ಸೋಮವಾರ, ಜುಲೈ 4, 2022
21 °C
ಕದ್ದ ಸಿಮ್‌ಕಾರ್ಡ್‌ನಿಂದ ಕರೆ ಮಾಡಿ ಸ್ನೇಹ: ಪೊಲೀಸರಿಗೇ ಸವಾಲು ಹಾಕಿದ್ದ ಆರೋಪಿ

ಮಹಿಳೆಯರ ಸಂಗ ಬೆಳೆಸಿ, ಕಿರುಕುಳ ನೀಡುತ್ತಿದ್ದ ’ಕಳ್ಳ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಹಿಳೆಯರ ಮೊಬೈಲ್‌ಗೆ ಕರೆ ಮಾಡಿ ಸ್ನೇಹ ಬೆಳೆಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿ ಮಂಜುನಾಥ್ ಅಲಿಯಾಸ್ ಚೂಲು ಮಂಜ (37) ಎಂಬಾತನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

‘ಮಧುಗಿರಿ ತಾಲ್ಲೂಕಿನ ಮೈದನಹಳ್ಳಿಯ ಮಂಜುನಾಥ್, ಮೊಬೈಲ್ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ. ಕದ್ದ ಮೊಬೈಲ್‌ಗಳ ಸಿಮ್‌ಕಾರ್ಡ್‌ನಲ್ಲಿರುತ್ತಿದ್ದ ಮಹಿಳೆಯರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸ್ನೇಹ ಬೆಳೆಸಿ ಕಿರುಕುಳ ನೀಡುತ್ತಿದ್ದ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.‌

‘ವಕೀಲರು, ಪೊಲೀಸ್ ಅಧಿಕಾರಿ, ಉದ್ಯಮಿಗಳು, ಖಾಸಗಿ ಕಂಪನಿ ಉದ್ಯೋಗಿಗಳು ಸೇರಿದಂತೆ 100ಕ್ಕೂ ಹೆಚ್ಚು ಮಹಿಳೆಯರಿಗೆ ಆರೋಪಿ ಕಿರುಕುಳ ನೀಡಿರುವುದು ತನಿಖೆಯಿಂದ ಗೊತ್ತಾಗಿದೆ. ಲೈಂಗಿಕ ಕಿರುಕುಳ (ಐಪಿಸಿ 354) ಆರೋಪ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.

ಬಾಲ್ಯದಿಂದಲೇ ಕಳ್ಳತನ: ‘ಹುಟ್ಟೂರಿನಲ್ಲಿ ಐದನೇ ತರಗತಿವರೆಗೆ ವ್ಯಾಸಂಗ ಮಾಡಿ ಬೆಂಗಳೂರಿಗೆ ಬಂದಿದ್ದ ಆರೋಪಿ, ಹಲವೆಡೆ ಸಣ್ಣ–‍ಪುಟ್ಟ ಕೆಲಸ ಮಾಡುತ್ತಿದ್ದ. ಅದರ ಜೊತೆಯಲ್ಲೇ, ಮೆಜೆಸ್ಟಿಕ್‌ನಲ್ಲಿ ಸುತ್ತಾಡಿ ಕಳ್ಳತನ ಮಾಡುತ್ತಿದ್ದ. ಆರಂಭದಲ್ಲಿ ಪರ್ಸ್‌ ಕದಿಯುತ್ತಿದ್ದ ಆರೋಪಿ, ಕೆಲ ವರ್ಷದಿಂದ ಬೆಲೆಬಾಳುವ ಮೊಬೈಲ್ ಕಳವು ಮಾಡಲಾರಂಭಿಸಿದ್ದ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ಕದ್ದ ಮೊಬೈಲ್‌ನಲ್ಲಿರುತ್ತಿದ್ದ ಸಿಮ್‌ಕಾರ್ಡ್‌ಗಳನ್ನು ಆರೋಪಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದ. ಮೊಬೈಲ್‌ಗಳನ್ನು ಮಾತ್ರ ಮಾರುತ್ತಿದ್ದ. ಕೆಲ ದಿನ ಬಿಟ್ಟು ಸಿಮ್‌ಕಾರ್ಡ್‌ಗಳನ್ನು ಬೇರೊಂದು ಮೊಬೈಲ್‌ಗೆ ಹಾಕಿ ಆನ್ ಮಾಡುತ್ತಿದ್ದ ಆರೋಪಿ, ಅದರಲ್ಲಿರುವ ಮಹಿಳೆಯರ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡುತ್ತಿದ್ದ. ಸ್ನೇಹಿತನಂತೆ ಮಾತನಾಡಿ ಪರಿಚಯಿಸಿಕೊಳ್ಳುತ್ತಿದ್ದ’ ಎಂದೂ ತಿಳಿಸಿದರು.

ಸಲುಗೆ ಬೆಳೆಸಿ, ಕಿರುಕುಳ: ‘ಆರೋಪಿ ಜೊತೆ ಮಾತನಾಡಲು ಹಿಂದೇಟು ಹಾಕುತ್ತಿದ್ದ ಕೆಲ ಮಹಿಳೆಯರು, ಆತನ ನಂಬರ್ ಬ್ಲಾಕ್ ಮಾಡುತ್ತಿದ್ದರು. ಬಹುಪಾಲು ಮಹಿಳೆಯರು, ಆತನ ಜೊತೆ ಮಾತುಕತೆ ಮುಂದುವರಿಸಿದ್ದರು. ಅಂಥವರ ಜೊತೆ ಆರೋಪಿ ಸಲುಗೆಯನ್ನೂ ಹೊಂದಿದ್ದ’ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.

‘ನಾನಾ ಆಮಿಷಗಳನ್ನು ಒಡ್ಡಿ ಕೆಲ ಮಹಿಳೆಯರನ್ನು ಆರೋಪಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಕೆಲವರಿಂದ ಹಣ ಪಡೆದು ವಂಚಿಸಿದ್ದಾನೆ. ಎಲ್ಲರೂ ಹೇಳಿಕೆ ನೀಡಿದ್ದಾರೆ’ ಎಂದೂ ಹೇಳಿದರು.

ಪೊಲೀಸರಿಗೆ ಸವಾಲು: ‘ಅಪರಾಧ ಹಿನ್ನೆಲೆಯುಳ್ಳ ಮಂಜುನಾಥ್ ವಿರುದ್ಧ ವಿದ್ಯಾರಣ್ಯಪುರ, ಹಲಸೂರು ಗೇಟ್, ತುಮಕೂರು ಸೇರಿದಂತೆ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಪೊಲೀಸರ ಕೈಗೆ ಸಿಗದೇ ಆರೋಪಿ ತಪ್ಪಿಸಿಕೊಂಡು ಓಡಾಡುತ್ತಿದ್ದ’ ಎಂದು ತಿಳಿಸಿದರು.

‘ತುಮಕೂರು ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದರು. ಅಪರಿಚಿತರ ಸಂಖ್ಯೆಯಿಂದ ಪೊಲೀಸರಿಗೆ ಕರೆ ಮಾಡಿದ್ದ ಆರೋಪಿ, ‘ತಾಕತ್‌ ಇದ್ದರೆ ನನ್ನನ್ನು ಹಿಡಿಯಿರಿ’ ಎಂದು ಸವಾಲು ಹಾಕಿದ್ದ. ಕಾಮಾಕ್ಷಿಪಾಳ್ಯ ಠಾಣೆಯಲ್ಲೂ ಆತನ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿತ್ತು. ಇದರ ತನಿಖೆ ಕೈಗೊಂಡಾಗ ಆರೋಪಿ ಸಿಕ್ಕಿಬಿದ್ದ’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು