ಬೆಂಗಳೂರು: ನಗರದ ನೃಪತುಂಗ ವಿಶ್ವವಿದ್ಯಾಲದಯ ಪ್ರಥಮ ಘಟಿಕೋತ್ಸವ ಬುಧವಾರ (ಆಗಸ್ಟ್ 21) ಬೆಳಿಗ್ಗೆ 11ಕ್ಕೆ ಜ್ಞಾನಜ್ಯೊತಿ ಸಭಾಂಗಣದಲ್ಲಿ ನಡೆಯಲಿದೆ. ಬೇರೆ ಬೇರೆ ಕ್ಷೇತ್ರದ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್, ವಿವಿಧ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ 16 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುವುದು ಎಂದು ವಿಶ್ವವಿದ್ಯಾಲಯದ ಕುಲಪತಿ ಶ್ರೀನಿವಾಸ ಎಸ್. ಬಳ್ಳಿ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ‘792 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಇಸ್ರೊ ವಿಜ್ಞಾನಿ ನಂದಿನಿ ಹರಿನಾಥ, ಸ್ವಾಮಿ ವಿವೇಕಾನಂದ ಯೂಥ್ ಮೂವ್‌ಮೆಂಟ್‌ನ ರಾಮಸ್ವಾಮಿ ಬಾಲಸುಬ್ರಮಣಿಯನ್ ಮತ್ತು ಇನ್ಫೊಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ದಿನೇಶ ಕೆ. ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು’ ಎಂದರು.
2020-22ರ ಬ್ಯಾಚ್‌ನ 169 ಮತ್ತು 2021-23ರ ಬ್ಯಾಚ್‌ನ 169 ಸ್ನಾತಕೋತರ ಪದವೀಧರರಿಗೆ ಮತ್ತು 2020-23ರ 454 ಸ್ನಾತಕ ಪದವೀಧರರಿಗೆ ಪದವಿ ಪ್ರದಾನ ಮಾಡಲಾಗುವುದು. ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವವಿದ್ಯಾಲಯ ಅನುದಾನ ಆಯೋಗದ ಅಧ್ಯಕ್ಷ ಎಂ. ಜಗದೀಶ್ ಭಾಗವಹಿಸುವರು ಎಂದರು.
‘ನಮ್ಮ ವಿಶ್ವವಿದ್ಯಾಲಯದಲ್ಲಿ ಸದ್ಯ 2,300 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮುಂದೆ 5,000ಕ್ಕೆ ಈ ಸಂಖ್ಯೆಯನ್ನು ಏರಿಸುವ ಗುರಿ ಇದೆ. ವಿಶ್ವವಿದ್ಯಾಲಯದ ಹೊಸ ಕಟ್ಟಡ ನಿರ್ಮಾಣ ಅಂತಿಮ ಹಂತಕ್ಕೆ ಬಂದಿದ್ದು, ಮುಂದಿನ ಶೈಕ್ಷಣಿಕ ವರ್ಷಕ್ಕೆ ಉದ್ಘಾಟನೆಗೊಳ್ಳಲಿದೆ’ ಎಂದು ವಿವರಿಸಿದರು.
ನೃಪತುಂಗ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಕುಲಸಚಿವ ಶಿವಾನಂದ ಬ. ಕರಾಳೆ ಮತ್ತು ಮೌಲ್ಯಮಾಪನ ಕುಲಸಚಿವ ಎ.ಸಿ. ಮಂಜುಳಾ ಭಾಗವಹಿಸಿದ್ದರು.