ಭಾನುವಾರ, ಮೇ 9, 2021
24 °C

ಮೂರು ವರ್ಷ ಜೈಲು ಶಿಕ್ಷೆ; ಹೊರಬಂದು ಕಳ್ಳತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಪರಾಧ ಪ್ರಕರಣವೊಂದರಲ್ಲಿ ಮೂರು ವರ್ಷ ಶಿಕ್ಷೆ ಅನುಭವಿಸಿ, ಜೈಲಿನಿಂದ ಹೊರಬಂದು ಕಳ್ಳತನ ಎಸಗುತ್ತಿದ್ದ ಆರೋಪಿ ಪ್ರೇಮ್‌ಕುಮಾರ್‌ನನ್ನು (32) ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕೆಜಿಎಫ್‌ ಅಂಡರ್‌ಸನ್ ಪೇಟೆಯ ಪ್ರೇಮ್‌ಕುಮಾರ್, ಹಲವು ವರ್ಷಗಳಿಂದ ಕೃತ್ಯ ಎಸಗುತ್ತಿದ್ದ. ಆತನಿಂದ ₹ 14.50 ಲಕ್ಷ ಮೌಲ್ಯದ 320 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಕಬ್ಬಿಣದ ರಾಡ್‌ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ನಂದಿನಿ ಲೇಔಟ್‌ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ಕೃಷ್ಣಪ್ಪ ಎಂಬುವರು 2020ರ ಡಿಸೆಂಬರ್ 2ರಂದು ಕುಟುಂಬ ಸಮೇತ ಊರಿಗೆ ಹೋಗಿದ್ದರು. ಡಿ. 12ರಂದು ಅವರಿಗೆ ಕರೆ ಮಾಡಿದ್ದ ಪಕ್ಕದ ಮನೆಯವರು, ‘ಯಾರೋ ನಿಮ್ಮ ಮನೆಯ ಬಾಗಿಲು ಮೀಟಿದ್ದು, ಕಳ್ಳತನ ನಡೆದಿರಬಹುದು’ ಎಂದು ಮಾಹಿತಿ ನೀಡಿದ್ದರು. ಮನೆಗೆ ಬಂದಿದ್ದ ಕೃಷ್ಣಪ್ಪ, ಪರಿಶೀಲನೆ ನಡೆಸಿದಾಗ ಕಳ್ಳತನವಾಗಿದ್ದು ಗೊತ್ತಾಗಿತ್ತು. ಬಳಿಕ ಠಾಣೆಗೆ ದೂರು ನೀಡಿದ್ದರು’ ಎಂದೂ ತಿಳಿಸಿದರು.

‘ಕೃತ್ಯ ಎಸಗಿ ಪರಾರಿಯಾಗುತ್ತಿದ್ದ ಆರೋಪಿಯ ಮುಖಚಹರೆ ಮನೆ ಸಮೀಪದಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆತನಿಗಾಗಿ ಹುಡುಕಾಟ ನಡೆದಿತ್ತು. ಏಪ್ರಿಲ್ 20ರಂದು ಬೆಳಿಗ್ಗೆ ಶಂಕರನಗರದಲ್ಲಿ ಆರೋಪಿ ಸಿಕ್ಕಿಬಿದ್ದಿದ್ದ’ ಎಂದೂ ಹೇಳಿದರು.

‘ರಾಮಮೂರ್ತಿನಗರ, ವಿದ್ಯಾರಣ್ಯಪುರ, ಮಾರಿಕುಪ್ಪಂ ಠಾಣೆ ವ್ಯಾಪ್ತಿಯಲ್ಲಿ 8 ಕಡೆ ಆರೋಪಿ ಕೃತ್ಯ ಎಸಗಿದ್ದ. 2014ರಲ್ಲಿ ಆತನನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದರು. ಅದೇ ಪ್ರಕರಣದಲ್ಲಿ ಆತನಿಗೆ ಮೂರು ವರ್ಷ ಜೈಲು ಶಿಕ್ಷೆ ಆಗಿತ್ತು. ಜೈಲಿನಿಂದ ಹೊರಬಂದ ಆತ, ಪುನಃ ಕೃತ್ಯ ಎಸಗಲಾರಂಭಿಸಿದ್ದ.’

‘ಬೀಗ ಹಾಕಿರುತ್ತಿದ್ದ ಹಾಗೂ ಅಂಗಳದಲ್ಲಿ ಕಸ ಬಿದ್ದಿರುತ್ತಿದ್ದ ಮನೆಗಳನ್ನು ಆರೋಪಿ ಗುರುತಿಸುತ್ತಿದ್ದ. ಅಂಥ ಮನೆಗಳಿಗೆ ಹೋಗಿ, ಕಬ್ಬಿಣದ ರಾಡ್‌ನಿಂದ ಬಾಗಿಲು ಮೀಟಿ ಒಳ ನುಗ್ಗುತ್ತಿದ್ದ. ನಗದು, ಚಿನ್ನಾಭರಣ ಹಾಗೂ ಇತರೆ ವಸ್ತುಗಳನ್ನು ಕದ್ದುಕೊಂಡು ಪರಾರಿಯಾಗುತ್ತಿದ್ದ’ ಎಂದೂ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.