ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾಷಾ ಬೆಳವಣಿಗೆಗೆ ತಂತ್ರಜ್ಞಾನದ ನೆರವು’

‘ಕನ್ನಡವೆಂದರೆ ಬರಿ ನುಡಿಯಲ್ಲ’ ಸಂವಾದದಲ್ಲಿ ವಿವೇಕ ರೈ ಪ್ರತಿಪಾದನೆ
Last Updated 15 ಅಕ್ಟೋಬರ್ 2022, 19:39 IST
ಅಕ್ಷರ ಗಾತ್ರ

ಬೆಂಗಳೂರು: ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕನ್ನಡ ಭಾಷೆ, ಸಾಹಿತ್ಯವನ್ನು ಸಮಕಾಲೀನ ಜಗತ್ತು ಹಾಗೂ ಯುವ ಜನರಿಗೆ ತಲುಪಿಸುವ ಕೆಲಸ ತುರ್ತಾಗಿ ಆಗಬೇಕಿದೆ ಎಂದುಜಾನಪದ ವಿದ್ವಾಂಸ ಬಿ.ಎ.ವಿವೇಕ ರೈ ಪ್ರತಿಪಾದಿಸಿದರು.

ಕನ್ನಡ ಜನಶಕ್ತಿ ಕೇಂದ್ರ ಶನಿವಾರ ಹಮ್ಮಿಕೊಂಡಿದ್ದ ‘ಕನ್ನಡವೆಂದರೆ ಬರಿ ನುಡಿಯಲ್ಲ–ಬಹುಮುಖಿ ಕನ್ನಡದ ನೆಲೆಗಳ ಶೋಧ’ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂಸ್ಕೃತವೂ ಸೇರಿದಂತೆ ಇತರೆ ಭಾಷೆಗಳನ್ನು ಒಳಗೊಂಡು ಬಹುತ್ವದ ಆಶಯದಲ್ಲಿ ಸಾಗಿಬಂದ ಕನ್ನಡ ಸಾಹಿತ್ಯ ಇಂದು ಬದಲಾದ ಜಗತ್ತಿನಲ್ಲಿ ನಿಂತ ನೀರಾಗದಂತೆ ಎಚ್ಚರಿಕೆ ವಹಿಸಬೇಕಿದೆ. ತಂತ್ರಜ್ಞಾನ ಬಳಕೆಯ ಅಲಕ್ಷ್ಯದ ಪರಿಣಾಮ ಗೂಗಲ್‌ ಸೇರಿದಂತೆ ಇತರೆ ಜಾಲತಾಣಗಳ ಬಳಕೆಯಲ್ಲಿ ಹಿಂದೆ ಸಾಗಿದ್ದೇವೆ. ಈಚೆಗೆ ವಿದೇಶಿಯರಿಗೆ ಪರಿಚಯಿಸಿದ ಜನ್ನನ ಕೃತಿ ಅಹಿಂಸೆಯ ಪ್ರತಿಪಾದನೆಯ ಕಾರಣಕ್ಕೆ ಸಾಕಷ್ಟು ಜನರನ್ನು ತಲುಪಿದೆ. ಹಾಗಾಗಿ, ವಿದೇಶಿಯರಿಗೂ ಕನ್ನಡದ ಬಗ್ಗೆ ಆಸಕ್ತಿ ಮೂಡಿಸುವ, ಕನ್ನಡ ಕೃತಿಗಳು ಇತರೆ ಭಾಷೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅನುವಾದಗೊಳ್ಳುವ ಕಾರ್ಯ ಆಗಬೇಕಿದೆ‘ ಎಂದರು.

‘ವೈಚಾರಿಕತೆ ಎಂದರೆ ಆಸ್ತಿಕತೆ, ಧರ್ಮವನ್ನು ವಿರೋಧಿಸುವ ಮಾರ್ಗವಲ್ಲ; ಅವರ ಮನೋಭಾವಗಳನ್ನು ಗೌರವಿಸುವುದಾಗಿದೆ. ಕನ್ನಡ ಒಂದು ಸಂಸ್ಕೃತಿಯಾದರೆ, ಧರ್ಮ ವೈಯಕ್ತಿಕವಾಗಿರುತ್ತದೆ. ಎಲ್ಲ ಕಾಲದಲ್ಲೂ ಧರ್ಮ ಒಂದೇ ರೂಪದಲ್ಲಿ ಇರಲು ಸಾಧ್ಯವಿಲ್ಲ ಎಂಬ ಸತ್ಯ ಅರ್ಥ ಮಾಡಿಕೊಂಡು ಸಾಗಬೇಕು. ಅದೇ ಧರ್ಮ ಸಹಿಷ್ಣುತೆ. ನಿಜವಾದ ಬಹುತ್ವ. ಇಂತಹ ಅಂಶಗಳನ್ನು ಒಳಗೊಂಡ ಕಾರಣಕ್ಕಾಗಿಯೇ ಕನ್ನಡದ ಕೃತಿಗಳು, ದಾರ್ಶನಿಕರು ಬಹುತ್ವದ ಪ್ರತಿಪಾದಕರೇ ಆಗಿದ್ದರು’ ಎಂದು ವಿಶ್ಲೇಷಿಸಿದರು.

ಎಂ.ಆರ್. ಸತ್ಯನಾರಾಯಣ ಹಳೆಗನ್ನಡ ಕಾವ್ಯಗಳನ್ನು ಪ್ರಸ್ತುತ ಪಡಿಸಿದರು. ‘ಕನ್ನಡ ಭಾಷೆ ಬಹುತ್ವದ ಚಹರೆಗಳು’ ಕುರಿತು ರಹಮತ್ ತರೀಕೆರೆ ವಿಶೇಷ ಉಪನ್ಯಾಸ ನೀಡಿದರು. ‘ಕನ್ನಡ ಪ್ರಜ್ಞೆ ಸಾಹಿತ್ಯಕ ಮಾದರಿಗಳು’ ಸಂವಾದದಲ್ಲಿ ಬಿ.ಪಿ.ವೀರೇಂದ್ರಕುಮಾರ್, ವೆಂಕಟಗಿರಿ ದಳವಾಯಿ, ಪಿ.ಚಂದ್ರಿಕ, ಕೆ.ವೈ.ನಾರಾಯಣಸ್ವಾಮಿ ಭಾಗವಹಿಸಿದ್ದರು. ‘ಆಧ್ಯಾತ್ಮದ ಭಾಷೆಯಾಗಿ ಕನ್ನಡ’ ಗೋಷ್ಠಿಯಲ್ಲಿ ಲಕ್ಷ್ಮೀಶ ತೋಳ್ಪಾಡಿ ಮಾತನಾಡಿದರು.

ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ನ.ರವಿಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT