ಶುಕ್ರವಾರ, ಜೂನ್ 5, 2020
27 °C
ಸ್ವಚ್ಛತಾ ಸಮೀಕ್ಷೆಯಲ್ಲಿ ಬಯಲು ಬಹಿರ್ದೆಸೆ ಮುಕ್ತ ಸ್ಥಾನಮಾನ

ಶ್ರೇಯಾಂಕ ಸುಧಾರಿಸಿಕೊಂಡ ಬಿಬಿಎಂಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

BBMP

ಬೆಂಗಳೂರು: ನಗರವನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸುವ ಪ್ರಯತ್ನದಲ್ಲಿ ಬಿಬಿಎಂಪಿ ಕಳೆದ ಸಾಲಿಗಿಂತ ಈ ಬಾರಿ ಉತ್ತಮ ಸಾಧನೆ ಮಾಡಿದೆ. 2019ರ ಸ್ವಚ್ಛ ಸರ್ವೇಕ್ಷಣ್‌ ಸರ್ವೆಯಲ್ಲಿ ‘ಬಯಲು ಬಹಿರ್ದೆಸೆ ಮುಕ್ತ’ (ಒಡಿಎಫ್‌) ಶ್ರೇಯವನ್ನೂ ಪಡೆದಿರದ ಬಿಬಿಎಂಪಿ 2020ರ ಸರ್ವೆಯಲ್ಲಿ ಒಡಿಎಫ್‌ ಪ್ಲಸ್‌ ಹಾಗೂ ಒಡಿಎಫ್‌ ಪ್ಲಸ್‌ ಪ್ಲಸ್‌ ಶ್ರೇಯಗಳೆರಡನ್ನೂ ದಕ್ಕಿಸಿಕೊಂಡಿದೆ.

ಈ ಶ್ರೇಯವನ್ನು ಪಡೆಯುವುದರೊಂದಿಗೆ ಸ್ವಚ್ಛ ನಗರಗಳನ್ನು ನಿರ್ಧರಿಸುವ 2020ನೇ ಸಾಲಿನ ಸ್ವಚ್ಛತಾ ಸಮೀಕ್ಷೆಯಲ್ಲಿ (ಸ್ವಚ್ಛ ಸರ್ವೇಕ್ಷಣ್‌) ಬಿಬಿಎಂಪಿ ಒಡಿಎಫ್‌ ಪ್ಲಸ್‌ ಪ್ಲಸ್‌ ಶ್ರೇಯಕ್ಕೆ ಮೀಸಲಾದ 500 ಅಂಕ ಪಡೆಯುವುದನ್ನು ಖಾತರಿಪಡಿಸಿಕೊಂಡಿದೆ.  

ಈ ಬಾರಿ ಸಮೀಕ್ಷೆಯಲ್ಲಿ ಒಟ್ಟು 6000 ಅಂಕಗಳಿದ್ದು, ಅದರಲ್ಲಿ ನಾಗರಿಕರ ಪ್ರತಿಕ್ರಿಯೆ, ನೇರ ವೀಕ್ಷಣೆ, ಸೇವಾ ಗುಣಮಟ್ಟದ ಪ್ರಗತಿ, ಹಾಗೂ ಸ್ವಯಂ ಪ್ರಮಾಣೀಕರಣಕ್ಕೆ ತಲಾ 1500 ಅಂಕಗಳನ್ನು ನಿಗದಿಪಡಿಸಲಾಗಿದೆ.

ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ನಗರ ಬಯಲು ಬಹಿರ್ದೆಸೆ ಮುಕ್ತಗೊಳಿಸುವ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಒಡಿಎಫ್‌, ಒಡಿಎಫ್‌ ಪ್ಲಸ್‌ ಹಾಗೂ ಒಡಿಎಫ್‌ ಪ್ಲಸ್ ಪ್ಲಸ್‌ ಎಂದು ಸ್ವಯಂ ಪ್ರಮಾಣೀಕರಣ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ನಗರಾಡಳಿತ ಸಂಸ್ಥೆಗಳ ಸ್ವಯಂ ಪ್ರಮಾಣೀಕರಣವನ್ನು ಸಮೀಕ್ಷರ ತಂಡ ಪರಿಶೀಲಿಸಿ ದೃಢೀಕರಿಸುತ್ತದೆ.

‘ರಾಜ್ಯದಲ್ಲಿ ಬಿಬಿಎಂಪಿ ಹಾಗೂ ಮೈಸೂರು ಮಹಾನಗರ ಪಾಲಿಕೆಗೆ ಮಾತ್ರ ಒಡಿಎಫ್‌ ಪ್ಲಸ್‌ ಪ್ಲಸ್‌ ಶ್ರೇಯ ಲಭಿಸಿದೆ. ಇದು ಪಾಲಿಕೆಯ ಸಂಘಟಿತ ಪ್ರಯತ್ನಕ್ಕೆ ಸಿಕ್ಕ ಮನ್ನಣೆ. ಇದರಿಂದ ಕಳೆದ ಬಾರಿಯ ಸಮೀಕ್ಷೆಗಿಂತ ಈ ಬಾರಿ 400 ಅಂಕಗಳು ಹೆಚ್ಚುವರಿಯಾಗಿ ಸಿಗಲಿವೆ. ಸ್ವಚ್ಛತಾ ಸಮೀಕ್ಷೆಯಲ್ಲಿ ಶ್ರೇಯಾಂಕ ಸುಧಾರಣೆ ಆಗಲಿದೆ’ ಎಂದು ವಿಶೇಷ ಆಯುಕ್ತ (ಕಸ ನಿರ್ವಹಣೆ) ಡಿ.ರಂದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.  

‘ನಾವು 418 ಸಾರ್ವಜನಿಕ ಶೌಚಾಲಯಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಸದಾ ನೀರು ಪೂರೈಕೆಯಾಗುವಂತೆ ನೋಡಿಕೊಂಡಿದ್ದೆವು. ಅಂಗವಿಕಲರಿಗಾಗಿ ರ‍್ಯಾಂಪ್ ವ್ಯವಸ್ಥೆಗಳನ್ನು ಕಲ್ಪಿಸಿದ್ದೆವು. ನಿರ್ವಹಣೆಯೂ ಚೆನ್ನಾಗಿರುವಂತೆ ನೋಡಿಕೊಂಡಿದ್ದೆವು. ಇವುಗಳಲ್ಲಿ ಅಯ್ದ 100 ಶೌಚಾಲಯಗಳನ್ನು ಸಮೀಕ್ಷರ ತಂಡ ಪರಿಶೀಲಿಸಿತ್ತು’ ಎಂದರು. 

ಏನಿದು ಒಡಿಎಫ್‌ ಪ್ಲಸ್ ಪ್ಲಸ್‌?

ಯಾವುದೇ ಮಲ ಪದಾರ್ಥ ಅಥವಾ ಒಳಚರಂಡಿಯಲ್ಲಿ ಹರಿಯುವ ಕೊಳಚೆ ನೀರನ್ನು ಸುರಕ್ಷಿತವಾಗಿ ನಿರ್ವಹಣೆ ಮಾಡುವುದು ಮತ್ತು ಸಂಸ್ಕರಿಸುವುದು, ಮಲಪದಾರ್ಥ ಹಾಗೂ ಒಳಚರಂಡಿಯ ಕೊಳಚೆ ನೀರನ್ನು ಸಂಸ್ಕರಣೆಗೆ ಒಳಪಡಿಸದೆಯೇ ಚರಂಡಿಗಳಿಗೆ/ ಜಲಕಾಯಗಳಿಗೆ (ಕೆರೆ)/ ಬಯಲಿಗೆ ಬಿಡದೇ ಇರುವ ಸ್ಥಿತಿಯನ್ನು ಸ್ವಚ್ಛ ಭಾರತ ಅಭಿಯಾನದಲ್ಲಿ ಒಡಿಎಫ್‌ ಪ್ಲಸ್‌ ಪ್ಲಸ್‌ ಎಂದು ವ್ಯಾಖ್ಯಾನಿಸಲಾಗಿದೆ.

ಎಲ್ಲಾ ಶೌಚಾಲಯಗಳು ಒಳಚರಂಡಿ ವ್ಯವಸ್ಥೆ ಜೊತೆ ಬೆಸೆದಿರುವುದು ಅಥವಾ ಶೌಚವನ್ನು ಸ್ಥಳದಲ್ಲೇ ವೈಜ್ಞಾನಿಕವಾಗಿ ನಿರ್ವಹಿಸುವ ವ್ಯವಸ್ಥೆ ಹೊಂದುವುದು, ಅಧಿಕೃತ ನಿರ್ವಹಣಾ ಸಂಸ್ಥೆಗಳು ಸುಸ್ಥಿತಿಯಲ್ಲಿರುವ ಪರಿಕರಗಳನ್ನು ಬಳಸಿ ಯಾಂತ್ರೀಕೃತವಾಗಿ ಮಲಪದಾರ್ಥಗಳನ್ನು ನಿರ್ವಹಣೆಮಾಡುವುದು, ಒಳಚರಂಡಿ ಜಾಲವನ್ನು ಮತ್ತು ಮಲತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಚೆನ್ನಾಗಿ ನಿರ್ವಹಣೆ ಮಾಡುವುದು ಒಡಿಎಫ್‌ ಪ್ಲಸ್‌ ಪ್ಲಸ್‌ ಮನ್ನಣೆ ಪಡೆಯಲು ಬೇಕಾದ ಮಾನದಂಡಗಳು.

ತಪಾಸಣೆ ನಡೆಸುವ ವೇಳೆ ಸಮುದಾಯ ಶೌಚಾಲಯ ಅಥವಾ ಸಾರ್ವಜನಿಕ ಶೌಚಾಲಯಗಳಲ್ಲಿ ಶೇ 25ರಷ್ಟರ ನಿರ್ವಹಣೆ ತೃಪ್ತಿಕರವಾಗಿದ್ದರೂ ಈ ಮನ್ನಣೆಯನ್ನು ಸಮೀಕ್ಷಕರ ತಂಡವು ದೃಢೀಕರಿಸುತ್ತದೆ.

ಏನಿದು ಒಡಿಎಫ್‌ ಪ್ಲಸ್?

ಯವುದೋ ಒಬ್ಬ ವ್ಯಕ್ತಿಯೂ ಬಯಲಿನಲ್ಲಿ ಮಲ ಅಥವಾ ಮೂತ್ರ ವಿಸರ್ಜನೆ ಮಾಡುವಂತಹ ಪರಿಸ್ಥಿತಿ ಇರಬಾರದು. ಎಲ್ಲ ಸಾರ್ವಜನಿಕ ಹಾಗೂ ಸಮುದಾಯ ಶೌಚಾಲಯಗಳೂ ಸದಾ ಬಳಸುವ ಸ್ಥಿತಿಯಲ್ಲಿರಬೇಕು ಮತ್ತು ಅವುಗಳ ನಿರ್ಹವಣೆ ಚೆನ್ನಾಗಿರಬೇಕು. ಅಂತಹ ನಗರಕ್ಕೆ ಒಡಿಎಫ್‌ ಪ್ಲಸ್‌ ಮನ್ನಣೆ ನೀಡಲಾಗುತ್ತದೆ.

ಪ್ರತಿಯೊಂದು ಮನೆಯಲ್ಲೂ ಶೌಚಾಲಯ ಹೊಂದಿರುವುದು, ಮನೆಯಲ್ಲಿ ಸ್ಥಳಾವಕಾಶ ಇಲ್ಲದ ಕಡೆ 500 ಮೀ ದೂರದೊಳಗೆ ಸಮುದಾಯ ಶೌಚಾಲಯ ಹೊಂದಿರುವುದು ಹಾಗೂ ಸಾರ್ವಜನಿಕ ಪ್ರದೇಶ ಅಥವಾ ವಾಣಿಜ್ಯ ಪ್ರದೇಶಗಳಲ್ಲಿ ಗರಿಷ್ಠ 1 ಕಿ.ಮೀ. ದೂರದಲ್ಲಿ ಒಂದಾದರೂ ಸಾರ್ವಜನಿಕ ಶೌಚಾಲಯವನ್ನು ಹೊಂದಿರುವುದು ಈ ಶ್ರೇಯ ಪಡೆಯಲು ಇರಬೇಕಾದ ಮಾನದಂಡಗಳು.

ಶೌಚಾಲಯಗಳ ನಿರ್ವಹಣೆ, ಅವುಗಳಲ್ಲಿ ನೀರಿನ ಲಭ್ಯತೆ, ಭಾರಿ ಜನ ಸೇರುವಲ್ಲಿ ಸಂಚಾರ ಶೌಚಾಲಯಗಳ ಸೌಲಭ್ಯ, ಗೂಗಲ್‌ ಮ್ಯಾಪ್‌ ನೋಡಿಕೊಂಡು ಶೌಚಾಲಯಗಳನ್ನು ಹುಡುಕಲು ಸಾಧ್ಯವಾಗುವುದು, ಅವುಗಳ ನಿರ್ವಹಣೆ ಸರಿ ಇಲ್ಲದಿದ್ದರೆ ಅಥವಾ ಇಷ್ಟೆಲ್ಲ ಸೌಕರ್ಯ ಕಲ್ಪಿಸದ ಬಳಿಕವೂ ಯಾರಾದರೂ ಬಯಲಿನಲ್ಲಿ ಬಹಿರ್ದೆಸೆ ಮಾಡಿದ್ದರೆ ಅವರಿಗೆ ದಂಡ ವಿಧಿಸಿರುವುದು ಮುಂತಾದ ಅಂಶಗಳನ್ನು ಪರಿಗಣಿಸಿ ಈ ಮನ್ನಣೆಯನ್ನು ದೃಢೀಕರಿಸಲಾಗುತ್ತದೆ.  ಸಮುದಾಯ ಅಥವಾ ಸಾರ್ವಜನಿಕ ಶೌಚಾಲಯಗಳಲ್ಲಿ ಶೇ 10ರಷ್ಟು ಶೌಚಾಲಯಗಳ ಸ್ಥಿತಿ ತೃಪ್ತಿಕರವಾಗಿದ್ದರೂ ಸಮೀಕ್ಷಕರ ತಂಡವು ಈ ಮನ್ನಣೆಯನ್ನು ದೃಡೀಕರಿಸುತ್ತದೆ.

 

 

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು