ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಹಾಯಕ ಧರ್ಮಾಧ್ಯಕ್ಷರ ಎಪಿಸ್ಕೋಪಲ್‌ ದೀಕ್ಷೆ ನಾಳೆ

Published 22 ಆಗಸ್ಟ್ 2024, 20:35 IST
Last Updated 22 ಆಗಸ್ಟ್ 2024, 20:35 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಧರ್ಮಪ್ರಾಂತ್ಯದ ನೂತನ ಸಹಾಯಕ ಧರ್ಮಾಧ್ಯಕ್ಷರ ಎಪಿಸ್ಕೋಪಲ್‌ ದೀಕ್ಷಾ ಸಮಾರಂಭ ಶನಿವಾರ (ಆಗಸ್ಟ್ 24) ಬೆಳಿಗ್ಗೆ 9ರಿಂದ ಸೇಂಟ್‌ ಫ್ರಾನ್ಸಿಸ್‌ ಕ್ಸೇವಿಯರ್‌ ಕೆಥೆಡ್ರಲ್‌ನಲ್ಲಿ ನಡೆಯಲಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಬೆಂಗಳೂರು ಧರ್ಮಪ್ರಾಂತ್ಯದ ಆರ್ಚ್‌ಬಿಸಷಪ್‌ ಪೀಟರ್‌ ಮಚಾಡೊ, ‘ಈ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷನಾಗಿ ನಾನು ಒಬ್ಬನೇ ಕಾರ್ಯನಿರ್ವಹಿಸುತ್ತಿದ್ದೆ. ಸುಸೂತ್ರವಾಗಿ ಆಡಳಿತ ನಡೆಸಿಕೊಂಡು ಹೋಗುವುದಕ್ಕಾಗಿ ಇಬ್ಬರು ಸಹಾಯಕ ಧರ್ಮಾಧ್ಯಕ್ಷರನ್ನು ಪೋಪ್‌ ಅವರು ನೇಮಕ ಮಾಡಿದ್ದಾರೆ. ಭಾರತೀಯ ಸಂಸ್ಕೃತಿಯಂತೆ ಪೀಠಾರೋಹಣ ನಡೆಯಲಿದೆ’ ಎಂದು ತಿಳಿಸಿದರು.

ಮೈಸೂರು ಅಪೋಸ್ಟೊಲಿಕ್‌ ಆಡಳಿತಗಾರ ಬರ್ನಾರ್ಡ್‌ ಮೋರಸ್‌, ಚಿಕ್ಕಮಗಳೂರು ಬಿಷಪ್‌ ಟಿ. ಅಂಥೋಣಿ ಸ್ವಾಮಿ ಸೇರಿದಂತೆ ಬೇರೆ ಬೇರೆ ಧರ್ಮಪ್ರಾಂತ್ಯಗಳ 15–16 ಧರ್ಮಾಧ್ಯಕ್ಷರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. 400 ಧರ್ಮ ಗುರುಗಳು, ಸುಮಾರು 300 ಸನ್ಯಾಸಿನಿಯರು, ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.

ಬೆಳಿಗ್ಗೆ 9ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಪ್ರಾರ್ಥನೆ, ಆಶೀರ್ವಾದ, ಬೋಧನೆ ಮುಂತಾದ ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 12ರಿಂದ ಸಾರ್ವಜನಿಕ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

‘ಪ್ರಾರ್ಥನೆಯಷ್ಟೇ ಸೇವೆಗೂ ನಾವು ಮಹತ್ವವನ್ನು ನೀಡುತ್ತಾ ಬಂದಿದ್ದೇವೆ. ನಮ್ಮ ಧರ್ಮಪ್ರಾಂತ್ಯದ ಅಡಿಯಲ್ಲಿ 150ಕ್ಕೂ ಅಧಿಕ ಚರ್ಚ್‌ಗಳಿವೆ. 60 ಕಿರು ದೇವಾಲಯಗಳಿವೆ. 600 ಕಾನ್ವೆಂಟ್‌ಗಳು, 110 ಶಾಲಾ, ಕಾಲೇಜುಗಳಿವೆ’ ಎಂದು ಹೇಳಿದರು.

ಕನ್ನಡಕ್ಕೆ ಒತ್ತು: ‘ನಾವು ಈ ರಾಜ್ಯದ ಪ್ರಜೆಗಳಾಗಿ ಕನ್ನಡಕ್ಕೆ ಮಹತ್ವ ನೀಡಲೇಬೇಕು. ಕನ್ನಡಿಗರಿಗೆ ಕನ್ನಡದಲ್ಲಿಯೇ ಪ್ರಾರ್ಥನೆ ಮಾಡಲು ಅವಕಾಶ ನೀಡಲಾಗಿದೆ. ಅದೇ ರೀತಿ ತಮಿಳು, ಇಂಗ್ಲಿಷ್‌ನಲ್ಲಿಯೂ ಪ್ರಾರ್ಥನೆ ಮಾಡಲು ಬೇರೆ ಬೇರೆ ಸಮಯದಲ್ಲಿ ಅವಕಾಶ ಮಾಡಿಕೊಟ್ಟಿದ್ದೇವೆ. ದೇವರ ಭಾಷೆ ಪ್ರೀತಿಯೇ ಆಗಿರುವುದರಿಂದ ನಮ್ಮ ನಮ್ಮ ಭಾಷೆಗಳಲ್ಲಿ ಪ್ರಾರ್ಥನೆ ಮಾಡಬಹುದು’ ಎಂದು ತಿಳಿಸಿದರು.

ನೂತನ ಸಹಾಯಕ ಧರ್ಮಾಧ್ಯಕ್ಷರಾದ ಧರ್ಮಗುರು ಆರೋಕ್ಯರಾಜ್ ಸತೀಶ್ ಕುಮಾರ್ ಮತ್ತು ಧರ್ಮಗುರು ಜೋಸೆಫ್ ಸೂಸೈನಾದನ್ ಮಾತನಾಡಿ, ‘ನಾವು ಹೊಸ ಯೋಜನೆ ರೂಪಿಸುತ್ತಿಲ್ಲ.  ಧರ್ಮಾಧ್ಯಕ್ಷರಿಗೆ ಎಲ್ಲ ಸಹಕಾರ, ಸಲಹೆ ನೀಡಲು ಬಂದಿದ್ದೇವೆ. ಅವರ ಯೋಜನೆಗಳನ್ನು ಕಾರ್ಯಗತಗೊಳಿಸುತ್ತೇವೆ. ಸಮಾಜದ ಹಿತದ ದೃಷ್ಟಿಯಿಂದ ಕೆಲಸ ಮಾಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT