ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Suburban Rail: ಎಲ್‌ ಆ್ಯಂಡ್‌ ಟಿ ಗೆ ಉಪನಗರ ರೈಲು ಕಾರಿಡಾರ್‌–4 ಟೆಂಡರ್‌

Published 1 ಸೆಪ್ಟೆಂಬರ್ 2023, 16:20 IST
Last Updated 1 ಸೆಪ್ಟೆಂಬರ್ 2023, 16:20 IST
ಅಕ್ಷರ ಗಾತ್ರ

ಬೆಂಗಳೂರು: ಉಪನಗರ ರೈಲು ಯೋಜನೆಯ ಕಾರಿಡಾರ್‌–4 ಸಿವಿಲ್‌ ಕಾಮಗಾರಿಗಳ ಟೆಂಡರ್‌ ’ಎಲ್‌ ಆ್ಯಂಡ್ ಟಿ’ ಕಂಪನಿ ‍ಪಾಲಾಗಿದೆ. ಬಿಡ್‌ ಮಾಡಿದ್ದ ನಾಲ್ಕು ಕಂಪನಿಗಳಲ್ಲಿ ಎಲ್‌ ಆ್ಯಂಡ್‌ ಟಿ ಅತಿ ಕಡಿಮೆ ಬಿಡ್ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೀಲಲಿಗೆ - ರಾಜಾನುಕುಂಟೆ ನಡುವಿನ ಕಾರಿಡಾರ್‌–4ಕ್ಕೆ ‘ಕನಕ’ ಮಾರ್ಗ (ಹಳದಿ) ಎಂದು ಹೆಸರಿಸಲಾಗಿದೆ. ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಕಾರಿಡಾರ್‌–2 ಕಾಮಗಾರಿಗಳು ಈಗಾಗಲೇ ನಡೆಯುತ್ತಿದ್ದು, ಕಾರಿಡಾರ್‌–4 ಬಿಡ್‌ದಾರರಿಗೆ ಹಸ್ತಾಂತರವಾಗಲಿದೆ.

ಬಿಎಸ್‌ಆರ್‌ಪಿ ಒಟ್ಟು 149.34 ಕಿಲೋಮೀಟರ್‌ ಮಾರ್ಗ ಹೊಂದಿದ್ದು, ಅದರಲ್ಲಿ ಕಾರಿಡಾರ್–4ರಲ್ಲಿ 46.88 ಕಿ.ಮೀ. ನಿರ್ಮಾಣಗೊಳ್ಳಲಿದೆ.  8.96 ಕಿ.ಮೀ. ವಯಡಕ್ಟ್ (ಕಮಾನು ಸೇತುವೆ) ಹಾಗೂ 37.92 ಕಿ.ಮೀ. ಗ್ರೇಡ್ ನಿರ್ಮಾಣಗೊಳ್ಳಲಿದೆ. ಎತ್ತರಿಸಿದ (ಎಲಿವೇಟೆಡ್) 2 ನಿಲ್ದಾಣಗಳು ಸೇರಿದಂತೆ ಒಟ್ಟು 19 ರೈಲು ನಿಲ್ದಾಣಗಳ ನಿರ್ಮಾಣಕ್ಕೆ ಪ್ರತ್ಯೇಕ ಪ್ಯಾಕೇಜ್ ಮಾಡಲಾಗಿದೆ.

ಕರ್ನಾಟಕ ರೈಲ್‌ ಇನ್‌ಫ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್ ಕಂಪನಿ (ಕೆ–ರೈಡ್‌) ಈ ವರ್ಷದ ಜನವರಿಯಲ್ಲಿ ಟೆಂಡರ್‌ ಕರೆದಿತ್ತು. ಅಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್, ದಿನೇಶ್ಚಂದ್ರ ಆರ್. ಅಗರವಾಲ್ ಇನ್ಫ್ರಾಕಾನ್, ಇನ್‌ಟಾರ್ವೊ ಟೆಕ್ನಾಲಜೀಸ್ ಮತ್ತು ಎಲ್ ಆ್ಯಂಡ್‌ ಟಿ ಕಂಪನಿಗಳು ಬಿಡ್‌ ಸಲ್ಲಿಸಿದ್ದವು. ಬಿಡ್‌ ತೆರೆದು ಪರಿಶೀಲಿಸಲಾಯಿತು. ದಿನೇಶ್ಚಂದ್ರ ಆರ್. ಅಗರವಾಲ್ ಇನ್ಫ್ರಾಕಾನ್, ಇನ್‌ಟಾರ್ವೊ ಟೆಕ್ನಾಲಜೀಸ್ ಬಿಡ್‌ಗಳು ಷರತ್ತಿಗೆ ಅನುಗುಣವಾಗಿರಲಿಲ್ಲ. ಆಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್ 1,424 ಕೋಟಿ ಹಾಗೂ ಎಲ್‌ ಆ್ಯಂಡ್‌ ಟಿ ಕಂಪನಿಯು ₹ 1,021 ಕೋಟಿ ಬಿಡ್‌ ಸಲ್ಲಿಸಿದ್ದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಮಾರ್ಗದಲ್ಲಿ ರಾಜಾನುಕುಂಟೆ, ಮುದ್ದನಹಳ್ಳಿ, ಯಲಹಂಕ (ಎಲಿವೇಟೆಡ್ ಇಂಟರ್‌ಚೇಂಜ್), ಜಕ್ಕೂರು, ಹೆಗಡೆ ನಗರ, ಥಣಿಸಂದ್ರ, ಹೆಣ್ಣೂರು, ಹೊರಮಾವು, ಚನ್ನಸಂದ್ರ, ಬೆನ್ನಿಗಾನಹಳ್ಳಿ (ಇಂಟರ್‌ಚೇಂಜ್), ಕಗ್ಗದಾಸಪುರ, ಮಾರತ್ತಹಳ್ಳಿ (ಎಲಿವೇಟೆಡ್), ಬೆಳಂದೂರು ರಸ್ತೆ, ಕಾರ್ಮೆಲರಾಂ, ಅಂಬೇಡ್ಕರ್‌ ನಗರ, ಹುಸ್ಕೂರು, ಸಿಂಗೇನ ಅಗ್ರಹಾರ, ಬೊಮ್ಮಸಂದ್ರ ಮತ್ತು ಹೀಲಲಿಗೆಯಲ್ಲಿ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. 30 ತಿಂಗಳ ಒಳಗೆ ಕಾಮಗಾರಿ ಮುಗಿಸಲು ಷರತ್ತು ವಿಧಿಸಲಾಗಿದೆ.

ಈಗಾಗಲೇ ಚಿಕ್ಕಬಾಣಾವರ–ಬೈಯಪ್ಪನಹಳ್ಳಿ ನಡುವಿನ ಕಾರಿಡಾರ್‌–2 ಮಲ್ಲಿಗೆ ಮಾರ್ಗ (ನೀಲಿ) ಕಾಮಗಾರಿ ಪ್ರಗತಿಯಲ್ಲಿದೆ. ಬೆಂಗಳೂರು ನಗರ– ದೇವನಹಳ್ಳಿ ನಡುವಿನ  ಕಾರಿಡಾರ್‌–1 ಸಂಪಿಗೆ ಮಾರ್ಗ (ಹಸಿರು), ಕೆಂಗೇರಿ–ವೈಟ್‌ಫೀಲ್ಡ್‌ ನಡುವಿನ ಕಾರಿಡಾರ್‌–2 ಪಾರಿಜಾತ ಮಾರ್ಗ (ಕೆಂಪು) ಕಾಮಗಾರಿಗಳಿಗೆ ಇನ್ನಷ್ಟೇ ಚಾಲನೆ ದೊರೆಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT