ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪಿಲ್ ಮೋಹನ್ ಪತ್ನಿಗೆ ನೀಡಿದ್ದ ಸಮನ್ಸ್ ರದ್ದು

Published 6 ಜೂನ್ 2023, 2:55 IST
Last Updated 6 ಜೂನ್ 2023, 2:55 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಅವರ ಪತ್ನಿ ರಿಚಾ ಸಕ್ಸೇನಾ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಜಾರಿಗೊಳಿಸಿದ್ದ ಸಮನ್ಸ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ.

ಈ ಸಂಬಂಧ, ’ಜಾರಿ ನಿರ್ದೇಶನಾಲಯ ನನ್ನ ವಿರುದ್ಧ 2023ರ ಫೆಬ್ರುವರಿ 2ರಂದು ಜಾರಿಗೊಳಿಸಿರುವ ಸಮನ್ಸ್ ರದ್ದುಪಡಿಸಬೇಕು‘ ಎಂದು ಕೋರಿ ರಿಚಾ ಸಕ್ಸೇನಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ‍‍ಪುರಸ್ಕರಿಸಿದೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲಾದ ‘ಬಿ‘ ರಿಪೋರ್ಟ್ ಅನ್ನು ಒಪ್ಪಿಕೊಂಡಿರುವ ನ್ಯಾಯಾಲಯ ಅರ್ಜಿದಾರರ ವಿರುದ್ಧದ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಿದೆ. ಆದರೂ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಪುನಃ ಸಮನ್ಸ್ ಜಾರಿಗೊಳಿಸಿರುವುದು ನ್ಯಾಯಸಮ್ಮತವಲ್ಲ‘ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಪೀಠ, ರಿಚಾ ವಿರುದ್ಧದ ಸಮನ್ಸ್ ರದ್ದುಪಡಿಸಿ ಆದೇಶಿಸಿದೆ.

ಪ್ರಕರಣವೇನು?: ಹುಬ್ಬಳ್ಳಿಯಲ್ಲಿನ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬುಕ್ಕಿಗಳು ನೀಡಿದ್ದ ಮಾಹಿತಿ ಆಧರಿಸಿ ಹುಬ್ಬಳ್ಳಿ ಹಳೆ ಠಾಣೆಯ ಪೊಲೀಸರು 2015ರಲ್ಲಿ ಭಾರತೀಯ ದಂಡ ಸಂಹಿತೆಯ ಅಡಿ ದರೋಡೆ, ಅಪರಾಧಿಕ ಒಳಸಂಚು, ಸಾಕ್ಷ್ಯನಾಶದ ಪ್ರಕರಣವೊಂದನ್ನು ದಾಖಲಿಸಿದ್ದರು. ಈ ಪ್ರಕರಣದಲ್ಲಿ ರಿಚಾ ಸಕ್ಸೇನಾ ಅವರನ್ನು ಆರೋಪಿಯನ್ನಾಗಿ ಮಾಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ (ಐಟಿ) ಮತ್ತು ಸಿಐಡಿ ಪೊಲೀಸರು ಜಂಟಿಯಾಗಿ ರಿಚಾ ಸಕ್ಸೇನಾ ಅವರ ಮನೆ ಮೇಲೆ ದಾಳಿ ಮಾಡಿದ್ದರು. ಶೋಧನೆ ವೇಳೆ ₹ 4.7 ಕೋಟಿ ನಗದು, 2.5 ಕೆ.ಜಿ. ಚಿನ್ನ ಮತ್ತು ವಜ್ರದ ಆಭರಣ ದೊರೆತಿದ್ದವು. ಇದನ್ನು ಆಧರಿಸಿ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರತ್ಯೇಕ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ತನಿಖೆ ನಡೆಸಿದ್ದ ಅಧಿಕಾರಿಗಳು ವಿಚಾರಣಾ ನ್ಯಾಯಾಲಯಕ್ಕೆ ‘ಬಿ‘ ರಿಪೋರ್ಟ್ ಸಲ್ಲಿಸಿದ್ದರು. ನ್ಯಾಯಾಲಯ 2021ರ ಏಪ್ರಿಲ್‌ 20ರಂದು ‘ಬಿ‘ ರಿಪೋರ್ಟ್ ಅನ್ನು ಒಪ್ಪಿಕೊಂಡಿತ್ತು ಮತ್ತು ರಿಚಾ ಸಕ್ಸೇನಾ ವಿರುದ್ಧದ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು. ನಂತರ ಇಡಿ, ರಿಚಾ ಸಕ್ಸೇನಾ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಈ ಸಮನ್ಸ್‌ ಅನ್ನು ಪ್ರಶ್ನಿಸಿ ರಿಚಾ ಸಕ್ಸೇನಾ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT