ಭಾನುವಾರ, ಜನವರಿ 19, 2020
23 °C

ಟಿಡಿಆರ್‌ಸಿ: ₹27 ಕೋಟಿಗೆ ಮಾರಾಟ ಮಾಡಿ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಸ್ತೆ ವಿಸ್ತರಣೆಗೆ ಸ್ವಾಧೀನಪಡಿಸಿಕೊಳ್ಳದ ಕಟ್ಟಡಗಳು ಹಾಗೂ ಒಂದು ಮಹಡಿ ಕಟ್ಟಡವನ್ನು ಮೂರು ಮಹಡಿ ಕಟ್ಟಡವೆಂದು ತೋರಿಸಿ ಕೆಲವು ರಿಯಲ್‌ ಎಸ್ಟೇಟ್‌ ಮಾಫಿಯಾಗಳಿಗೆ 5.65 ಲಕ್ಷ ಚದರಡಿಯಷ್ಟು ಅಭಿವೃದ್ಧಿ ಹಕ್ಕು ಪತ್ರ (ಟಿಡಿಆರ್‌ಸಿ) ನೀಡಿ ಸರ್ಕಾರಕ್ಕೆ ಭಾರಿ ನಷ್ಟ ಉಂಟುಮಾಡಿದ ಐವರು ಅಧಿಕಾರಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸಕ್ಷಮ ಪ್ರಾಧಿಕಾರದ ಅನುಮತಿ ಕೇಳಿದೆ.

ಬಿಬಿಎಂಪಿ ಮಹದೇವಪುರ ವಲಯದ ಟಿಡಿಆರ್‌ಸಿ ಅಧಿಕಾರಿಯಾದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೃಷ್ಣಲಾಲ್‌, ಸಹಾಯಕ ಎಂಜಿನಿಯರ್‌ ಕೆ.ಎನ್‌.ರಮೇಶ್‌, ಕಂದಾಯ ಅಧಿಕಾರಿ ಈಶ್ವರ ಪ್ರಸನ್ನಯ್ಯ, ಕಂದಾಯ ನಿರೀಕ್ಷಕ ಜಗನ್ನಾಥ ರೆಡ್ಡಿ ಹಾಗೂ ಗ್ರಾಮ ಲೆಕ್ಕಿಗ ಚಂದ್ರಶೇಖರ್‌ ಅವರ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧವಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಭಟ್ಟರಹಳ್ಳಿ– ಟಿ.ಸಿ ಪಾಳ್ಯ ರಸ್ತೆ ವಿಸ್ತರಣೆಗೆ ಕೌದೇನಹಳ್ಳಿ ಸರ್ವೆ ನಂಬರ್‌ 132 ಅನ್ನು ಸ್ವಾಧೀನಪಡಿಸಿಕೊಳ್ಳಲು  2009ರ ಜುಲೈ 29ರಂದು ಅಧಿಸೂಚನೆ ಹೊರಡಿಸಲಾಗಿತ್ತು. 1989ರಲ್ಲಿ ಈ ಜಾಗದಲ್ಲಿ ಬಡಾವಣೆ ನಿರ್ಮಿಸಿ, ನಿವೇಶನಗಳನ್ನು ಮಾರಾಟ ಮಾಡಲಾಗಿತ್ತು.

ಜಮೀನಿನ ಮೂಲ ಮಾಲೀಕರಾದ ಮುನಿರಾಜಪ್ಪ ಅವರಿಂದ ಕಾನೂನು ಬಾಹಿರವಾಗಿ ಜಿಪಿಎ ಹಾಗೂ ಸೇಲ್‌ ಅಗ್ರಿಮೆಂಟ್‌ ಮಾಡಿಕೊಂಡು ಬಿಬಿಎಂಪಿಯಿಂದ 2014ರಲ್ಲಿ 5.65 ಲಕ್ಷ ಚದರಡಿ ಟಿಡಿಆರ್‌ಸಿ ಪಡೆಯಲಾಗಿದ್ದು, ಈ ಅಕ್ರಮ ವ್ಯವಹಾರ
ದಲ್ಲಿ ಮಧ್ಯವರ್ತಿಗಳಾದ ಬಿ.ಎಸ್‌. ರವೀಂದ್ರನಾಥ್‌, ಕೆ. ಗೌತಮ್‌, ಸುರೇಶ್‌ ಕೆ ಭಾಗಿಯಾಗಿದ್ದಾರೆ. ಅಲ್ಲದೆ, ವಾಲ್ಮಾರ್ಕ್‌ ರಿಯಾಲಿಟಿ ಹೋಲ್ಡಿಂಗ್‌ ಕಂಪನಿ ಪ್ರೈವೇಟ್‌ ಲಿ. ಕೂಡಾ ಭಾಗಿಯಾಗಿದೆ ಎಂದು ಎಸಿಬಿ ಆರೋಪಿಸಿದೆ.

ಈ ಕಟ್ಟಡಗಳಿಗೆ ₹ 5.96 ಕೋಟಿ ಬೆಲೆ ನಿಗದಿಪಡಿಸಲಾಗಿತ್ತು. ಬಿಬಿಎಂಪಿಯಿಂದ (ನಂಬರ್‌ 002924 ಮತ್ತು 002954) 5.65 ಲಕ್ಷ ಚದರಡಿಯಷ್ಟು ಡಿಆರ್‌ಸಿ ಪಡೆದು ಅವುಗಳನ್ನು ಎಂಟು ರಿಯಲ್‌ ಎಸ್ಟೇಟ್‌ ಕಂಪನಿಗಳಿಗೆ ₹ 27 ಕೋಟಿಗೂ ಅಧಿಕ ಬೆಲೆಗೆ ಮಾರಾಟ ಮಾಡಿ ವಂಚನೆ ಮಾಡಲಾಗಿದೆ ಎಂದು ದೂರಲಾಗಿದೆ.

ಟಿಡಿಆರ್‌ಸಿ ವಿತರಿಸಿ ಆರು ವರ್ಷ ಕಳೆದರೂ ಭಟ್ಟರಹಳ್ಳಿ ಹಾಗೂ ಟಿ.ಸಿ ಪಾಳ್ಯ ರಸ್ತೆ ವಿಸ್ತರಣೆ ಆಗಿಲ್ಲ. ನಿವೇಶನ, ಕಟ್ಟಡಗಳನ್ನು ಸ್ವಾಧೀನಪಡಿಸಿಕೊಂಡಿಲ್ಲ. ಟಿಡಿಆರ್‌ಗೆ ಅರ್ಜಿ ಹಾಕುವ ಹಂತದಿಂದಲೇ ಅಕ್ರಮ ಎಸಗಿರುವುದು ಕಂಡುಬಂದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಟಿಡಿಆರ್‌ ವಿತರಣೆ ಸಮಯದಲ್ಲಿ ಬಿಬಿಎಂಪಿ ಅಧಿಕಾರಿಗಳು ತಯಾರಿಸಿ ಸಹಿ ಹಾಕಿದ್ದ ಕೆಲವು ಮಹತ್ವದ ದಾಖಲೆಗಳನ್ನು ವಾಲ್‌ಮಾರ್ಕ್ ಕಂಪನಿ ಕಚೇರಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದೂ ಎಸಿಬಿ ಅಧಿಕಾರಿಗಳು ಸ್ಪಷ್ಟ
ಪಡಿಸಿದ್ದಾರೆ.

ಟಿಡಿಆರ್ ವಂಚನೆಗೆ ಸಂಬಂಧಿಸಿದಂತೆ ಇನ್ನೂ ನಾಲ್ಕು ಪ್ರಕರಣಗಳು ತನಿಖೆ ಹಂತದಲ್ಲಿವೆ. ಐದು ಪ್ರಕರಣಗಳಲ್ಲಿ ಆರೋಪಿ ಅಧಿಕಾರಿಗಳ ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಿಸಲು ಸಕ್ಷಮ ಪ್ರಾಧಿಕಾರದ ಅನುಮತಿ ಕೇಳಲಾಗಿದೆ. ಈ ವಂಚನೆ ಪ್ರಕರಣದಲ್ಲಿ ಬಂಧಿತರಾಗಿದ್ದ ಕೃಷ್ಣಲಾಲ್‌ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು