ಮಂಗಳವಾರ, ಸೆಪ್ಟೆಂಬರ್ 22, 2020
22 °C
‘ಐಎಎಸ್‌ ಆ್ಯಲಿ’ ಆ್ಯಪ್

ಯುಪಿಎಸ್‌ಸಿ ಪರೀಕ್ಷೆಗೆ ಆಡುತ್ತಾ ಅಣಿಯಾಗಿ; ಆ್ಯಪ್ ಸಿದ್ಧಪಡಿಸಿದ ಕನ್ನಡಿಗ

ಪ್ರವೀಣ್ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ನಾಗರಿಕ ಸೇವಾ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರಿಗಾಗಿ ಹಾಸನದ ಎಚ್‌.ಪಿ.ಮೋನಿಶ್‌ ಅವರು ‘ಐಎಎಸ್‌ ಆ್ಯಲಿ’ ಎಂಬ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಿದ್ದಾರೆ. ವರ್ಷಾನುಗಟ್ಟಲೆ ಪೂರ್ವಸಿದ್ಧತೆ ನಡೆಸುವ ಅಭ್ಯರ್ಥಿಗಳಿಗೆ ಎಲ್ಲೂ ಏಕತಾನತೆ ಕಾಡದೇ ಆಡುತ್ತಾ ಕಲಿಯಲು ನೆರವಾಗುವುದು ಈ ಆ್ಯಪ್‌ನ ವಿಶೇಷತೆ.

ಯುಪಿಎಸ್‌ಸಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಇತರ ಅಭ್ಯರ್ಥಿಗಳ ಜೊತೆ ಸಂವಾದ ನಡೆಸಲು ಈ ಆ್ಯಪ್‌ ಅವಕಾಶ ಕಲ್ಪಿಸುತ್ತದೆ. ಕಲಿಕಾ ಆಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಹುರುಪಿನಿಂದ ಜ್ಞಾನದ ಮಟ್ಟ ಸುಧಾರಿಸಿಕೊಳ್ಳಲೂ ಇದು ಸಹಕಾರಿ.

‘ಕಲಿಯಬೇಕಾದ ಪಠ್ಯಗಳನ್ನು ಕತೆಗಳ ರೂಪದಲ್ಲಿ ಹಾಗೂ ಉದಾಹರಣೆ ಸಹಿತ ನಿರೂಪಿಸಿದ್ದೇವೆ. ಇದರ ಮೂಲಕ ಕಲಿಕೆ ಆಟದಂತಿರುತ್ತದೆ. ತಯಾರಿ ನಡೆಸುತ್ತಿರುವ ಇತರರ ಜೊತೆ ಸ್ಪರ್ಧೆಯಲ್ಲಿ ಭಾಗವಹಿಸುತ್ತಾ, ಕಲಿಕಾ ಮಟ್ಟ ತುಲನೆ ಮಾಡುತ್ತ ಅಧ್ಯಯನದಲ್ಲಿ ತೊಡಗಲು ಇದು ಪ್ರಯೋಜನಕಾರಿ’ ಎಂದು ಮೋನಿಶ್‌ ‘ಪ್ರಜಾವಾಣಿ’ಗೆ ವಿವರಿಸಿದರು.

‘ಈ ಆ್ಯಪ್‌ನಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗೆ ಪ್ರತ್ಯೇಕ ಪ್ರೊಫೈಲ್‌ ಇರುತ್ತದೆ. ಯಾವೆಲ್ಲ ವಿಚಾರಗಳನ್ನು ಕಲಿತೆ, ಎಷ್ಟು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದೆ, ಎಲ್ಲಿ ಎಡವಿದೆ, ಉತ್ತರಿಸಲು ಎಷ್ಟು ಸಮಯ ತೆಗೆದುಕೊಂಡೆ, ಸುಧಾರಣೆಯಾಗಬೇಕಾದುದೆಲ್ಲಿ ಎಂಬುದನ್ನು ಅಭ್ಯರ್ಥಿಯೇ ಸ್ವಯಂ ವಿಶ್ಲೇಷಣೆ ನಡೆಸಲು ಇದು ನೆರವಾಗುತ್ತದೆ. ನಾವು ಪ್ರಚಲಿತ ವಿದ್ಯಮಾನಗಳನ್ನು ಈ ಆ್ಯಪ್‌ಗೆ ಸೇರ್ಪಡೆಗೊಳಿಸುತ್ತಾ ಸಾಗುತ್ತೇವೆ. ಪಠ್ಯ ಸಾಮಾಗ್ರಿಗಳನ್ನೂ ಕಾಲಕಾಲಕ್ಕೆ ಮಾರ್ಪಾಡು ಮಾಡುತ್ತೇವೆ’ ಎಂದರು.

‘ಗೂಗಲ್ ಪ್ಲೇಸ್ಟೋರ್‌ನಲ್ಲಿ ಈ ಆ್ಯಪನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಆ್ಯಂಡ್ರಾಯ್ಡ್‌ ಮೊಬೈಲ್‌ನಲ್ಲಿ ಬಳಸಬಹುದು. ಆ್ಯಪಲ್‌ ಮೊಬೈಲ್‌ನಲ್ಲಿ ಬಳಸುವ ಆವೃತ್ತಿ ಶೀಘ್ರವೇ ಬಿಡುಗಡೆಯಾಗಲಿದೆ. ಐಎಎಸ್‌ ತರಬೇತಿ ನೀಡುವ ಸಂಸ್ಥೆಗಳು ಅಭ್ಯರ್ಥಿಗಳಿಗೆ ಲಕ್ಷಗಟ್ಟಲೆ ಶುಲ್ಕ ವಿಧಿಸುತ್ತವೆ. ಈ ಆ್ಯಪನ್ನು 21 ದಿನ ಉಚಿತವಾಗಿ ಇದನ್ನು ಬಳಸಬಹುದು. ನಂತರ ದಿನಕ್ಕೆ ಒಂದು ರೂಪಾಯಿಯಂತೆ ವರ್ಷಕ್ಕೆ ₹ 365 ಶುಲ್ಕ ವಿಧಿಸುತ್ತೇವೆ. ಈ ವರ್ಷ ಬಿಡುಗಡೆಯಾದ ಈ ಆ್ಯಪನ್ನು ಈಗಾಗಲೇ 11ಸಾವಿರ ಮಂದಿ ಬಳಸುತ್ತಿದ್ದಾರೆ. ಕೋವಿಡ್‌ ಕಾಣಿಸಿಕೊಂಡ ಬಳಿಕ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ’ ಎಂದು ತಿಳಿಸಿದರು.

‘ಐಎಎಸ್‌ ಪರೀಕ್ಷೆಯಲ್ಲಿ ಸಂದರ್ಶನದ ಹಂತದವರೆಗೆ ತಲುಪಿದ್ದೆ. ಆ ಅನುಭವದಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಆ್ಯಪ್ ರೂಪಿಸುವ ಸಾಹಸಕ್ಕೆ ಕೈಹಾಕಿದೆ. ಪತ್ನಿ ಆರ್‌.ಶ್ರುತಿ ಆ್ಯಪ್‌ ವಿನ್ಯಾಸ ರೂಪಿಸಲು ನೆರವಾದರು. ಪಠ್ಯ ಸಿದ್ಧಪಡಿಸಲು ಪ್ರತ್ಯೇಕ ತಂಡವಿದೆ. ಸದ್ಯ ಪಠ್ಯಗಳು ಇಂಗ್ಲಿಷ್‌ನಲ್ಲಿವೆ. ಕನ್ನಡದಲ್ಲೂ ಪಠ್ಯ ಸಿದ್ಧಪಡಿಸಲಾಗುತ್ತದೆ’ ಎಂದರು.

**
ಐಎಎಸ್‌ ಆ್ಯಲಿ ಆಪ್‌ ಅನ್ನು 21 ದಿನ ಉಚಿತವಾಗಿ ಬಳಸಿದ ಬಳಿಕ ಇದು ಪ್ರಯೋಜನಕಾರಿ ಹೌದೋ ಅಲ್ಲವೋ ಎಂಬುದು ಅಭ್ಯರ್ಥಿಗಳಿಗೇ ಮನದಟ್ಟಾಗುತ್ತದೆ. 21 ದಿನ ಬಳಸಿದ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ವರ್ಷಕ್ಕೆ ₹ 365 ರೂ ನೀಡಿ ಈ ಆ್ಯಪ್‌ ಬಳಕೆ ಮುಂದುವರಿಸುತ್ತಿದ್ದಾರೆ.
-ಪಿ.ಎಚ್‌.ಮೋನಿಶ್‌, ಆ್ಯಪ್‌ ಅಭಿವೃದ್ಧಿಪಡಿಸಿದವರು 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು