ಗುರುವಾರ , ಜನವರಿ 30, 2020
18 °C

‘ಒಕ್ಕೂಟ ವ್ಯವಸ್ಥೆಗೆ ಧಕ್ಕೆ: ಆತಂಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ದೇಶದಲ್ಲಿದ್ದ 554 ರಾಜ್ಯಗಳನ್ನು ಸರ್ದಾರ್ ವಲ್ಲಭಭಾಯಿ ಪಟೇಲರು ಶ್ರಮ ವಹಿಸಿ ಒಕ್ಕೂಟ ವ್ಯವಸ್ಥೆ ವ್ಯಾಪ್ತಿಗೆ ತಂದರು. ಮರಳಿ ಹಿಂದಿನ ಸ್ಥಿತಿಗೆ ಕೊಂಡೊಯ್ಯುವ ಪ್ರಯತ್ನವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಡುತ್ತಿದ್ದಾರೆ’ ಎಂದು ಶಾಸಕ ಕೆ.ಆರ್. ರಮೇಶ್‌ಕುಮಾರ್ ಅಭಿಪ್ರಾಯಪಟ್ಟರು.

‘ಬಿ.ವಿ.ಕಕ್ಕಿಲ್ಲಾಯ–ನೂರರ ನೆನಪು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಗೆ ತರುವ ಅನಿವಾರ್ಯತೆ ಏನಿತ್ತು. ತಲಾಖ್ ನಿಷೇಧಕ್ಕೆ ಯಾವ ಮುಸ್ಲಿಂ ಹೆಣ್ಣು ಮಗಳು ಅಮಿತ್ ಶಾ ಅವರಿಗೆ ಅರ್ಜಿ ಸಲ್ಲಿಸಿದ್ದರು’ ಎಂದು ಪ್ರಶ್ನಿಸಿದರು.

‘ಈ ರೀತಿಯ ವಿಷಯಗಳಿಗೆ ಸಂಸತ್ತಿನ ಸಮಯ ಹಾಳು ಮಾಡಲಾಗಿದೆ. ಇದರ ಬದಲು ಜಿಡಿಪಿ ಹೆಚ್ಚಳಕ್ಕೆ ಏನು ಮಾಡಬೇಕು, ಆರ್ಥಿಕತೆ ಬಲಪಡಿಸಲು ಯಾವ ಕ್ರಮಕೈಗೊಳ್ಳಬೇಕು ಎಂಬುದರ ಬಗ್ಗೆ ಆಲೋಚನೆ ಮಾಡಬಹುದಿತ್ತು’ ಎಂದರು.

‘ಪೌರತ್ವ ಕಾಯ್ದೆಯಿಂದ ಮುಸ್ಲಿಮರಿಗೆ ಮಾತ್ರ ತೊಂದರೆಯಾಗುವುದಿಲ್ಲ. ಎಲ್ಲರೂ ಸಮಸ್ಯೆಗೆ ಸಿಲುಕಬೇಕಾಗಿದೆ. ಹೀಗಾಗಿ, ಯುವಜನತೆ ಬೀದಿಗೆ ಇಳಿದಿದ್ದಾರೆ. ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಈ ಮಟ್ಟದಲ್ಲಿ ಬೀದಿಗೆ ಇಳಿದಿರುವುದು ಇದೇ ಮೊದಲು’ ಎಂದು ಹೇಳಿದರು.

‘ಕರ್ನಾಟಕದ ಏಕೀಕರಣ ಚಳವಳಿಯಲ್ಲಿ ಕಮ್ಯುನಿಸ್ಟರ ಪಾತ್ರ’ ಎಂಬ ವಿಷಯದ ಕುರಿತು ಲೇಖಕ ಸಿದ್ದನಗೌಡ ಪಾಟೀಲ ಉಪನ್ಯಾಸ ನೀಡಿದರು. ಇದೇ ವೇಳೆ ‘ಬಿ.ವಿ. ಕಕ್ಕಿಲ್ಲಾಯ ಇನ್ ಪಾರ್ಲಿಮೆಂಟ್’, ‘ಮನುಷ್ಯನ ಮಹಾಯಾನ’, ‘ಕರ್ನಾಟಕ ವಿಧಾನಸಭೆಯಲ್ಲಿ ಕಕ್ಕಿಲ್ಲಾಯರು’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು