ಶನಿವಾರ, ಡಿಸೆಂಬರ್ 14, 2019
25 °C
ಮಹಿಳೆ, ಮಕ್ಕಳ ಸುರಕ್ಷತೆಗೆ ಹೆಚ್ಚಿನ ಒತ್ತು: ಕಮಿಷನರ್

‘ಸುರಕ್ಷಾ ಆ್ಯಪ್’ ಬಳಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಹೈದರಾಬಾದ್‌ ನಲ್ಲಿ ಇತ್ತೀಚೆಗೆ ನಡೆದ ಪಶು ವೈದ್ಯೆ ಪ್ರಿಯಾಂಕಾ ರೆಡ್ಡಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ನಗರದಲ್ಲಿ ಮಹಿಳೆಯರು ಆಂತಕಪಡುವ ಅಗತ್ಯವಿಲ್ಲ. ತುರ್ತು ಸಂದರ್ಭದಲ್ಲಿ ಪೊಲೀಸ್‌ ಇಲಾಖೆಯ ‘ಸುರಕ್ಷಾ ಆ್ಯಪ್’ ಬಳಕೆ ಮಾಡಿ’ ಎಂದು ನಗರ ಪೊಲೀಸ್‌ ಕಮಿಷನರ್‌ ಭಾಸ್ಕರ್‍ ರಾವ್ ಮನವಿ ಮಾಡಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಸೋಮವಾರ ಮಾತನಾಡಿದ ಅವರು, ‘ಹೈದರಾಬಾದ್ ಘಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಕ್ರಮ ವಹಿಸಲಾಗಿದೆ. ಅಧಿಕಾರಿಗಳು ಕರ್ತವ್ಯಲೋಪ ಎಸಗಿದರೆ ಅಂಥವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಮಹಿಳೆಯರ ಸುರಕ್ಷತೆ ದೃಷ್ಟಿಯಿಂದಲೇ ‘ಸುರಕ್ಷಾ ಆ್ಯಪ್’ ಕಾರ್ಯನಿರ್ವಹಿಸುತ್ತಿದೆ. ಎಲ್ಲ ಮಹಿಳೆಯರು ಮತ್ತು ನಾಗರಿಕರು ತಮ್ಮ ಸ್ಮಾರ್ಟ್ ಫೋನ್‍ಗಳಲ್ಲಿ ಈ ಆ್ಯಪ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು. ಅಸುರಕ್ಷತೆಯ ಭೀತಿ ಹಾಗೂ ತುರ್ತು ಸಂದರ್ಭಗಳಲ್ಲಿ ಆ್ಯಪ್‍ನಲ್ಲಿರುವ ಕೆಂಪು ಬಣ್ಣದ ಬಟನ್ ಒತ್ತುವ ಮೂಲಕ ಪೊಲೀಸರಿಗೆ ಕರೆ ಮಾಡಬಹುದು’ ಎಂದು ಅವರು ತಿಳಿಸಿದರು.

‘ಸುರಕ್ಷಾ ಆ್ಯಪ್’ ಬಳಕೆ ಹೇಗೆ

‘ಸುರಕ್ಷಾ ಆ್ಯಪ್‘ ಡೌನ್‍ಲೋಡ್ ಮಾಡಿದ ಬಳಿಕ ಅದರಲ್ಲಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ನಮೂದಿಸಿ, ಓಟಿಪಿ ಮೂಲಕ ದೃಢಿಕರಿಸಿಕೊಂಡು, ಸಬ್‌ಮಿಟ್‌ ಮಾಡಬೇಕು. ತುರ್ತುಪರಿಸ್ಥಿತಿಯಲ್ಲಿ ಸಂಪರ್ಕಿಸಬೇಕಾದ ಸ್ನೇಹಿತರು ಅಥವಾ ಫೋಷಕರ ಎರಡು ಮೊಬೈಲ್‍ಗಳನ್ನು ಸಂಖ್ಯೆ ನೋಂದಾಯಿಸಬೇಕು. ತುರ್ತು ಸಂದರ್ಭದಲ್ಲಿ ಆ್ಯಪ್ ಓಪನ್ ಮಾಡಿ, ಕೆಂಪು ಬಣ್ಣದ ಬಟನ್ ಒತ್ತಿದರೆ ಕರೆ ಸಹಾಯವಾಣಿಗೆ ರವಾನೆಯಾಗುತ್ತದೆ. ಕೇವಲ ಏಳು ನಿಮಿಷಗಳಲ್ಲಿ ತಮ್ಮ ಸ್ಥಳ ಪತ್ತೆ ಹಚ್ಚಿ, ಆಡಿಯೊ ಮತ್ತು ವಿಡಿಯೊ ತುಣುಕು ಸಹ ಕೇಂದ್ರಕ್ಕೆ ಲಭ್ಯವಾಗುತ್ತದೆ.

ಅಲ್ಲದೆ, ಆ್ಯಪ್‌ನಲ್ಲಿ ನೊಂದಾಯಿಸಿ ಎರಡು ಮೊಬೈಲ್ ಸಂಖ್ಯೆಗಳಿಗೂ ಸಂದೇಶ ರವಾನೆಯಾಗುತ್ತದೆ. ಈ ಮಾಹಿತಿಯನ್ನು ಸಮೀಪದ ಪೊಲೀಸ್ ಠಾಣೆಗೆ ಸಹಾಯವಾಣಿ ಕೇಂದ್ರದ ಸಿಬ್ಬಂದಿ ರವಾನಿಸಿ, 6–7 ನಿಮಿಷದಲ್ಲಿ ಪೊಲೀಸರು ಸ್ಥಳಕ್ಕೆ ಬರಲಿದ್ದಾರೆ ಎಂದು ವಿವರಿಸಿದರು.

ಹೊಯ್ಸಳ ಗಸ್ತು ವಾಹನದಲ್ಲಿರುವ ‘ಲೈವ್ ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಂ’ ಮೂಲಕ ಸ್ಥಳಕ್ಕೆ ಧಾವಿಸಿ ಪೊಲೀಸರು ಸಹಾಯ ಮಾಡಲಿದ್ದಾರೆ. ಇದೇ ವೇಳೆ 100 ಸಂಖ್ಯೆಗೂ ಕರೆ ಮಾಡಿ ದೂರು ನೀಡಬಹುದು ಎಂದೂ ಕಮಿಷನರ್‌ ತಿಳಿಸಿದರು.

ಎಲ್ಲ ಹಂತದ ಅಧಿಕಾರಿಗಳಿಗೆ ರಕ್ಷಣೆ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸದೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ
-ಭಾಸ್ಕರ್ ರಾವ್.ಪೊಲೀಸ್ ಕಮಿಷನರ್

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು