ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ ಅಂತ್ಯದವರೆಗೂ ಕಾವೇರಿ ನೀರಿಗೆ ಸಮಸ್ಯೆ ಇಲ್ಲ: ಜಲಮಂಡಳಿ

ಕೊಳವೆಬಾವಿ ಮೇಲೆ ಅವಲಂಬಿತವಾದ ಹೊರವಲಯದ ಪ್ರದೇಶಗಳಲ್ಲಿ ಸಮಸ್ಯೆ ಹೆಚ್ಚು
Published 9 ಮಾರ್ಚ್ 2024, 19:30 IST
Last Updated 9 ಮಾರ್ಚ್ 2024, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಾವೇರಿ ನದಿಯಿಂದ ನಗರಕ್ಕೆ ಜುಲೈ ಅಂತ್ಯದವರೆಗೆ ಕುಡಿಯುವ ನೀರು ಸರಬರಾಜು ಮಾಡಬಹುದು. ಅಗತ್ಯಕ್ಕಿಂತ ಹೆಚ್ಚಿನ ಸಂಗ್ರಹವಿದೆ. ಆದರೆ ಹೊರವಲಯದಲ್ಲಿ ಕೊಳವೆಬಾವಿ ಬತ್ತಿರುವುದರಿಂದ ನೀರಿನ ಸಮಸ್ಯೆ ಇದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್‌ ಪ್ರಸಾತ್ ಮನೋಹರ್‌ ಹೇಳಿದರು.

‘ಕಾವೇರಿ ನೀರು ಪೂರೈಸಲಾಗುತ್ತಿರುವ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉಂಟಾಗಿಲ್ಲ. ಸುಮಾರು 20 ಎಂಎಲ್‌ಡಿ (ಪ್ರತಿನಿತ್ಯ ದಶಲಕ್ಷ ಲೀಟರ್‌) ಹೆಚ್ಚುವರಿಯಾಗಿ ಪಂಪ್‌ ಮಾಡಲಾಗುತ್ತಿದೆ. ಪ್ರತಿ ವ್ಯಕ್ತಿಗೆ ದಿನಕ್ಕೆ 150 ಲೀಟರ್‌ ನೀರು ಒದಗಿಸಲು ಯಾವುದೇ ಸಮಸ್ಯೆ ಇಲ್ಲ. ನಗರದ ಕೋರ್‌ ಹಾಗೂ ಸಿಎಂಸಿ–ಟಿಎಂಸಿ ಪ್ರದೇಶದಲ್ಲಿ ಹಿಂದಿನಂತೆಯೇ ನೀರು ಪೂರೈಕೆಯಾಗುತ್ತಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದರು.

‘ನಗರದ ಹೊರವಲಯದ ಪ್ರದೇಶಗಳಿಗೆ 650 ಎಂಎಲ್‌ಡಿ ನೀರಿನ ಅಗತ್ಯವಿದೆ. ಈ ಭಾಗದಲ್ಲಿ ಎಲ್ಲರೂ ಕೊಳವೆಬಾವಿಗಳ ಮೇಲೆಯೇ ಅವಲಂಬಿತರಾಗಿದ್ದಾರೆ. ಶೇ 30ರಷ್ಟು ಕೊಳವೆಬಾವಿಗಳು ಬತ್ತಿಹೋಗಿರುವುದರಿಂದ ನೀರಿನ ಸಮಸ್ಯೆ ಉಂಟಾಗಿದೆ. ಒಟ್ಟಾರೆ ಶೇ 10ರಿಂದ 15ರಷ್ಟು ಕೊರತೆ ಉಂಟಾಗಿದೆ. ಈ ಭಾಗದ ಜನರಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. 110 ಹಳ್ಳಿಗಳಿಗೆ ತಲಾ ಆರು ಸಾವಿರ ಲೀಟರ್‌ ಸಾಮರ್ಥ್ಯದ 79 ಟ್ಯಾಂಕರ್‌ಗಳ ಮೂಲಕ ದಿನಕ್ಕೆ ನಾಲ್ಕರಿಂದ ಐದು ಟ್ರಿಪ್‌ ನೀರು ಪೂರೈಸಲಾಗುತ್ತಿದೆ’ ಎಂದರು.

582 ಕಡೆ ಟ್ಯಾಂಕ್‍: ‘ಕೊಳೆಗೇರಿ ಪ್ರದೇಶ, ಜನನಿಬಿಡ ಪ್ರದೇಶ, ತಗ್ಗು ಮತ್ತು ಎತ್ತರದ ಪ್ರದೇಶಗಳಲ್ಲಿ ಒಂದು ಸಾವಿರದಿಂದ ಮೂರು ಸಾವಿರ ಲೀಟರ್ ಸಾಮರ್ಥ್ಯದ 582 ಸಿಂಟೆಕ್ಸ್ ಟ್ಯಾಂಕ್‍ಗಳನ್ನು ಮಂಡಳಿ ವತಿಯಿಂದ ಅಳವಡಿಸಲಾಗಿದೆ. ನಿತ್ಯ ಎರಡು ಬಾರಿ ಟ್ಯಾಂಕ್‍ಗಳನ್ನು ಭರ್ತಿ ಮಾಡಲಾಗುತ್ತದೆ. ಬೇಡಿಕೆ ಪರಿಶೀಲಿಸಿ ಹೆಚ್ಚು ಬಾರಿಯೂ ತುಂಬಿಸಲು ಕ್ರಮವಹಿಸಲಾಗಿದೆ. ಈ ಪ್ರದೇಶದಲ್ಲಿ ವಾಸವಾಗಿರುವ ಜನರು ಟ್ಯಾಂಕ್‍ಗಳ ಮೂಲಕ ಕುಡಿಯುವ ನೀರನ್ನು ಉಚಿತವಾಗಿ ಪಡೆಯುತ್ತಿದ್ದಾರೆ. ನೀರು ಪೂರೈಸುವಲ್ಲಿ ಸಮಸ್ಯೆಯಾದರೆ ನಮ್ಮ ನೋಡಲ್‌ ಅಧಿಕಾರಿಗಳು ಅಥವಾ ನಮ್ಮ ಕಂಟ್ರೋಲ್‌ ರೂಂಗೆ ಕರೆ ಮಾಡಿ ದೂರು ನೀಡಬಹುದು. ಕೂಡಲೇ ಕ್ರಮಕೈಗೊಳ್ಳಲಾಗುತ್ತದೆ’ ಎಂದು ರಾಮ್ ಪ್ರಸಾತ್ ಮನೋಹರ್ ಹೇಳಿದರು.

ನಗರದಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಯಲು ಕಾರ್ಯಾದೇಶ ನೀಡಲಾಗಿದೆ. ನೀರಿನ ಲಭ್ಯತೆ ಆಧರಿಸಿ, ಭೂವಿಜ್ಞಾನಿಗಳ ವರದಿಯಂತೆ ಕೊಳವೆಬಾವಿ ಕೊರೆಯಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ನಾಲ್ವರು ಭೂವಿಜ್ಞಾನಿಗಳನ್ನು ನಿಯೋಜಿಸಲಾಗಿದೆ ಎಂದರು.

ಅಪಾರ್ಟ್‌ಮೆಂಟ್‌ಗಳಲ್ಲಿ ಸಮಸ್ಯೆ!: ‘ನಗರದ ಹೊರವಲಯಗಳಾದ ಮಹದೇವಪುರ, ವೈಟ್‌ಫೀಲ್ಡ್‌, ಐಟಿ–ಬಿಟಿ ಕಂಪನಿಗಳು ಹೆಚ್ಚಿರುವ ಪ್ರದೇಶ ಸೇರಿದಂತೆ ಯಶವಂತಪುರ, ಬೆಂಗಳೂರು ದಕ್ಷಿಣ ಪ್ರದೇಶಗಳಲ್ಲಿ ಅಪಾರ್ಟ್‌ಮೆಂಟ್‌ಗಳು ಹೆಚ್ಚಿವೆ. ಈ ಅಪಾರ್ಟ್‌ಮೆಂಟ್‌ಗಳವರು ಕಾವೇರಿ ನೀರಿನ ಸಂಪರ್ಕ ಬಹುತೇಕ ಹೊಂದಿಲ್ಲ. ಇವರೆಲ್ಲ ಕೊಳವೆಬಾವಿಗಳ ಮೇಲೆ ಅವಲಂಬಿತವಾಗಿರುವುದರಿಂದ ನೀರಿನ ಸಮಸ್ಯೆ ಉಂಟಾಗಿದೆ. ಆದರೂ, ನಗರದಲ್ಲೇ ಕಾವೇರಿ ನೀರಿಲ್ಲ ಎಂದು ವದಂತಿ ಹಬ್ಬಿಸಲಾಗುತ್ತಿದೆ. ನಾಗರಿಕರು ಇದಕ್ಕೆ ಕಿವಿಗೊಡಬಾರದು. ಕುಡಿಯಲು ನೀರು ಸರಬರಾಜು ಆಗುತ್ತದೆ, ಆತಂಕ ಬೇಡ’ ಎಂದು ಭರವಸೆ ನೀಡಿದರು.

ಕಾವೇರಿ ಲೆಕ್ಕಾಚಾರ

1470 ಎಂಎಲ್‌ಡಿ: ಬೆಂಗಳೂರಿಗೆ ಪ್ರತಿನಿತ್ಯ ಸರಬರಾಜಾಗುತ್ತಿರುವ ನೀರು

1.54 ಟಿಎಂಸಿ ಅಡಿ: ಬೆಂಗಳೂರಿಗೆ ಒಂದು ತಿಂಗಳಿಗೆ ಬೇಕಿರುವ ನೀರು

8 ಟಿಎಂಸಿ ಅಡಿ: ಬೆಂಗಳೂರಿಗೆ ಜುಲೈ ಅಂತ್ಯದವರೆಗೆ ಬೇಕಿರುವ ನೀರು

17 ಟಿಎಂಸಿ ಅಡಿ: ಬೆಂಗಳೂರು ಸೇರಿದಂತೆ ಕೈಗಾರಿಕೆ ಹಾಗೂ ಇತರೆ ನಗರಗಳಿಗೆ ಜುಲೈ ಅಂತ್ಯದವರೆಗೆ ಬೇಕಿರುವ ನೀರು

34 ಟಿಎಂಸಿ ಅಡಿ: ಕಾವೇರಿ ನದಿಯಲ್ಲಿರುವ ನೀರು

2,100 ಎಂಎಲ್‌ಡಿ: 110 ಹಳ್ಳಿ ಸೇರಿದಂತೆ ಬೆಂಗಳೂರು ನಗರಕ್ಕೆ ಬೇಕಿರುವ ನೀರು

1,470 ಎಂಎಲ್‌ಡಿ: ನಗರಕ್ಕೆ ಪೂರೈಸಲಾಗುತ್ತಿರುವ ನೀರು

775 ಎಂಎಲ್‌ಡಿ: ಕಾವೇರಿ ಐದನೇ ಹಂತದಿಂದ ಮೇ 15ರ ವೇಳೆಗೆ ಲಭ್ಯವಾಗುವ ನೀರು

ಟ್ಯಾಂಕರ್‌ ನೋಂದಣಿಗೆ ಮಾರ್ಚ್ 15ರವರೆಗೆ ಅವಕಾಶ

‘ಬಿಬಿಎಂಪಿ ಪೋರ್ಟಲ್‌ನಲ್ಲಿ 1530 ನೀರಿನ ಟ್ಯಾಂಕರ್‌ಗಳ ಮಾಲೀಕರು ನೋಂದಣಿ ಮಾಡಿಕೊಂಡಿದ್ದು ಈ ಟ್ಯಾಂಕರ್‌ಗಳ ಸಾಮರ್ಥ್ಯ 1.14 ಕೋಟಿ ಲೀಟರ್‌ಗಳಾಗಿದ್ದು ಸರಿಸುಮಾರು 10 ಎಂಎಲ್‌ಡಿ ಆಗಲಿದೆ. 419 ಟ್ಯಾಂಕರ್‌ಗಳನ್ನು ಬಾಡಿಗೆಗೆ ಕೊಡಲು ಮಾಲೀಕರು ಒಪ್ಪಿದ್ದಾರೆ’ ಎಂದು ಜಲಮಂಡಳಿ ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದರು.

‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೂಚನೆಯಂತೆ ನೋಂದಣಿ ಮಾಡಿಕೊಳ್ಳುವ ಅವಧಿಯನ್ನು ಮಾರ್ಚ್‌ 15ರವರೆಗೆ ವಿಸ್ತರಿಸಲಾಗಿದೆ. ನಂತರವೂ ನೋಂದಣಿಯಾಗದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

‘ಮಾರ್ಚ್‌ 15ರ ನಂತರ ನಗರ ಜಿಲ್ಲಾಡಳಿತ ನಿಗದಿಪಡಿಸಿರುವ ದರದಂತೆಯೇ ಟ್ಯಾಂಕರ್‌ ನೀರು ಮಾರಾಟ ಮಾಡಬೇಕು. ನೋಂದಣಿಯಾಗಿರುವ ಟ್ಯಾಂಕರ್‌ಗಳ ಮೇಲೆ ಬಿಬಿಎಂಪಿ ಸ್ಟಿಕ್ಕರ್‌ ಇರುತ್ತದೆ. ಅವರು ಹೆಚ್ಚಿನ ಹಣ ಕೇಳಿದರೆ ನಾಗರಿಕರು ದೂರು ನೀಡಬಹುದು’ ಎಂದು ಹೇಳಿದರು.

ನೀರು ದುರ್ಬಳಕೆ: 15ರಿಂದ ದಂಡ ‘ಕಾವೇರಿ ನೀರನ್ನು ಕುಡಿಯುವ ಉದ್ದೇಶಕ್ಕೆ ಹೊರತಾಗಿ ದುರ್ಬಳಕೆ ಮಾಡಿದರೆ ಮಾರ್ಚ್‌ 15ರಿಂದ ದಂಡ ವಿಧಿಸಲಾಗುವುದು. ಮೀಟರ್‌ ರೀಡರ್‌ ಹಾಗೂ ಜಲಮಂಡಳಿ ಸಿಬ್ಬಂದಿ ನಿಗಾವಹಿಸಿ ಸ್ಥಳದಲ್ಲಿಯೇ ದಂಡ ವಿಧಿಸುವ ವ್ಯವಸ್ಥೆ ರೂಪಿಸಲಾಗಿದೆ’ ಎಂದು ರಾಮ್ ಪ್ರಸಾತ್‌ ಮನೋಹರ್‌ ಹೇಳಿದರು.

‘ಸರ್ಕಾರದ ವಿಪತ್ತು ನಿರ್ವಹಣೆ ನಿಧಿಯಿಂದ ಅನುದಾನ ನಿರೀಕ್ಷಿಸಲಾಗಿದೆ. ₹110 ಕೋಟಿ ಆದಾಯ ಸೇರಿದಂತೆ ಇತರೆ ಕೆಲವು ಮೂಲಗಳಿಂದ ವರಮಾನ ಬರುತ್ತಿದ್ದು ಜಲಮಂಡಳಿ ಆರ್ಥಿಕವಾಗಿ ಸದೃಢವಾಗಿದ್ದು ಯಾವುದೇ ಸಮಸ್ಯೆ ಇಲ್ಲ’ ಎಂದರು.

ಅಂತರ್ಜಲ ವೃದ್ಧಿಗೆ ಕ್ರಮ

‘ಭಾರತೀಯ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ತುರ್ತು ಹಾಗೂ ದೀರ್ಘಕಾಲದ ಕ್ರಮಗಳನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಬೆಳ್ಳಂದೂರು ವರ್ತೂರು ಕೆರೆಗಳು ಬರಿದಾಗಿರುವುದರಿಂದ ಆ ಪ್ರದೇಶಗಳಲ್ಲಿ ಅಂತರ್ಜಲ ಕಡಿಮೆಯಾಗಿದೆ. 1300 ಎಂಎಲ್‍ಡಿ ಸಂಸ್ಕರಿಸಿದ ಗುಣಮಟ್ಟದ ನೀರನ್ನು ಕೆರೆಗಳಿಗೆ ತುಂಬಿಸಲು ಉದ್ದೇಶಿಸಲಾಗಿದೆ. ಪ್ರಾರಂಭದಲ್ಲಿ ನಾಯಂಡಹಳ್ಳಿ ಕೆರೆ ಚಿಕ್ಕಬಾಣವಾರ ಕೆರೆ ವರ್ತೂರು ಕೆರೆ ಅಗರ ಕೆರೆ ಸೇರಿದಂತೆ ಆರು ಕೆರೆಗಳನ್ನು ತುಂಬಿಸಲಾಗುವುದು’ ಎಂದು ರಾಮ್‌ ಪ್ರಸಾತ್‌ ಮನೋಹರ್‌ ಹೇಳಿದರು.

‘ಕೆರೆಗಳ ಪಕ್ಕದಲ್ಲಿಯೇ ಫಿಲ್ಟರ್ ಬೋರ್‌ವೆಲ್‌ಗಳನ್ನು ಕೊರೆದು ಸಂಸ್ಕರಣೆ ಘಟಕ ಅಳವಡಿಸಿ ಸುಮಾರು 10ರಿಂದ 20 ಎಂಎಲ್‌ಡಿ ಕುಡಿಯುವ ನೀರನ್ನು ಒದಗಿಸುವ ಯೋಜನೆ ಇದೆ’ ಎಂದರು.

ಸಂಸ್ಕರಿಸಿದ ನೀರು ಮಾರಾಟ!

ಜಲಮಂಡಳಿ ವತಿಯಿಂದ ಸಂಸ್ಕರಿಸಲಾಗಿರುವ ಬಹುತೇಕ ಕುಡಿಯಲು ಯೋಗ್ಯವೇ ಆಗಿರುವ ನೀರನ್ನು ಕುಡಿಯಲು ಅಡುಗೆಗೆ ಹೊರತುಪಡಿಸಿದಂತೆ ಉಪಯೋಗಿಸಲು ನಾಗರಿಕರಿಗೆ ಮಾರಾಟ ಮಾಡಲಾಗುತ್ತದೆ. ಇದಕ್ಕಾಗಿ ವೆಬ್‌ ಅಪ್ಲಿಕೇಷನ್‌ ಅನ್ನು ಮುಂದಿನವಾರ ಆರಂಭಿಸಲಾಗುತ್ತದೆ ಎಂದು ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದರು. ಸಗಟು ನೀರು ಬಳಕೆದಾರರಾದ ವಿಮಾನ ನಿಲ್ದಾಣ ಎಚ್‌ಎಎಲ್‌ ರಕ್ಷಣಾ ಇಲಾಖೆ ಸೇರಿದಂತೆ ಕೈಗಾರಿಕೆಗಳಿಗೆ ಸಂಸ್ಕರಿಸಿದ ನೀರನ್ನು ಬಳಸುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.

‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಪ್ರಕಾರವೇ ನೀರನ್ನು ಸಂಸ್ಕರಿಸಲಾಗಿದ್ದು ಅದನ್ನು ಮರುಬಳಕೆ ಮಾಡಬಹುದಾಗಿದೆ. ಕೆಲವು ಪರೀಕ್ಷೆಗಳಲ್ಲಿ ಈ ನೀರು ಕುಡಿಯುವ ನೀರಿನ ಮಟ್ಟಕ್ಕಿಂತ ಉತ್ತಮ ಗುಣಮಟ್ಟ ಎಂಬುದು ಸಾಬೀತಾಗಿದೆ. ಒಂದು ಎಕರೆ ಕೆರೆಯನ್ನು ತುಂಬಿದರೆ ಒಂದು ದಶಲಕ್ಷ ಲೀಟರ್‌ನಷ್ಟು ಅಂತರ್ಜಲ ವೃದ್ಧಿಯಾಗುತ್ತದೆ. 186 ಕೆರೆಗಳನ್ನೂ ತುಂಬಿದ್ದರೆ ಅಂತರ್ಜಲ ವೃದ್ಧಿಯಾಗುತ್ತದೆ’ ಜಲಮಂಡಳಿ ತಾಂತ್ರಿಕ ಸಮಿತಿ ಸದಸ್ಯ ಪ್ರೊ.ವಿಶ್ವನಾಥ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT