ಗುರುವಾರ , ಡಿಸೆಂಬರ್ 2, 2021
19 °C

ಅನ್ಯ ಭಾಷಿಕರಿಗೆ ಕನ್ನಡ ಕಲಿಸಿ: ಲೇಖಕ ಬೈರಮಂಗಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಹಂಕ: ‘ಸರ್ಕಾರದ ನಿಯಮ ಪಾಲನೆಗಾಗಿ ಮಾತ್ರ ಕನ್ನಡ ರಾಜ್ಯೋತ್ಸವದ ಆಚರಣೆಯಾಗದೆ ನಮ್ಮ ಭಾಷೆಯ ಬಗ್ಗೆ ಶ್ರದ್ಧೆ, ಭಕ್ತಿ ಮತ್ತು ಆತ್ಮಸಮರ್ಪಣೆಯ ಮೂಲಕ ಆಚರಣೆಯಾಗಬೇಕು. ಆಗ ಮಾತ್ರ ಕನ್ನಡಭಾಷೆಯ ಬೆಳವಣಿಗೆ ಸಾಧ್ಯ’ ಎಂದು ಲೇಖಕ ಡಾ.ಬೈರಮಂಗಲ ರಾಮೇಗೌಡ ಅಭಿಪ್ರಾಯಪಟ್ಟರು.

ಉಪನಗರದ ಶೇಷಾದ್ರಿಪುರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಹಲವು ರಾಜ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಭಾಷಿಕರನ್ನು ಒಗ್ಗೂಡಿಸಿ, ಕರ್ನಾಟಕ ರಾಜ್ಯವನ್ನು ರಚಿಸುವಲ್ಲಿ ಭಾಷಾವಾರು ಪ್ರಾಂತ್ಯ ಹೋರಾಟಗಾರರ ಕೊಡುಗೆ ಸ್ಮರಣೀಯ. ಇದಕ್ಕಾಗಿ ಹಲವು ಸಾಹಿತಿಗಳು, ಕನ್ನಡಪರ ಹೋರಾಟಗಾರರು ಶ್ರಮಿಸಿದ್ದು, ಅವರ ಹೋರಾಟದ ಪ್ರತಿಫಲವಾಗಿ ಈ ರಾಜ್ಯ ಉದಯವಾಗಿದೆ’ ಎಂದರು.

‘ಕನ್ನಡಭಾಷೆ ಉಳಿಯಬೇಕಾದರೆ ಕನ್ನಡಿಗರಾದ ನಾವು ಅನ್ಯಭಾಷಿಕರಿಗೆ ಪ್ರೀತಿ ಮತ್ತು ಒತ್ತಾಯಪೂರ್ವಕವಾಗಿಯಾದರೂ ಕನ್ನಡ ಕಲಿಸುವ ಕಾರ್ಯಕ್ಕೆ ಮುಂದಾಗಬೇಕು. ನಮ್ಮ ಸ್ವಾಭಿಮಾನವನ್ನು ಬಲಿಕೊಟ್ಟು, ಅನ್ಯಭಾಷೆಗಳಿಗೆ ಮಣೆಹಾಕುತ್ತಾ ಸಾಗಿದರೆ ಕನ್ನಡಭಾಷೆ ಬೆಳೆಯುವುದಾದರೂ ಹೇಗೆ?’ ಎಂದು ಪ್ರಶ್ನಿಸಿದರು.

ಶೇಷಾದ್ರಿಪುರ ಶಿಕ್ಷಣದತ್ತಿಯ ಟ್ರಸ್ಟಿ ಜಿ.ಕೃಷ್ಣಸ್ವಾಮಿ ಮಾತನಾಡಿ, ‘ಶಿಸ್ತು, ಸಂಯಮ ಮತ್ತಿತರ ಗುಣಗಳನ್ನು ಅಳವಡಿಸಿಕೊಳ್ಳುವ ಮೂಲಕ ನಮ್ಮತನವನ್ನು ಉಳಿಸಿಕೊಳ್ಳಬೇಕಾದರೆ ಇತರೆ ರಾಜ್ಯದವರಿಗೂ ಕನ್ನಡವನ್ನು ಕಲಿಸುವ ಕಾರ್ಯ ಅಗತ್ಯವಾಗಿ ಆಗಬೇಕಿದೆ’ ಎಂದರು.

ಪ್ರಾಂಶುಪಾಲ ಪ್ರೊ.ಟಿ.ದೊಡ್ಡೇಗೌಡ, ಐಐಎಚ್ಎಂ ಸಂಸ್ಥೆಯ ಸಾಗರ್, ಕನ್ನಡ ವಿಭಾಗದ ಮುಖ್ಯಸ್ಥರಾದ ಹ.ವಿಜಯಾ, ಪಿ.ಬಿಂದುಮತಿ, ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥರಾದ ಕೆ.ವಿ.ಸರಸ್ವತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು