ಬೆಂಗಳೂರು: ವ್ಯಕ್ತಿಯೊಬ್ಬರನ್ನು ಅಕ್ರಮವಾಗಿ ಬಂಧಿಸಿ 36 ಗಂಟೆ ಠಾಣೆಯಲ್ಲಿರಿಸಿ ಕರ್ತವ್ಯ ಲೋಪ ಎಸಗಿದ್ದ ಆರೋಪದಡಿ ಪುಲಿಕೇಶಿನಗರ ಠಾಣೆಯ ಪಿಎಸ್‌ಐ ಸೇರಿದಂತೆ ಮೂವರು ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಪಿಎಸ್‌ಐ ರುಮಾನ್ ಪಾಷಾ, ಕಾನ್‌ಸ್ಟೆಬಲ್‌ಗಳಾದ ಲೇಪಾಕ್ಷಪ್ಪ ಹಾಗೂ ಲಕ್ಷ್ಮಣ್ ಅಮಾನತ್ತಾದವರು.
‘ಅಕ್ರಮ ಬಂಧನ ಸಂಬಂಧ ಸಂತ್ರಸ್ತ ಕೊಂಡಪ್ಪ ಎಂಬುವವರು ದೂರು ನೀಡಿದ್ದರು. ಪ್ರಾಥಮಿಕ ತನಿಖೆ ನಡೆಸಿದ್ದ ಪಶ್ಚಿಮ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ ಅವರು ಆರೋಪಿತ ಪೊಲೀಸರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಮೂವರ ವಿರುದ್ಧ ಇಲಾಖೆ ವಿಚಾರಣೆಗೂ ಸೂಚಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಕಮಿಷನ್ ಆಸೆಗೆ ಸಂಧಾನ: ‘ದೂರುದಾರ ಕೊಂಡಪ್ಪ, ರೈಸ್ ಪುಲ್ಲಿಂಗ್ ದಂಧೆಯಲ್ಲಿ ತೊಡಗಿದ್ದರೆಂಬ ಮಾಹಿತಿ ಇದೆ. ವ್ಯಕ್ತಿಯೊಬ್ಬರನ್ನು ವಂಚಿಸಿ ₹ 15 ಲಕ್ಷ ಪಡೆದಿದ್ದರು. ಹಣ ಕಳೆದುಕೊಂಡಿದ್ದ ವ್ಯಕ್ತಿ, ಠಾಣೆ ಮೆಟ್ಟಿಲೇರಿದ್ದರು. ಸಂಧಾನದ ಮೂಲಕ ಹಣ ವಾಪಸು ಕೊಡಿಸುವುದಾಗಿ ಪಿಎಸ್‌ಐ ರುಮಾನ್ ಪಾಷಾ ಹಾಗೂ ಸಿಬ್ಬಂದಿ ಹೇಳಿದ್ದರು. ಅದಕ್ಕಾಗಿ ಕಮಿಷನ್ ನೀಡುವಂತೆ ಬೇಡಿಕೆ ಇರಿಸಿದ್ದರು’ ಎಂದು ಮೂಲಗಳು ತಿಳಿಸಿವೆ.
‘ಕೊಂಡಪ್ಪ ಅವರನ್ನು ಅಕ್ರಮವಾಗಿ ಬಂಧಿಸಿದ್ದ ಪಿಎಸ್‌ಐ, 36 ಗಂಟೆ ಠಾಣೆಯಲ್ಲಿ ಕೂರಿಸಿದ್ದರು. ಪ್ರಕರಣ ದಾಖಲಿಸುವ ಬೆದರಿಕೆಯೊಡ್ಡಿ ಕೊಂಡಪ್ಪ ಅವರಿಂದ
₹ 15 ಲಕ್ಷವನ್ನು ವ್ಯಕ್ತಿಗೆ ವಾಪಸು ಕೊಡಿಸಿದ್ದರು. ಅದರಲ್ಲಿ ಪಿಎಸ್ಐ ಹಾಗೂ ಇತರರು ಕಮಿಷನ್ ಪಡೆದಿರುವ ಆರೋಪವಿದೆ.
ಈ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.