಸೂಲಿಗೆ ಸುಪಾರಿ: ಮಹಿಳೆ ಮೇಲೆ ಹಲ್ಲೆ, ಆರೋಪಿ ಬಂಧನ

ಮುಂಬೈನಲ್ಲಿ ಆರೋಪಿ ಬಂಧಿಸಿದ ವಿಶೇಷ ಪೊಲೀಸ್‌ ತಂಡ
Published 20 ಫೆಬ್ರುವರಿ 2024, 16:06 IST
Last Updated 20 ಫೆಬ್ರುವರಿ 2024, 16:06 IST
ಅಕ್ಷರ ಗಾತ್ರ

ಬೆಂಗಳೂರು: ಸಾಲ ವಸೂಲಿಗೆ ಸುಪಾರಿ ಪಡೆದು ಮಹಿಳೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಪರಾರಿಯಾಗಿದ್ದ ಆರೋಪಿಯನ್ನು ಗೋವಿಂದಪುರ ಠಾಣೆ ಪೊಲೀಸರು ಮುಂಬೈನಲ್ಲಿ ಬಂಧಿಸಲು ಯಶಸ್ವಿಯಾಗಿದ್ದಾರೆ.

ಗೋವಿಂದಪುರ ರೌಡಿಶೀಟರ್ ನಸ್ರುಲ್ಲಾ ಅಲಿಯಾಸ್ ನಸ್ರು(42) ಬಂಧಿತ ಆರೋಪಿ.

2023ರ ನ.26ರಂದು ಸಾನಿಯಾ ಬಾನು ಎಂಬಾಕೆ ಮೇಲೆ ನಸ್ರುಲ್ಲಾ ಹಲ್ಲೆ ನಡೆಸಿದ್ದ. ಇದರೊಂದಿಗೆ ಈತನ ವಿರುದ್ದ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 13 ಪ್ರಕರಣಗಳಲ್ಲಿ ಕೋರ್ಟ್‌ಗೆ ಹಾಜರಾಗದೆ ವರ್ಷದಿಂದ ತಲೆಮರೆಸಿಕೊಂಡಿದ್ದ. ಕೋರ್ಟ್ ಈತನ ವಿರುದ್ಧ 10 ಬಾರಿ ಜಾಮೀನು ರಹಿತ ವಾರಂಟ್ ಹಾಗೂ ಒಂದು ಬಾರಿ ಪ್ರೊಕ್ಲಾಮೇಷನ್‌ ಜಾರಿ ಮಾಡಿತ್ತು ಎಂದು ಮೂಲಗಳು ತಿಳಿಸಿವೆ.

‘ಆರೋಪಿ ಪತ್ತೆಗಾಗಿ ವಿಶೇಷ ಪೊಲೀಸ್‌ ತಂಡ ರಚಿಸಲಾಗಿತ್ತು. ಈ ತಂಡವು ತಮಿಳುನಾಡು, ಆಂಧ್ರಪ್ರದೇಶ ಹಾಗೂ ಇತರೆಡೆ ಶೋಧ ನಡೆಸಿತ್ತು. ಆದರೂ ಆರೋಪಿಯ ಸುಳಿವು ಪತ್ತೆ ಆಗಿರಲಿಲ್ಲ. ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ಮಾಹಿತಿ ಮೇರೆಗೆ ಅಲ್ಲಿಗೆ ತೆರಳಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ಕರೆ ತಂದಿದ್ದಾರೆ’ ಎಂದು ತಿಳಿಸಿವೆ.

ಏನಿದು ಪ್ರಕರಣ?: ಗೋವಿಂದಪುರ ನಿವಾಸಿ ಸಾನಿಯಾ ಬಾನು ಎಂಬಾಕೆ ಪತಿ ಇಮ್ರಾನ್ ಖಾನ್, ಡಿ.ಜಿ.ಹಳ್ಳಿ ನಿವಾಸಿ ಮುನ್ನಾ ಎಂಬಾತನಿಂದ ಸಾಲ ಪಡೆದುಕೊಂಡಿದ್ದರು. ಆರ್ಥಿಕ ಸಮಸ್ಯೆಯಿಂದ ಹಣ ವಾಪಸ್ ನೀಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮುನ್ನಾ, ಸಾಲ ವಸೂಲಿ ಮಾಡಿಕೊಡುವಂತೆ ರೌಡಿಶೀಟರ್ ನಸ್ರುಲ್ಲಾಗೆ ಸುಪಾರಿ ನೀಡಿದ್ದ ಎಂದು ಪೊಲೀಸರು ಹೇಳಿದರು.

‘2023ರ ನ.26ರಂದು ನಡೆದು ಹೋಗುತ್ತಿದ್ದ ಮಹಿಳೆಯನ್ನು ಆರೋಪಿ ಅಡ್ಡಗಟ್ಟಿ ಹಣ ಕೇಳಿದ್ದ. ಆಗ ಸದ್ಯಕ್ಕೆ ಹಣ ವಾಪಸ್ ಕೊಡಲು ಸಾಧ್ಯವಿಲ್ಲ. ಆರ್ಥಿಕವಾಗಿ ಸಮಸ್ಯೆಯಿದೆ ಎಂದು ಹೇಳಿಕೊಂಡಿದ್ದರು. ಸಮಯ ಕೊಡಿ, ವಾಪಸ್ ಕೊಡುತ್ತೇವೆ ಎಂದೂ ಸಾನಿಯಾ ಬಾನು ಹೇಳಿದ್ದರು. ಇದಕ್ಕೆ ಒಪ್ಪದ ಆರೋಪಿ, ಮಾರಕಾಸ್ತ್ರಗಳಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದ ’ ಎಂದು ತಿಳಿಸಿದರು.

‘ರೌಡಿಶೀಟರ್ ನಸ್ರುಲ್ಲಾ ಇದೇ ರೀತಿ ಸುಪಾರಿ ಪಡೆದು ಹಣ ವಸೂಲಿ ಮಾಡುವುದನ್ನು ದಂಧೆ ಮಾಡಿಕೊಂಡಿದ್ದ. ಜತೆಗೆ, ದರೋಡೆ, ಡಕಾಯಿತಿ ಸೇರಿ 13 ಪ್ರಕರಣಗಳು ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದವು’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT