ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಣಿಸಂದ್ರ: ಶೌಚಾಲಯವಿಲ್ಲದೆ ಪರದಾಟ; ಸ್ಪಂದಿಸದ ಜನಪ್ರತಿನಿಧಿಗಳು, ಅಧಿಕಾರಿಗಳು

Last Updated 20 ಆಗಸ್ಟ್ 2020, 20:54 IST
ಅಕ್ಷರ ಗಾತ್ರ

ಯಲಹಂಕ: ಥಣಿಸಂದ್ರ ವಾರ್ಡ್‌ ವ್ಯಾಪ್ತಿಯ ಹೆಗ್ಗಡೆನಗರ ಮುಖ್ಯರಸ್ತೆಯಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದ ಪರಿಣಾಮ ನಾಗರಿಕರುತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಪ್ರದೇಶದಲ್ಲಿಕೂಡಲೇ ಶೌಚಾಲಯ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ನಾರಾಯಣಪುರ ಕ್ರಾಸ್‌ನಿಂದ ಬೆಳ್ಳಹಳ್ಳಿ ಕ್ರಾಸ್‌ವರೆಗೆ ನಾಲ್ಕೈದು ಕಿ.ಮೀ ಅಂತರದಲ್ಲಿ ಯಾವುದೇ ಸಾರ್ವಜನಿಕ ಶೌಚಾಲಯವಿಲ್ಲ. ಈ ರಸ್ತೆಯಲ್ಲಿ ನಾರಾಯಣಪುರ ಕ್ರಾಸ್ ಮತ್ತು ಹೆಗ್ಗಡೆನಗರ ಬಸ್ ನಿಲ್ದಾಣಗಳೂ ಸೇರಿದಂತೆ ಸಾಕಷ್ಟು ಅಂಗಡಿ ಮುಂಗಟ್ಟುಗಳೂ ಇರುವುದರಿಂದ ಈ ಪ್ರದೇಶಕ್ಕೆ ಪ್ರತಿನಿತ್ಯ ನೂರಾರು ಜನ ಬಂದು ಹೋಗುತ್ತಾರೆ. ಶೌಚಾಲಯವಿಲ್ಲದೆ ಸಮಸ್ಯೆಯಾಗಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.

‘ಪ್ರಯಾಣಿಕರು, ಮಹಿಳಾ ನಿರ್ವಾಹಕರು ಹಾಗೂ ಪೊಲೀಸರು ತೊಂದರೆ ಅನುಭವಿಸುತ್ತಿದ್ದಾರೆ.ಜನಪ್ರತಿನಿಧಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ’ ಎಂಬುದು ನಿವಾಸಿ ಲಕ್ಷ್ಮಮ್ಮ ದೂರಿದರು.

‘6 ತಿಂಗಳ ಹಿಂದೆ ಬಿಬಿಎಂಪಿ ಯಲಹಂಕ ವಲಯದ ಜಂಟಿ ಆಯುಕ್ತರನ್ನು ಭೇಟಿಮಾಡಿ, ಈ ಸ್ಥಳದಲ್ಲಿ ಶೌಚಾಲಯ ನಿರ್ಮಿಸಬೇಕು ಎಂದು ಮನವಿ ಮಾಡಲಾಗಿತ್ತು. ಅದರಂತೆ ಅಧಿಕಾರಿಗಳು ಗುತ್ತಿಗೆದಾರ ರೊಂದಿಗೆಭೇಟಿನೀಡಿ, ಹೆಗ್ಗಡೆನಗರ ಬಸ್ ನಿಲ್ದಾಣದ ಸಮೀಪದಲ್ಲಿ ಶೌಚಾಲಯ ನಿರ್ಮಿಸಲು ಗುಂಡಿತೆಗೆದು, ಜಲ್ಲಿ ಮತ್ತಿತರ ಸಾಮಗ್ರಿಗಳನ್ನು ತಂದು ಹಾಕಿದರು. ಆದರೆ ಮತ್ತೆ ಇತ್ತ ಸುಳಿಯಲಿಲ್ಲ’ ಎಂದು ಅವರು ಹೇಳಿದರು.

‘ಈ ಸ್ಥಳವು ಸದ್ಯಕ್ಕೆ ಖಾಲಿ ಇರುವುದರಿಂದ ಪ್ರಯಾಣಿಕರು, ದಾರಿಹೋಕರು ಹಾಗೂ ಅಂಗಡಿಗಳವರು ಕಾಂಪೌಂಡ್ ಪಕ್ಕದಲ್ಲಿಯೇ ಮೂತ್ರವಿಸರ್ಜನೆ ಮಾಡುತ್ತಿದ್ದಾರೆ. ರಾತ್ರಿಯಾದರೆ ಮಾದಕವ್ಯಸನಿಗಳಿಗೂ ಇದು ಅಡ್ಡೆಯಾಗಿ ಮಾರ್ಪಟ್ಟಿದೆ. ಈ ರಸ್ತೆಯಲ್ಲಿ ಸಂಚರಿಸುವ ಹೆಣ್ಣುಮಕ್ಕಳು ಭಯಪಡುವುದರ ಜೊತೆಗೆ ಮುಜುಗರ ಅನುಭವಿಸಬೇಕಾಗಿದೆ’ ಎಂದು ಅವರು ದೂರಿದರು.

‘ಈ ಜಾಗದಲ್ಲಿ ಸಾರ್ವಜನಿಕರು ಕಸ ಎಸೆದು ಹೋಗುತ್ತಿರುವುದರ ಜೊತೆಗೆ ಅಂಗಡಿಗಳವರು ಹಣ್ಣು-ತರಕಾರಿ ಮತ್ತು ಮೀನು, ಮಾಂಸದ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ. ಸಾರ್ವಜನಿಕರು ಈ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಸಂಚರಿಸಬೇಕಾಗಿದೆ’ ಎಂದು ಹೆಗ್ಗಡೆನಗರ ನಿವಾಸಿ ಕುಮಾರ್ ಆಗ್ರಹಿಸಿದ್ದಾರೆ.

‘ಈ ಸ್ಥಳದಲ್ಲಿ ವರ್ಷದ ಹಿಂದೆಯೇ ಶೌಚಾಲಯ ನಿರ್ಮಿಸಲು ಅನುದಾನ ಮಂಜೂರಾಗಿತ್ತು. ಆದರೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳೀಯರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಅಲ್ಲದೆ, ಥಣಿಸಂದ್ರ ಪೊಲೀಸ್ ಸಂಚಾರ ತರಬೇತಿ ಕೇಂದ್ರವೂ ಹತ್ತಿರದಲ್ಲೇ ಇರುವುದರಿಂದಪೊಲೀಸರೂ ಸಹ ಈ ಸ್ಥಳದಲ್ಲಿ ಶೌಚಾಲಯ ನಿರ್ಮಿಸುವುದು ಬೇಡ, ನಿರ್ವಹಣೆ ಸಮಸ್ಯೆಯಾಗುತ್ತದೆ ಎಂದು ಹೇಳಿದರು. ಇದಕ್ಕಾಗಿ, ಕಾಮಗಾರಿ ಸ್ಥಗಿತಗೊಳಿಸಲಾಯಿತು. ಸೂಕ್ತಜಾಗ ಗುರುತಿಸಿದರೆ ಈಗಲೂ ಶೌಚಾಲಯ ನಿರ್ಮಿಸಲು ಸಿದ್ಧ’ ಎಂದು ಬಿಬಿಎಂಪಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಶ್ರೀಧರ್‌ ಹೇಳಿದರು.

ದಾಬಸ್‌ಪೇಟೆ: ಸಾರ್ವಜನಿಕ ಶೌಚಾಲಯವೇ ಇಲ್ಲ
ದಾಬಸ್ ಪೇಟೆ: ಹತ್ತು ಸಾವಿರ ಜನಸಂಖ್ಯೆ ಇರುವ ಈ ಪಟ್ಟಣದಲ್ಲಿ ಒಂದೇ ಒಂದು ಸಾರ್ವಜನಿಕ ಶೌಚಾಲಯವಿಲ್ಲ. ಮೊದಲಿದ್ದ ಶೌಚಾಲಯವನ್ನು ಕೆಡವಿ ವರ್ಷವೇ ಕಳೆದರೂ, ಹೊಸದನ್ನು ನಿರ್ಮಾಣ ಮಾಡಿಲ್ಲ. ಸಾರ್ವಜನಿಕ ಶೌಚಾಲಯವಿಲ್ಲದೆ ಸ್ಥಳೀಯರು ಸಮಸ್ಯೆ ಎದುರಿಸುತ್ತಿದ್ದಾರೆ.

ಪಟ್ಟಣದ ಮಧ್ಯೆ ಹಾದು ಹೋಗಿರುವ ಮೇಲ್ಸೇತುವೆಯ ಗೋಡೆಯೇ ಕಾಯಂ ಮೂತ್ರಾಲಯವಾಗಿದೆ.

ಪಂಚಾಯಿತಿ ಅನುದಾನದ ಅಡಿ ನಿರ್ಮಿಸಲಾಗಿದ್ದ ಶೌಚಾಲಯವನ್ನು ರಸ್ತೆ ವಿಸ್ತರಣೆ, ಅಪಘಾತ ತಡೆಯುವ ಉದ್ದೇಶದಿಂದ ನೆಲಸಮಗೊಳಿಸಲಾಗಿತ್ತು. ಆದರೆ, ಅದಕ್ಕೆ ಪರ್ಯಾಯವಾಗಿ ಹೊಸ ಶೌಚಾಲಯ ನಿರ್ಮಾಣವಾಗಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

‘ಪಂಚಾಯಿತಿಗಳು ಮತ್ತು ಜಿಲ್ಲಾಡಳಿತ ಕೂಡ ಸಮಸ್ಯೆಯ ಅರಿವಿಲ್ಲದಂತೆ ಇದೆ. ಜನಪ್ರತಿನಿಧಿಗಳು ಕೂಡಲೇ ಇತ್ತ ಗಮನಹರಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

‘ದಾಬಸ್‌ಪೇಟೆಯಲ್ಲಿ ನೂರಾರು ಅಂಗಡಿಗಳಿವೆ. ತರಕಾರಿ, ಹೂವು, ಹಣ್ಣು ಮಾರುವವರಿದ್ದಾರೆ. ಅಲ್ಲದೆ, ವಿವಿಧ ಸ್ಥಳಗಳಿಗೆ ನಿತ್ಯ ಸಾವಿರಾರು ಪ್ರಯಾಣಿಕರು ಇಲ್ಲಿಂದಲೇ ತೆರಳುತ್ತಾರೆ. ಸಾರ್ವಜನಿಕ ಶೌಚಾಲಯವಿಲ್ಲದ ಕಾರಣ ಇವರೆಲ್ಲರಿಗೂ ತೊಂದರೆಯಾಗಿದೆ. ಇಂಥ ಸ್ಥಳದಲ್ಲಿ ಶೌಚಾಲಯ ಇಲ್ಲದಿರುವುದು ನಾಚಿಕೆಗೇಡಿನ ವಿಷಯ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಹಿರಿಯ ನಾಗರಿಕ ರಾಮಯ್ಯ.

**

‘ಈ ಜಾಗದಲ್ಲಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಡೆತಡೆ ಎದುರಾಗಿದ್ದರಿಂದ ಕಾಮಗಾರಿ ಸ್ಥಗಿತ ಗೊಳಿಸಲಾಯಿತು. ನಿವಾರಣೆಯಾದ ಕೂಡಲೇ ಶೌಚಾಲಯ ನಿರ್ಮಿಸ ಲಾಗುವುದು.
-ಮಮತಾ ವೆಂಕಟೇಶ್, ಪಾಲಿಕೆ ಸದಸ್ಯೆ, ಥಣಿಸಂದ್ರ ವಾರ್ಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT