ಭಾನುವಾರ, ಏಪ್ರಿಲ್ 5, 2020
19 °C
ಆರೋಪಿ ಅಧಿಕಾರಿಗಳ ವಿರುದ್ಧದ ಅನುಮತಿಗೆ ಕಾದುಕುಳಿತ ಎಸಿಬಿ

ಟಿಡಿಆರ್‌ ಪ್ರಕರಣ: ಮೊಕದ್ದಮೆಗೆ ಒಪ್ಪಿಗೆ ನೀಡಲು ಮೀನಮೇಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಸ್ತೆ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡ ಕಟ್ಟಡ ಮತ್ತು ನಿವೇಶನ ಗಳಿಗೆ ಪರ್ಯಾಯವಾಗಿ ವಿತರಿಸುವ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್‌) ವಂಚನೆ ಪ್ರಕರಣದಲ್ಲಿ ಕೆಲವು ಅಧಿಕಾರಿ ಗಳ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡಲು ಸಕ್ಷಮ ಪ್ರಾಧಿಕಾರ (ಮಾತೃ ಇಲಾಖೆಗಳು) ಮೀನಮೇಷ ಎಣಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಇಲ್ಲಿನ ಭಟ್ಟರಹಳ್ಳಿ– ಟಿ.ಸಿ ಪಾಳ್ಯ ರಸ್ತೆ ವಿಸ್ತರಣೆ ಸಂಬಂಧ ಸ್ವಾಧೀನ ಪಡಿಸಿಕೊಂಡ ಆಸ್ತಿಯೊಂದಕ್ಕೆ ಸಂಬಂಧಿಸಿದಂತೆ ನೀಡಿರುವ ಅಭಿವೃದ್ಧಿ ಹಕ್ಕು ಪ್ರಮಾಣಪತ್ರ (ಟಿಡಿಆರ್‌ಸಿ) ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಭ್ರಷ್ಟಾ ಚಾರ ನಿಗ್ರಹ ದಳವು (ಎಸಿಬಿ) ಆರೋಪಿ ಅಧಿಕಾರಿಗಳ ಮೇಲೆ ಮೊಕದ್ದಮೆ ಹೂಡಲು ಅನುಮತಿ ನೀಡುವಂತೆ ಕೇಳಿ ಪತ್ರ ಬರೆದಿದೆ.

ಪತ್ರ ಬರೆದು ತಿಂಗಳು ಕಳೆದರೂ ಸಕ್ಷಮ ಪ್ರಾಧಿಕಾರಗಳು ಅನುಮತಿ ನೀಡಿಲ್ಲ. ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿವೆ. ಈಗಾಗಲೇ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿರುವ ತನಿಖಾ ತಂಡ ಮೊಕದ್ದಮೆ ದಾಖಲಿಸಲು ಅನುಮತಿಗಾಗಿ ಕಾದು ಕುಳಿತಿದೆ ಎಂದು ಮೂಲಗಳು ತಿಳಿಸಿವೆ.

ನಗರಾಭಿವೃದ್ಧಿ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ (ನಗರ ಯೋಜನೆ) ಎಸ್‌.ಎಸ್‌. ಟೊಪಗಿ, ಬಿಬಿಎಂಪಿ ನಿವೃತ್ತ ಪ್ರಭಾರ ಎಂಜಿನಿಯರ್‌ ರಾಮೇಗೌಡ, ರಾಜ್ಯ ಲೆಕ್ಕಪತ್ರ ಇಲಾಖೆ ನಿವೃತ್ತ ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶಪ್ಪ, ಕೆಪಿಸಿಎಲ್‌ ನಿವೃತ್ತ ಮುಖ್ಯ ಎಂಜಿನಿಯರ್‌ (ಯೋಜನೆ) ಎ.ಎಂ. ರಂಗನಾಥ್‌ ಮತ್ತು ಲೋಕೋಪಯೋಗಿ ಇಲಾಖೆ ನಿವೃತ್ತ ಕಾರ್ಯಪಾಲಕ ಎಂಜಿನಿಯರ್‌ (ರಸ್ತೆ ವಿಸ್ತರಣೆ) ಚನ್ನಯ್ಯ ಹಾಗೂ ಬಿಬಿಎಂಪಿ ಹಾಲಿ ಎಂಜಿನಿಯರ್ ದೇವರಾಜ್‌ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿ  ಪತ್ರ ಬರೆಯಲಾಗಿದೆ.

ಈ ಅಧಿಕಾರಿಗಳು ಬಿಬಿಎಂಪಿಯಲ್ಲಿ ನಿಯೋಜನೆ ಮೇಲೆ ಕೆಲಸ ಮಾಡಿದ್ದಾಗ ಟಿಡಿಆರ್‌ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿ ಸಲಾಗಿದೆ. ಆದರೆ, ಈ ಪತ್ರಗಳಿಗೆ ಇನ್ನೂ ಸ್ಪಂದನೆ ಸಿಕ್ಕಿಲ್ಲ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ದೇವರಾಜ್‌ ಅವರ ಪ್ರಕರಣದಲ್ಲಿ ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್‌ (ಕಟ್ಟಡಗಳು) ತಮ್ಮ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಈಗ ಪತ್ರ ಬರೆದಿದ್ದಾರೆ. ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿರುವುದಕ್ಕೆ ಇದಕ್ಕಿಂತ ಉದಾ ಹರಣೆ ಬೇಕೇ ಎಂದು ಅಧಿಕಾರಿಯೊಬ್ಬರು ಪ್ರಶ್ನಿಸಿದರು.

ರಸ್ತೆ ವಿಸ್ತರಣೆಗೆ ವಶಪಡಿಸಿಕೊಂಡಿದ್ದ ಆಸ್ತಿಯೊಂದರ ಟಿಡಿಆರ್‌ಸಿ ವಿತರಣೆಯಲ್ಲಿ ವಂಚನೆ ಮಾಡಲಾಗಿದೆ ಎಂದು ಆರೋಪಿಸಿ ಎಸಿಬಿಯಲ್ಲಿ ದೂರು ದಾಖಲಾಗಿತ್ತು. ಆನಂತರ, ಬಿಡಿಎಯಲ್ಲಿ ನಿಯೋಜನೆ ಮೇಲೆ ಕೆಲಸ ಮಾಡುತ್ತಿರುವ ಕಾರ್ಯಪಾಲಕ ಎಂಜಿ ನಿಯರ್‌ ಕೃಷ್ಣಲಾಲ್‌ ಹಾಗೂ ಅವರ ಕೆಲವು ಆಪ್ತರ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಈ ವಂಚನೆ ಪ್ರಕರಣದಲ್ಲಿ ಭಾಗಿ ಯಾಗಿದ್ದಾರೆ ಎನ್ನಲಾದ ಕೆಲವು ಪ್ರಭಾ ವಿಗಳು ಪ್ರಕರಣ ಮುಚ್ಚಿಹಾಕಲು ರಾಜಕೀಯ ಒತ್ತಡ ಹೇರಿದ್ದರು.

ಮಧ್ಯವರ್ತಿಗಳಿಗೆ ಕೋಟಿ ಕೋಟಿ ಹಣ!

ಟಿಡಿಆರ್‌ಸಿ ಪ್ರಕರಣದಲ್ಲಿ ಜಮೀನುಗಳ ಮೂಲ ಮಾಲೀಕರಿಗೆ ಕೇವಲ ಲಕ್ಷಗಳಲ್ಲಿ ಹಣ ದೊರೆತರೆ, ಮಧ್ಯವರ್ತಿಗಳಿಗೆ ಕೋಟಿ, ಕೋಟಿ ಹಣ ಸಿಕ್ಕಿದೆ ಎಂಬ ಅಂಶ ಎಸಿಬಿ ತನಿಖೆಯಿಂದ ಬಯಲಿಗೆ ಬಂದಿದೆ.

ಈ ಪ್ರಕರಣದಲ್ಲಿ ಮಧ್ಯವರ್ತಿಗಳಿಬ್ಬರಿಗೆ ತಲಾ ₹ 3.35 ಕೋಟಿ ಹಣ ಸಿಕ್ಕಿದೆ. ಮತ್ತೊಬ್ಬರಿಗೆ ₹ 3.5 ಕೋಟಿ ದೊರೆತಿದೆ. ಜಮೀನಿನ ಮೂಲ ಮಾಲೀಕರಿಗೆ ದಕ್ಕಿದ್ದು ಕೇವಲ ₹ 20 ಲಕ್ಷ ಎನ್ನಲಾಗಿದೆ. ಟಿಡಿಆರ್‌ಸಿ ₹ 56 ಕೋಟಿಗೆ ಮಾರಾಟ ಆಗಿದೆ.  ಕೈ ಬದಲಾವಣೆ ಮಾಡಿದ ಕಂಪನಿಗೆ ₹ 29 ಕೋಟಿ ಲಾಭವಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು