ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲೇಶ್ವರ: ಸರ್ಕಾರಿ ಶಾಲೆಗೂ ಬಂತು ರೋಬೊ ಟೀಚರ್

Last Updated 23 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯಾರ್ಥಿಗಳು ‌ಕಲಿಕೆ ಸುಲಭವಾಗಿಸುವ ‘ಈಗಲ್’ ರೋಬೊ ಪರೀಕ್ಷಾರ್ಥ ಪ್ರಾತ್ಯಕ್ಷಿಕೆ ಮಲ್ಲೇಶ್ವರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ನಡೆಯಿತು.

ಕೇಳಿದ ಪ್ರಶ್ನೆಗಳಿಗೆ ರೋಬೊ ನೀಡಿದ ಉತ್ತರ ಕಂಡು ವಿದ್ಯಾರ್ಥಿಗಳು ಬೆರಗಾದರು. ‘ಕೆಲವೊಮ್ಮೆ ಸಣ್ಣ ಪುಟ್ಟ ಪ್ರಶ್ನೆ ಕೇಳಿದರೆ ಶಿಕ್ಷಕರು ಸಿಟ್ಟಾಗುವ ಸಾಧ್ಯತೆ ಇರುತ್ತದೆ. ಆದರೆ, ರೋಬೊ ಸಿಟ್ಟು ಮಾಡಿಕೊಳ್ಳುವುದಿಲ್ಲ ಎಂಬ ಖಾತ್ರಿ ಇರುವುದರಿಂದ ಪ್ರಶ್ನೆ ಕೇಳಲು ಮುಜುಗರ ಇರುವುದಿಲ್ಲ’ ಎಂದು ವಿದ್ಯಾರ್ಥಿಗಳು ಸಂಭ್ರಮಿಸಿದರು.

‘ರೋಬೊ ನಮ್ಮ ಕೆಲಸವನ್ನು ಸುಲಭವಾಗಿಸುತ್ತದೆ. ಆಗ ನಾವು ಮಕ್ಕಳು ಮೇಲೆ ನಿಗಾ ವಹಿಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರೂ ರೋಬೊ ಹೇಳಿದ್ದನ್ನು ಬರೆದುಕೊಳ್ಳುತ್ತಿದ್ದಾರೆಯೋ, ಇಲ್ಲವೋ ಎನ್ನುವುದನ್ನು ಗಮನಿಸಬಹುದು. ಇದು ಮಕ್ಕಳಿಗೆ ಮತ್ತು ನಮಗೂ ಅನುಕೂಲ ಆಗಲಿದೆ’ ಎಂದು ಶಿಕ್ಷಕರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ‘ಇದು ಪ್ರಾಯೋಗಿಕ ಕಾರ್ಯಕ್ರಮವಾಗಿದ್ದು, ರೋಬೊದ ಸಾಮರ್ಥ್ಯ ವೀಕ್ಷಿಸಲಾಗಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಜಾಗತಿಕ ಗುಣಮಟ್ಟದ ಬೋಧನೆ ದೊರಕಿಸಲು ಇಂತಹ ರೋಬೊಗಳಿದ್ದರೆ ಒಳ್ಳೆಯದು’ ಎಂದು ಅಭಿಪ್ರಾಯಪಟ್ಟರು.

‘ರೋಬೊ‌ ಶಿಕ್ಷಕರಿಗೆ ಪರ್ಯಾಯ ಅಲ್ಲ. ಆದರೆ, ಶಿಕ್ಷಕರಿಗೆ ಬೋಧನೆಯಲ್ಲಿ ಸಹಕರಿಸುವ ಕೆಲಸ ಮಾಡಲಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಯ ಮಟ್ಟ ಕೂಡ ಹೆಚ್ಚಾಗಲಿದೆ’ ಎಂದು ಹೇಳಿದರು.

‘ರೋಬೊವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ತೋರಿಸಲಾಗುವುದು. ಅವರಿಂದಲೇ ಈ ಯೋಜನೆಗೆ ಚಾಲನೆ‌ ಕೊಡಿಸಲಾಗುವುದು. ಮಲ್ಲೇಶ್ವರ ಕ್ಷೇತ್ರದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಇದನ್ನು ಜಾರಿ ಮಾಡುವ ಉದ್ದೇಶ ಇದೆ’ ಎಂದು ಅವರು ವಿವರಿಸಿದರು.

ಇಂಡಸ್ ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್‌ರಾಯ್, ಮಲ್ಲೇಶ್ವರ ಬಿಇಒ ಉಮಾದೇವಿ, ಕಾಲೇಜಿನ ಪ್ರಾಂಶುಪಾಲ ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT