ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ: ಡಿಜಿ–ಐಜಿಪಿಗೆ ದೂರು

Published 6 ಸೆಪ್ಟೆಂಬರ್ 2023, 22:36 IST
Last Updated 6 ಸೆಪ್ಟೆಂಬರ್ 2023, 22:36 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ಬೆಂಬಲಿಗರಿಗೆ ಕಿರುಕುಳ ನೀಡುತ್ತಿರುವ ಪೊಲೀಸರು, ಸುಖಾಸುಮ್ಮನೇ ಪ್ರಕರಣಗಳನ್ನು ದಾಖಲಿಸಿ ದೌರ್ಜನ್ಯ ಎಸಗುತ್ತಿದ್ದಾರೆ’ ಎಂದು ಆರೋಪಿಸಿ ಬಿಜೆಪಿ ರಾಜ್ಯ ಘಟಕದ ಪದಾಧಿಕಾರಿಗಳು, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿ–ಐಜಿಪಿ) ಬುಧವಾರ ದೂರು ಸಲ್ಲಿಸಿದ್ದಾರೆ.

ನೃಪತುಂಗ ರಸ್ತೆಯಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಡಿಜಿ–ಐಜಿಪಿ ಅಲೋಕ್ ಮೋಹನ್ ಅವರನ್ನು ಭೇಟಿಯಾದ ಪದಾಧಿಕಾರಿಗಳು, ‘ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೇ, ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

‘ಕಾಂಗ್ರೆಸ್ ಸರ್ಕಾರ, ಸೇಡಿನ ರಾಜಕಾರಣ ಮಾಡುತ್ತಿದೆ. ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರ ಮೇಲೆ ಪ್ರಕರಣ ದಾಖಲಿಸುವಂತೆ ಪೊಲೀಸರ ಮೇಲೆ ಒತ್ತಡ ಹೇರುತ್ತಿದೆ. ಇದೇ ಕಾರಣಕ್ಕೆ ಪೊಲೀಸರು, ಕಾರ್ಯಕರ್ತರು ಹಾಗೂ ಬೆಂಬಲಿಗರ ಮೇಲೆ ಪ್ರಕರಣ ದಾಖಲಿಸುತ್ತಿದ್ದಾರೆ. ರಾತ್ರೋರಾತ್ರಿ ಮನೆಗಳಿಗೆ ನುಗ್ಗಿ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ’ ಎಂದು ಪದಾಧಿಕಾರಿಗಳು ದೂರಿದ್ದಾರೆ.

‘ಸಾಮಾಜಿಕ ಮಾಧ್ಯಮಗಳಲ್ಲಿರುವ ಪೋಸ್ಟ್‌ಗಳನ್ನು ತಪ್ಪಾಗಿ ಗ್ರಹಿಸಿ, ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಲಾಗುತ್ತಿದೆ. ಇದಕ್ಕಾಗಿ ಪೊಲೀಸರು ಹಾಗೂ ಸಿಸಿಬಿಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.

‘ರಾಜಕೀಯ ಪಕ್ಷವಾಗಿರುವ ಬಿಜೆಪಿ, ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುತ್ತಿದೆ. ಕಾರ್ಯಕರ್ತರು ಹಾಗೂ ಬೆಂಬಲಿಗರ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಯಬೇಕು. ಇಲ್ಲದಿದ್ದರೆ, ರಾಜ್ಯದಾದ್ಯಂತ ಗಂಭೀರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದ್ದಾರೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್, ಕಾರ್ಯದರ್ಶಿ ಜಗದೀಶ್ ಹಿರೇಮನಿ, ಶಾಸಕ ರವಿ ಸುಬ್ರಮಣ್ಯ, ಮುಖಂಡರಾದ ವಿವೇಕ್‌ ಸುಬ್ಬಾರೆಡ್ಡಿ, ಭಾಸ್ಕರ್‌ ರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT