ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ವೈರಾಣು ನಾಶಪಡಿಸಬಲ್ಲುದು ನ್ಯಾನೊ ನಾರಿನ ಈ ಬಟ್ಟೆ

ಐಐಎಸ್ಸಿ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ ವಿನೂತನ ವಸ್ತ್ರ - ಪಿಪಿಇ ತಯಾರಿಸಲು ಹೊಸ ಅಸ್ತ್ರ
Last Updated 13 ಮೇ 2020, 4:12 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಕೋವಿಡ್‌–19 ಕಾಯಿಲೆ ಹಬ್ಬುವುದನ್ನು ನಿಯಂತ್ರಿಸಲು ಹೆಣಗಾಡುತ್ತಿರುವ ಆರೋಗ್ಯ ಕ್ಷೇತ್ರದ ಸಿಬ್ಬಂದಿಯ ಸುರಕ್ಷತೆಗೆ ನೆರವಾಗಲು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ವಿಜ್ಞಾನಿಗಳ ತಂಡ ನ್ಯಾನೊ ನಾರುಗಳನ್ನು ಬಳಸಿ ವೈರಾಣುನಾಶಕ ಬಟ್ಟೆಯನ್ನು ಅಭಿವೃದ್ಧಿಪಡಿಸಿದೆ. ಮೂರು ಪದರಗಳ ಈ ಬಟ್ಟೆ ವೈರಾಣು ಅಥವಾ ಬ್ಯಾಕ್ಟೀರಿಯಾ ದೇಹ ಪ್ರವೇಶಿಸದಂತೆ ಪರಿಣಾಮಕಾರಿಯಾಗಿ ತಡೆಯಬಲ್ಲುದು.

ಪ್ರಸ್ತುತ ಆರೋಗ್ಯ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಬಳಸುತ್ತಿರುವ ಮುಖಗವಸು, ಕೈಗವಸು, ಸರ್ಜಿಕಲ್‌ ಅಥವಾ ಪ್ರಯೋಗಾಲಯಗಳಲ್ಲಿ ಬಳಸುವ ನಿಲುವಂಗಿಗಳು ಮುಂತಾದ ವೈಯಕ್ತಿಕ ಸುರಕ್ಷತಾ ಸಾಧನಗಳು ವೈರಾಣು ಅಥವಾ ಬ್ಯಾಕ್ಟೀರಿಯಾ ದೇಹವನ್ನು ಪ್ರವೇಶಿಸದಂತೆ ಭೌತಿಕವಾಗಿ ತಡೆಯಬಲ್ಲವು. ಆದರೆ, ಇವುಗಳನ್ನು ಧರಿಸಿದಾಗ, ಕಳಚುವಾಗ ಹಾಗೂ ವಿಲೇ ಮಾಡುವಾಗ ವೈರಾಣುವಿನ ಸಂಪರ್ಕಕ್ಕೆ ಬರುವ ಅಪಾಯ ಇದ್ದೇ ಇದೆ. ಕೋವಿಡ್‌ 19 ರೋಗಿಗಳಿಗೆ ಚಿಕಿತ್ಸೆ ನೀಡುವವರಿಗೆ ಗರಿಷ್ಠ ಮಟ್ಟದ ರಕ್ಷಣೆ ಸಿಗಬೇಕಾದರೆ ಪಿಪಿಇ ನಿರ್ಮಿಸಲು ಬಳಸುವ ವಸ್ತು ವೈರಾಣು ನಿರೋಧಕ ಗುಣ ಹೊಂದಿರಬೇಕು.

ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿ‌ರುವ ಮುಖಗವಸುಗಳು ದುಬಾರಿಯಾಗಿವೆ. ಅಗ್ಗದ ಮಾಸ್ಕ್‌ಗಳು ಲಭ್ಯವಿದ್ದರೂ ಅವು ವೈರಾಣುಗಳನ್ನು ತಡೆಯುವಲ್ಲಿ ಅಷ್ಟು ಪರಿಣಾಮಕಾರಿಯಲ್ಲ. ಜಗತ್ತಿನಾದ್ಯಂತ ಪಿಪಿಇಗಳಿಗೆ ಈಗ ಭಾರಿ ಬೇಡಿಕೆ ಸೃಷ್ಟಿಯಾಗಿದ್ದರೂ ಉತ್ತಮ ಗುಣಮಟ್ಟದ ಪಿಪಿಇಗಳ ಪೂರೈಕೆಯೂ ಸೀಮಿತವಾಗಿದೆ. ಹಾಗಾಗಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರನ್ನು ಹಾಗೂ ಕೋವಿಡ್‌ 19 ಸೋಂಕಿಗೆ ಒಳಗಾಗುವ ಅಪಾಯವನ್ನು ಹೆಚ್ಚು ಹೊಂದಿರುವ ಜನರನ್ನು ರಕ್ಷಿಸಲು ವೈರಾಣು ಅಥವಾ ಬ್ಯಾಕ್ಟೀರಿಯಾ ನಿರೋಧಕ ಗುಣಗಳಿರುವ ಹಾಗೂ ಅಗ್ಗದ ಬಹೂಪಯೋಗಿ ಪರಿಕರಗಳ ಅಗತ್ಯವಿದೆ.

ಐಐಎಸ್ಸಿಯ ವಸ್ತುವಿಜ್ಞಾನ ವಿಭಾಗದ ವಿಜ್ಞಾನಿಗಳಾದ ಸೂರ್ಯಸಾರಥಿ ಬೋಸ್‌ ಹಾಗೂ ಕೌಶಿಕ್‌ ಚಟರ್ಜಿ ನೇತೃತ್ವದ ತಂಡ ಮೂರು ಪದರಗಳ ವಿನೂತನ ಬಟ್ಟೆಯನ್ನು ರೂಪಿಸಿದೆ. ನ್ಯಾನೊ ಮೀಟರ್‌ ವ್ಯಾಸದ ನಾರುಗಳನ್ನು ಬಳಸಿ ತಯಾರಿಸಿದ ಹಾಗೂ ನ್ಯಾನೊಮೀಟರ್‌ ಗಾತ್ರದ ರಂಧ್ರಗಳಿಂದ ಕೂಡಿರುವ ಬಟ್ಟೆ ಕೈಗಾರಿಕೆಗಳಲ್ಲಿ ಭಾರಿ ಪ್ರಮಾಣದಲ್ಲಿ ಉತ್ಪಾದನೆ ಮಾಡುವುದಕ್ಕೂ ಪೂರಕವಾಗಿದೆ. ಮಿತವ್ಯಯಿಯೂ ಆಗಿದೆ.

ಈ ಬಟ್ಟೆಯನ್ನು ಮಾರ್ಪಡಿತ ಪಾಲಿಯೆಸ್ಟರ್‌ಗಳಿಂದ ತಯಾರಿಸಲಾಗಿದೆ. ಇದರ ನಡುವೆ ನ್ಯಾನೊ ನಾರುಗಳ ಪಾಲಿಮರ್‌ಗಳಿಂದ ರೂಪಿಸಿದ ಪದರವನ್ನು ಅಡಕಗೊಳಿಸಲಾಗಿದೆ. ಹಾಗಾಗಿ ಮೊದಲ ಪದರವು ನೀರಿನಂಶವನ್ನು ದೂರತಳ್ಳುವ ಗುಣವನ್ನು ಹೊಂದಿದೆ. ಈ ಗುಣದಿಂದಾಗಿಯೇ ಮೊದಲ ಪದರವು ವೈರಾಣುಗಳಿರುವ ಯಾವುದೇ ದ್ರವದ ತುಂತುರುಗಳನ್ನು ಹತ್ತಿರ ಬರದಂತೆ ತಡೆಯುತ್ತದೆ.

ಮಧ್ಯದ ಪದರದಲ್ಲೂ ವೈರಾಣು ನಿರೋಧಕ ಅಂಶಗಳಿರುವ ನ್ಯಾನೊ ನಾರುಗಳ ಲೇಪನವಿರುತ್ತದೆ. ವೈರಾಣು ಮತ್ತಿತರ ಸೂಕ್ಷ್ಮಾಣುಜೀವಿಗಳು ಮೊದಲ ಪದರವನ್ನು ದಾಟಿ ಹೋದರೂ ಈ ಮಧ್ಯದ ಪದರವು ಅವುಗಳನ್ನು ನಾಶಪಡಿಸುತ್ತದೆ. ಇಂತಹ ನ್ಯಾನೊ ಪದರಗಳ ಸಂಪರ್ಕಕ್ಕೆ ಬರುವ ವೈರಾಣು ಹಾಗೂ ಬ್ಯಾಕ್ಟೀರಿಯಾಗಳು ನಾಶಗೊಳ್ಳುತ್ತವೆ ಎಂಬುದು ಪ್ರಯೋಗಾಲಯಗಳಲ್ಲಿ ನಡೆಸಿರುವ ಪ್ರಾಥಮಿಕ ಹಂತದ ಪರೀಕ್ಷೆಗಳಲ್ಲಿ ದೃಢಪಟ್ಟಿದೆ. ಹತ್ತಿಯಿಂದ ಮಾಡಿರುವ ಅತ್ಯಂತ ಒಳಗಿನ ಪದರವು ಈ ಬಟ್ಟೆಯನ್ನು ಧರಿಸುವವರಿಗೆ ಆರಾಮದಾಯಕ ಅನುಭವ ನೀಡುತ್ತದೆ.

ನ್ಯಾನೊ ನಾರುಗಳ ಪದರವನ್ನು ಕೈಗವಸು ಹಾಗೂ ನಿಲುವಂಗಿಗಳಂತಹ ಇತರ ಪಿಪಿಇ ಪರಿಕರಗಳ ಮೇಲೂ ಅಳವಡಿಸಬಹುದು. ಇದು ವೈರಾಣುಗಳನ್ನು ತಡೆಯುವಲ್ಲಿ ತುಂಬಾ ಪರಿಣಾಮಕಾರಿ ಎಂಬುದು ವಿಜ್ಞಾನಿಗಳ ಅಂಬೋಣ.

ವೈರಾಣು ನಾಶಕ ಗುಣವಿರುವ ಮೂರು ಪದರಗಳ ಬಟ್ಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT