ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಘಟ್ಟ: ಕಾರಲ್ಲಿ ಬಂದು ಮೇಕೆ, ಕುರಿಗಳ ಕಳವು

ಆತಂಕದಲ್ಲಿ ರೈತರು, ರಾತ್ರಿಯಿಡೀ ಕಾವಲು, ಕಡಿಮೆ ಬೆಲೆಗೆ ಮಾರಾಟ
ಬೈಲಮೂರ್ತಿ ಜಿ.
Published 3 ಮಾರ್ಚ್ 2024, 20:55 IST
Last Updated 3 ಮಾರ್ಚ್ 2024, 20:55 IST
ಅಕ್ಷರ ಗಾತ್ರ

ಹೆಸರಘಟ್ಟ: ದಾಸನಪುರ ಹೋಬಳಿಯ ಗೋಪಾಲಪುರ ಮತ್ತು ಹುಸ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ರಾತ್ರಿ ವೇಳೆ ಕಾರಿನಲ್ಲಿ ಬಂದು ಕುರಿ ಮತ್ತು ಮೇಕೆಗಳನ್ನು ಕಳ್ಳತನ ಮಾಡುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ. 

’ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದೇವೆ. ಆದರೂ ಕಳ್ಳತನಗಳಿಗೆ ಮಾತ್ರ ಕಡಿವಾಣ ಬಿದ್ದಿಲ್ಲ’ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಕೃತ್ಯಗಳನ್ನು ತಡೆಯುವುದಕ್ಕಾಗಿ ಕೆಲವು ಕಡೆ ರಾತ್ರಿಯೆಲ್ಲ ರೈತರು ನಿದ್ದೆಗೆಟ್ಟು ಕಾವಲು ಕಾಯುವಂತಾಗಿದೆ.

ರಾತ್ರಿ ವೇಳೆ ಕಳವು: ರಾತ್ರಿ ಸುಮಾರು ಒಂದು ಗಂಟೆಯ ನಂತರ ಇನೋವಾ ಕಾರಿನಲ್ಲಿ ಬರುವ ಕಳ್ಳರ ತಂಡ ಮೊದಲು ಮನೆಗಳಿಗೆ ಹೊರಗಿನಿಂದ ಚಿಲಕ ಹಾಕುತ್ತದೆ. ನಂತರ ಶೆಡ್‌ಗಳ ಬಾಗಿಲು ಒಡೆದು, ಅದರೊಳಗಿದ್ದ ಮೇಕೆ ಕುರಿಗಳನ್ನು ಕಾರಿನೊಳಗೆ ತುಂಬಿಕೊಂಡು ಹೋಗುತ್ತಿದೆ. ಈ ರೀತಿ ಕುರಿ–ಮೇಕೆ ಕಳವು ಮಾಡುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.‌

‘ಮಕ್ಕಳ ಶಾಲಾ ಶುಲ್ಕ ಕಟ್ಟುವುದಕ್ಕಾಗಿಯೇ ಮೇಕೆಗಳನ್ನು ಸಾಕಿದ್ದೆ. ಸುಮಾರು ₹1.55 ಲಕ್ಷ ಬೆಲೆ ಬಾಳುವಂತಹ ಮೇಕೆಗಳವು. ರಾತ್ರೋರಾತ್ರಿ ಕೊಟ್ಟಿಗೆ(ಶೆಡ್‌) ಬೀಗ ಒಡೆದು ಅವುಗಳನ್ನು ಕಳವು ಮಾಡಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಆದರೂ ಪ್ರಯೋಜನವಾಗಿಲ್ಲ‘ ಎಂದು ಬೊಮ್ಮಶೆಟ್ಟಿಹಳ್ಳಿ ಗ್ರಾಮದ ರೈತ ಮಹಿಳೆ ಸೌಭಾಗ್ಯ ಬೇಸರದಿಂದ ನುಡಿದರು.

‘ನಮ್ಮದು ₹1.60 ಲಕ್ಷ ಮೌಲ್ಯದ ಒಂಬತ್ತು ಮೇಕೆಗಳನ್ನು ಕಳ್ಳತನವಾಗಿದೆ. ಯುಗಾದಿ ಸಮಯದಲ್ಲಿ ಅವುಗಳನ್ನು ಮಾರಾಟ ಮಾಡಬೇಕೆಂದು ಸಾಕಿಕೊಂಡಿದ್ದೆವು‘ ಎಂದು ಬೆತ್ತನಗೆರೆ ಗ್ರಾಮದ ದೊಡ್ಡಯ್ಯ ‘ಪ್ರಜಾವಾಣಿ’ಯೊಂದಿಗೆ ಸಂಕಟ ತೋಡಿಕೊಂಡರು.

ದೂರು ದಾಖಲು :  ದೊಡ್ಡಿಪಾಳ್ಯ ಗ್ರಾಮದ ರೈತ ಮುನಿಕುಮಾರ ಅವರಿಗೆ ಸೇರಿದ ₹60 ಸಾವಿರ ಮೌಲ್ಯದ 3 ಹೋತಗಳು, ಹುಸ್ಕೂರು ಗ್ರಾಮದ ರೈತ ಮಹೇಶ ಅವರಿಗೆ ಸೇರಿದ ₹1.10 ಲಕ್ಷ ಮೌಲ್ಯದ 11 ಮೇಕೆಗಳನ್ನು ಹೀಗೆ ರಾತ್ರಿ ವೇಳೆ ಕಳ್ಳತನ ಮಾಡಲಾಗಿದೆ. ಮೇಕೆ ಮತ್ತು ಕುರಿಗಳನ್ನು ಕಳೆದುಕೊಂಡ ಎಲ್ಲ ರೈತರು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಳ್ಳತನಕ್ಕೆ ಹೆದರಿ ಗೋಪಾಲಪುರ ಮತ್ತು ಹುಸ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿನ ರೈತರು ಕುರಿ ಮೇಕೆಗಳನ್ನು ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದಷ್ಟು ಬೇಗ ಪೊಲೀಸರು ಕಳ್ಳರನ್ನು ಬಂಧಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಾರಲ್ಲಿ ಬಂದು ಕುರಿ ಕಳ್ಳತನ ಮಾಡುತ್ತಿರುವ ದೃಶ್ಯ (ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು)
ಕಾರಲ್ಲಿ ಬಂದು ಕುರಿ ಕಳ್ಳತನ ಮಾಡುತ್ತಿರುವ ದೃಶ್ಯ (ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು)

ಪ್ರಕರಣಗಳಿಗೆ ಸಂಬಂಧಿಸಿದಂತೆ ಎಫ್ ಐಆರ್‌ ದಾಖಲಿಸಲಾಗಿದೆ. ಹಿಂದೆಯೂ ಇದೇ ರೀತಿಯ ಪ್ರಕರಣಗಳು ನಡೆದಿದ್ದು ಅಪರಾಧಿಗಳನ್ನು ಹಿಡಿದಿದ್ದೆವು. ಈಗ ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಅಪರಾಧಿಗಳನ್ನು ಹಿಡಿಯಲಾಗುವುದು.

–ಮುರಳೀಧರ್ ಎಂ.ಕೆ ಇನ್ಸ್‌ಪೆಕ್ಟರ್‌ ಮಾದನಾಯಕನಹಳ್ಳಿ ಪೊಲೀಸ್ ಠಾಣೆ

ಗೋಪಾಲಪುರ ಮತ್ತು ಹುಸ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ತಿಂಗಳುಗಳಿಂದ ಕುರಿ–ಮೇಕೆ ಕಳವು ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸ್ ಇಲಾಖೆ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

–ಚಂದ್ರಶೇಖರ್ ವಿ. ಅಧ್ಯಕ್ಷ ಗೋಪಾಲಪುರ ಗ್ರಾಮ ಪಂಚಾಯಿತಿ

ಎಲ್ಲಾ ಮಾಹಿತಿ ತಿಳಿದವರೇ ಇಂಥ ಕೃತ್ಯ ಎಸಗಲು ಸಾಧ್ಯ. ಕುರಿ ಮೇಕೆ ಕಳೆದುಕೊಂಡ ರೈತರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಬೇಗ ಕಳ್ಳರನ್ನು ಹಿಡಿಯಬೇಕು.

– ಬಿ. ರಮೇಶ್ ಅಧ್ಯಕ್ಷ ಹುಸ್ಕೂರು ಗ್ರಾಮ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT