ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗೆ ಕಳ್ಳರು, ಪುಂಡರ ಕಾಟ!

ಕಾಂಪೌಂಡ್ ಜಿಗಿದು ಬರ್ತಾರೆ * ಕಿಟಕಿ ಬಾಗಿಲು– ಕ್ಯಾಮೆರಾ ಕಳವು ಮಾಡ್ತಾರೆ * ಕೊಠಡಿಯಲ್ಲಿ ಮದ್ಯದ ಬಾಟಲಿ, ಸಿಗರೇಟು ತುಂಡು ಬಿದ್ದಿರ್ತಾವೆ
Last Updated 10 ನವೆಂಬರ್ 2018, 19:37 IST
ಅಕ್ಷರ ಗಾತ್ರ

ಬೆಂಗಳೂರು: ನೂರಾರು ಮಕ್ಕಳ ಭವಿಷ್ಯ ರೂಪಿಸುತ್ತಿರುವ ‘ಸರ್ಕಾರಿ ಮಾದರಿ ಶಾಲೆ’ ಇದು. ಹಗಲಿನಲ್ಲಿ ವಿದ್ಯಾರ್ಥಿಗಳ ಜ್ಞಾನಾರ್ಜನೆಯ ಸ್ಥಳವಾದರೆ, ರಾತ್ರಿ ಕಿಡಿಗೇಡಿಗಳ ಅಡ್ಡೆಯಾಗಿ ಮಾರ್ಪಡುತ್ತಿದೆ. ಕಳ್ಳರ ಹಾಗೂ ಪುಂಡರ ಕಾಟದಿಂದ ಬೇಸತ್ತಿರುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ.

ಬೆಂಗಳೂರು ಉತ್ತರ ವಲಯ–1ರ ವ್ಯಾಪ್ತಿಯ ಲಗ್ಗೆರೆಯ ‘ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ’ ದುಸ್ಥಿತಿ ಇದು.

ಮುನೇಶ್ವರ ಲೇಔಟ್‌ನಲ್ಲಿರುವ ಶಾಲೆಯ 1ರಿಂದ 8ನೇ ತರಗತಿವರೆಗೆ 491 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅವರೆಲ್ಲ ವಾರಕ್ಕೊಮ್ಮೆಯಾದರೂ ಪ್ರಾರ್ಥನೆ ವೇಳೆಯಲ್ಲಿ, ಮದ್ಯದ ಖಾಲಿ ಬಾಟಲಿ ಹಾಗೂ ಬೀಡಿ–ಸಿಗರೇಟು ತುಂಡುಗಳನ್ನು ಆಯ್ದು ಆವರಣ ಹಾಗೂ ಕೊಠಡಿ ಸ್ವಚ್ಛಗೊಳಿಸಬೇಕಾದ ದುಸ್ಥಿತಿ ಬಂದೊದಗಿದೆ.

ಶಾಲಾ ಅವಧಿ ಮುಗಿದು ರಾತ್ರಿಯಾಗುತ್ತಿದ್ದಂತೆ ಆವರಣ ಹಾಗೂ ಕೆಲವು ಕೊಠಡಿಗಳಿಗೆ ಅಕ್ರಮವಾಗಿ ನುಗ್ಗುವ ಕಿಡಿಗೇಡಿಗಳು, ಗುಂಪು ಗುಂಪಾಗಿ ಸೇರಿ ಮದ್ಯಪಾನ ಹಾಗೂ ಧೂಮಪಾನ ಮಾಡುತ್ತಿದ್ದಾರೆ. ಮದ್ಯದ ಖಾಲಿ ಬಾಟಲಿ ಹಾಗೂ ಬೀಡಿ–ಸಿಗರೇಟು ತುಂಡುಗಳನ್ನು ಕೊಠಡಿ ಹಾಗೂ ಆವರಣದಲ್ಲಿ ಬಿಸಾಕುತ್ತಿದ್ದಾರೆ. ಕೆಲವರಂತೂ ಪಾನಮತ್ತರಾಗಿ ಕೊಠಡಿಯಲ್ಲಿ ಮಲಗಿಕೊಂಡು ನಸುಕಿನಲ್ಲಿ ಎದ್ದು ಹೋಗುತ್ತಿದ್ದಾರೆ. ರಾತ್ರಿ ವೇಳೆ ಶಾಲೆಗೆ ಭದ್ರತೆ ಇಲ್ಲದಿರುವುದು ಕಿಡಿಗೇಡಿಗಳಿಗೆ ಮತ್ತಷ್ಟು ಅನುಕೂಲವಾಗಿದೆ.

‘ಕಳ್ಳರ ಹಾಗೂ ಪುಂಡರ ಕಾಟ ಹೆಚ್ಚಾಗಿದೆ. ಅವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಿ’ ಎಂದು ಶಾಲೆಯ ಮುಖ್ಯ ಶಿಕ್ಷಕಿ ಟಿ.ಇ. ಶಂಕರಮ್ಮ ನಂದಿನಿ ಲೇಔಟ್‌ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಕಾಂಪೌಂಡ್ ಜಿಗಿದು ಬರ್ತಾರೆ: ಶಾಲೆ ಸುತ್ತಲೂ ಕಾಂಪೌಂಡ್ ನಿರ್ಮಿಸಲಾಗಿದ್ದು, ಮುಖ್ಯದ್ವಾರಕ್ಕೆಕಬ್ಬಿಣದ ಬಾಗಿಲು ಅಳವಡಿಸಲಾಗಿದೆ. ಶಾಲೆ ಅಕ್ಕ–ಪಕ್ಕ ಮನೆಗಳು ಹಾಗೂ ಖುಲ್ಲಾ ಜಾಗಗಳಿವೆ. ಅದೇ ಭಾಗದ ಕಾಂಪೌಂಡ್ ಜಿಗಿದು, ಕಿಡಿಗೇಡಿಗಳು ಶಾಲೆಯೊಳಗೆ ನುಗ್ಗುತ್ತಿದ್ದಾರೆ.

ಕಳ್ಳರ ಹಾಗೂ ಪುಂಡರ ಕಾಟ ವಿಪರೀತವಾಗುತ್ತಿದ್ದಂತೆಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ರಮೇಶ್, ಮಲ್ಲೇಶ್ವರ ಉಪವಿಭಾಗದ ಎಸಿಪಿ ಧನಂಜಯ್ ಅವರಿಗೆ ಪತ್ರ ಬರೆದಿದ್ದಾರೆ.

‘ಶಾಲೆ ಆವರಣದಲ್ಲಿ ಚಾಪೆ, ಹೊದಿಕೆ, ತಿಂಡಿ–ಪೊಟ್ಟಣ ಹಾಗೂ ಮದ್ಯದ ಬಾಟಲಿಗಳು ನಿತ್ಯವೂ ಕಾಣುತ್ತಿವೆ. ಸಂಜೆ ಶಾಲೆ ಮುಗಿಸಿ ಹೋಗುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಮರುದಿನ ಶಾಲೆಗೆ ಬಂದಾಗ ಅವುಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ಬಾಲಕರ ಜೊತೆಯಲ್ಲಿ ಹೆಣ್ಣು ಮಕ್ಕಳು ಸಹ ಶಾಲೆಯಲ್ಲಿ ಓದುತ್ತಿದ್ದಾರೆ. ಕಿಡಿಗೇಡಿಗಳ ಕೃತ್ಯಕ್ಕೆ ಕಡಿವಾಣ ಹಾಕದಿದ್ದರೆ ಸರ್ಕಾರಿ ಶಾಲೆಗೆ ಕೆಟ್ಟ ಹೆಸರು ಬರುತ್ತದೆ. ಶಾಲೆ ಆವರಣದಲ್ಲಿ ಕೊಠಡಿಯೊಂದು ಇದ್ದು, ಅಲ್ಲಿಯೇ ಪೊಲೀಸ್ ಚೌಕಿ ನಿರ್ಮಿಸಿ ಶಾಲೆಗೆ ರಕ್ಷಣೆ ಒದಗಿಸಬೇಕು’ ಎಂದು ರಮೇಶ್ ಕೋರಿದ್ದಾರೆ.

ಸಿ.ಸಿ.ಟಿ.ವಿ ಕ್ಯಾಮೆರಾ ಕಳವು: ‘ಅ. 31ರಿಂದ ನ. 2ರವರೆಗೆ ಶಾಲೆಗೆ ರಜೆ ನೀಡಲಾಗಿತ್ತು. ಅದೇ ವೇಳೆಯಲ್ಲಿ ಶಾಲೆಯೊಳಗೆ ನುಗ್ಗಿದ್ದ ಕಿಡಿಗೇಡಿಗಳು, 3 ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ 7 ಕಿಟಕಿಯ ಕಬ್ಬಿಣದ ಬಾಗಿಲುಗಳನ್ನು ಕದ್ದೊಯ್ದಿದ್ದಾರೆ’ ಎಂದು ಮುಖ್ಯ ಶಿಕ್ಷಕಿ ತಿಳಿಸಿದ್ದಾರೆ.

‘ಶಾಲಾ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಆವರಣ ಹಾಗೂ ಕೆಲವು ಕೊಠಡಿಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಆವರಣದಲ್ಲಿ ಶಿಥಿಲಗೊಂಡಿರುವ ಕಟ್ಟಡವಿದ್ದು, ಅದರ ತೆರವಿಗೆ ಕ್ರಮ ಕೈಗೊಂಡಿದ್ದೇವೆ. ಅದೇ ಕಟ್ಟಡದ ಕಿಟಕಿಯ ಕಬ್ಬಿಣದ ಬಾಗಿಲುಗಳು ಕಳುವಾಗಿವೆ’ ಎಂದು ಹೇಳಿದ್ದಾರೆ.

ಮಾರಕಾಸ್ತ್ರ ಅಡಗಿಸಿಟ್ಟಿದ್ದರು: ‘ಕೆಲವು ತಿಂಗಳ ಹಿಂದೆ, ಶಾಲೆ ಕೊಠಡಿಯೊಂದರಲ್ಲಿ ಯಾರೋ ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಅಡಗಿಸಿಟ್ಟಿದ್ದರು. ಅವುಗಳನ್ನು ನೋಡಿದ್ದ ಶಿಕ್ಷಕರು, ನಂದಿನಿ ಲೇಔಟ್ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು, ಮಾರಕಾಸ್ತ್ರಗಳನ್ನು ಜಪ್ತಿ ಮಾಡಿಕೊಂಡು ಹೋಗಿದ್ದರು’ ಎಂದು ಬಿಇಒ ರಮೇಶ್ ಹೇಳಿದ್ದಾರೆ.

**

ಬಿಬಿಎಂಪಿ ಕಚೇರಿ ಸ್ಥಳಾಂತರ

ಶಾಲೆ ಆವರಣದಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡು ಒಂದು ಅಂತಸ್ತಿನ ಕಟ್ಟಡ ನಿರ್ಮಿಸಲಾಗಿದೆ. ಅದೇ ಕಟ್ಟಡದಲ್ಲಿ ಈ ಹಿಂದೆ ಬಿಬಿಎಂಪಿ ಕಚೇರಿ ಆರಂಭಿಸಲಾಗಿತ್ತು. ಆದರೆ, ಕಳ್ಳರ ಹಾಗೂ ಪುಂಡರ ಕಾಟದಿಂದಾಗಿ ಆ ಕಚೇರಿಯನ್ನೇ ಈಗ ಬೇರೆಡೆ ಸ್ಥಳಾಂತರಿಸಲಾಗಿದೆ.

‘ಕಟ್ಟಡ ಪ್ರವೇಶ ಬಾಗಿಲನ್ನು ಕಬ್ಬಿಣದ ರಾಡ್‌ಗಳಿಂದ ನಿರ್ಮಿಸಲಾಗಿದ್ದು, ಅದಕ್ಕೆ ಬೀಗ ಹಾಕಲಾಗುತ್ತಿತ್ತು. ಅದೇ ಬೀಗ ಒಡೆದ ಕಿಡಿಗೇಡಿಗಳು, ಒಳಗೆ ಹೋಗಿ ಮದ್ಯಪಾನ ಮಾಡಿ ಹೋಗುತ್ತಿದ್ದರು. ಮರುದಿನ ಕಚೇರಿಗೆ ಬರುವ ಬಿಬಿಎಂಪಿ ಸಿಬ್ಬಂದಿ, ಕೊಠಡಿ ಸ್ವಚ್ಛಗೊಳಿಸುವುದರಲ್ಲಿ ಸಮಯ ಹೋಗುತ್ತಿತ್ತು. ಹೊಸ ಬೀಗ ಸಹ ಹಾಕಬೇಕಿತ್ತು’ ಎಂದು ಸ್ಥಳೀಯರು ಹೇಳುತ್ತಾರೆ.

‘ಪದೇ ಪದೇ ಬೀಗ ಬದಲಾವಣೆ ಹಾಗೂ ಕೊಠಡಿಯಲ್ಲಿ ಆಗುತ್ತಿರುವ ಗಲೀಜಿನಿಂದಾಗಿ ಬೇಸತ್ತ ಸಿಬ್ಬಂದಿ, ಕಚೇರಿ ಸ್ಥಳಾಂತರ ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಹೇಳಿದ್ದರು. ಅದರಂತೆ ಈಗ ಕಚೇರಿ ಸ್ಥಳಾಂತರ ಮಾಡಬೇಕಿದೆ. ಶಾಲೆಗೆ ಅಂಥ ಸ್ಥಿತಿ ಬರುವ ಮುನ್ನವೇ ಪೊಲೀಸರು, ಕಿಡಿಗೇಡಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

**

ಶಾಲೆ ಆವರಣದಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿರುವವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ನಂದಿನಿ ಲೇಔಟ್ ಠಾಣೆ ಇನ್‌ಸ್ಪೆಕ್ಟರ್‌ ಅವರಿಗೆ ಸೂಚಿಸುತ್ತೇನೆ.

-ಧನಂಜಯ್, ಮಲ್ಲೇಶ್ವರ ಉಪವಿಭಾಗದ ಎಸಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT